ಯುವತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಅರೋಪಿ, ಅತ್ಯಾಚಾರ ನಡೆದಿರುವ ಬಗ್ಗೆ ಮೌಖಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ ವೈದ್ಯರು

ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಹೊರಟ ಕ್ಯಾಬ್ ಕೇವಲ 20 ನಿಮಿಷದಲ್ಲಿ ಮುರುಗೇಶ್ ಪಾಳ್ಯದಲ್ಲಿರುವ ಯುವತಿ ಮನೆ ಬಳಿಗೆ ಬಂದಿದೆ. ಆಗ ನಿದ್ದೆ ಮಂಪರಿನಲ್ಲಿದ ಯುವತಿಯನ್ನ ಎದ್ದೇಳಿಸಲು ಕ್ಯಾಬ್ ಡ್ರೈವರ್ ಹಿಂದಿನ ಡೋರ್ ತೆಗೆದಿದ್ದಾನೆ. ಈ ವೇಳೆ ಯುವತಿ ಮೇಲೆರಗಿ ಅತ್ಯಾಚಾರವೆಸೆಗಿ ಅಟ್ಟಹಾಸ ಮೆರೆದಿದ್ದಾನೆ.

ಯುವತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಅರೋಪಿ, ಅತ್ಯಾಚಾರ ನಡೆದಿರುವ ಬಗ್ಗೆ ಮೌಖಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ ವೈದ್ಯರು
ಪ್ರಾತಿನಿಧಿಕ ಚಿತ್ರ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಲ ಸೃಷ್ಟಿಸಿದ್ದ ರೇಪ್ ಆರೋಪಿ ಕ್ಯಾಬ್ ಡ್ರೈವರ್‌ಗೆ ಖಾಕಿ ಫುಲ್ ಗ್ರಿಲ್ ಮಾಡ್ತಿದೆ. ಆದ್ರೆ ಆರೋಪಿ ಮಾತ್ರ ನಾನೇನು ಮಾಡಿಲ್ಲ. ನಾನು ಅಂಥವನಲ್ಲ ಅಂತಾ ಹೇಳ್ತಿದ್ದಾನೆ. ಸದ್ಯ ಸಂತ್ರಸ್ತ ಯುವತಿ, ಆರೋಪಿ ಇಬ್ಬರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಅತ್ಯಾಚಾರ ನಡೆದಿರುವುದಾಗಿ ಪೊಲೀಸರಿಗೆ ಮೌಖಿಕವಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ರೀಗ ಯುವತಿ ಮೆಡಿಕಲ್ ರಿಪೋರ್ಟ್ ಮೇಲೇ ಕೇಸ್ ನಿಂತಿದ್ದು ಕುತೂಹಲ ಕೆರಳಿಸಿದೆ. ಇಂದು ಜಡ್ಜ್ ಮುಂದೆ ಆರೋಪಿ ದೇವರಾಜ್‌ನನ್ನ ಪೊಲೀಸರು ಹಾಜರುಪಡಿಸಲಿದ್ದಾರೆ.

ನಿದ್ದೆ ಮಂಪರಿನಲ್ಲಿದ್ದ ಯುವತಿ ಮೇಲೆರಗಿದ್ನಾ ಕ್ಯಾಬ್ ಡ್ರೈವರ್?
ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಬೆಚ್ಚಿಬಿದ್ದಿದೆ. ಮನೆಗೆ ಹೊರಟಿದ್ದ ಯುವತಿಯನ್ನು ಕ್ಯಾಬ್ ಚಾಲಕ ಪಿಶಾಚಿಯಂತೆ ಕಾಡಿದ್ದಾನೆ. ಒಂಟಿ ಹೆಣ್ಣನ್ನು ಸೇಫಾಗಿ ಮನೆಗೆ ತಲುಪಿಸಬೇಕಿದ್ದ ಚಾಲಕ ಕಿರಾತಕನಾಗಿಬಿಟ್ಟಿದ್ದ. ಹೀಗಂತ ಕ್ಯಾಬ್ ಡ್ರೈವರ್ ವಿರುದ್ಧ ಯುವತಿ ಕೊಟ್ಟ ದೂರು ಸಂಚಲನ ಸೃಷ್ಟಿಸಿದೆ.

ಸಮಯ ನಿನ್ನೆ ಬೆಳಗಿನ ಜಾವ 3.20, ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಯುವತಿ ಪಿಕಪ್‌
ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಮುರುಗೇಶ್ ಪಾಳ್ಯಕ್ಕೆ ತೆರಳಲು ಯುವತಿ ಉಬರ್ ಕ್ಯಾಬ್ ಬುಕ್ ಮಾಡಿದ್ಲು. ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ದೇವರಾಜ್ ಹಸೆರಿನ ಕ್ಯಾಬ್ ಡ್ರೈವರ್ ಪಿಕಪ್ ಪಾಯಿಂಟ್‌ಗೆ ಬಂದು ಯುವತಿಯನ್ನ ಕರೆದೊಯ್ದಿದ್ದಾನೆ.

ಸಮಯ ನಿನ್ನೆ ಬೆಳಗಿನ ಜಾವ 3.40, ಡ್ರಾಪ್ ಪಾಯಿಂಟ್‌ ಬಳಿ ಅತ್ಯಾಚಾರವೆಸೆಗಿದ ಡ್ರೈವರ್
ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಹೊರಟ ಕ್ಯಾಬ್ ಕೇವಲ 20 ನಿಮಿಷದಲ್ಲಿ ಮುರುಗೇಶ್ ಪಾಳ್ಯದಲ್ಲಿರುವ ಯುವತಿ ಮನೆ ಬಳಿಗೆ ಬಂದಿದೆ. ಆಗ ನಿದ್ದೆ ಮಂಪರಿನಲ್ಲಿದ ಯುವತಿಯನ್ನ ಎದ್ದೇಳಿಸಲು ಕ್ಯಾಬ್ ಡ್ರೈವರ್ ಹಿಂದಿನ ಡೋರ್ ತೆಗೆದಿದ್ದಾನೆ. ಈ ವೇಳೆ ಯುವತಿ ಮೇಲೆರಗಿ ಅತ್ಯಾಚಾರವೆಸೆಗಿ ಅಟ್ಟಹಾಸ ಮೆರೆದಿದ್ದಾನೆ. ಆಗ ಎಚ್ಚೆತ್ತ ಯುವತಿ ಕಿರುಚಾಡಿದ್ದಾಳೆ. ಗಾಬರಿಯಿಂದ ಬಟ್ಟೆ ಸರಿ ಮಾಡ್ಕೊಂಡು ಕಾರಿನಿಂದ ಇಳಿದು ತನ್ನ ಮನೆಯತ್ತ ದೌಡಾಯಿಸಿದ್ದಾಳೆ.

ಸಮಯ ನಿನ್ನೆ ಬೆಳಗಿನ ಜಾವ 4.45, ಪೊಲೀಸರಿಗೆ ಮಾಹಿತಿ ನೀಡಿದ ಯುವತಿ
ಕಾಮುಕ ಡ್ರೈವರ್‌ನಿಂದ ತಪ್ಪಿಸಿಕೊಂಡು ಮನೆಗೆ ಬಂದ ಯುವತಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡಿದ್ದಾಳೆ. ಬಳಿಕ 112 ಕರೆ ಮಾಡಿ ನಡೆದ ಘಟನೆಯನ್ನೆಲ್ಲಾ ಪೊಲೀಸರಿಗೆ ವಿವರಿಸಿದ್ದಾಳೆ. ಕೂಡಲೇ ಯುವತಿ ಮನೆಗೆ ಬಂದ ಪೊಲೀಸರು ಕಂಪ್ಲೀಟ್ ಮಾಹಿತಿ ಪಡೆದಿದ್ದಾರೆ. ನಂತರ ಮಹಿಳಾ ಅಧಿಕಾರಿಯನ್ನ ಕರೆಸಿ ಯುವತಿಯನ್ನ ಜೀವನ್ ಭೀಮಾನಗರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯುವತಿಯಿಂದ ದೂರು ಬರೆಸಿಕೊಂಡು ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮನೆಗೆ ಕಳಿಸಿದ್ದಾರೆ.

ಸಮಯ ನಿನ್ನೆ ಬೆಳಗ್ಗೆ 7 ಗಂಟೆ, ಕ್ಯಾಬ್ ಡ್ರೈವರ್ ವಿರುದ್ಧ ಎಫ್‌ಐಆರ್ ದಾಖಲು
ಯುವತಿಯಿಂದ ದೂರು ಪಡೆದ ಪೊಲೀಸರು ಆರೋಪಿ ಕ್ಯಾಬ್ ಡ್ರೈವರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನಂತರ 3 ತಂಡಗಳನ್ನು ರಚಿಸಿ ಆರೋಪಿಗಾಗಿ ಬಲೆ ಬೀಸಿದ್ರು. ಆದ್ರೆ ಆರೋಪಿ ಮೊಬೈಲ್ ಯುವತಿ ಬಳಿಯೇ ಇತ್ತು. ಯಾಕಂದ್ರೆ ಘಟನೆ ನಡೆದ ಬಳಿಕ ಗಾಬರಿಗೊಂಡಿದ್ದ ಯುವತಿ, ಸೀಟ್‌ ಮೇಲಿದ್ದ ತನ್ನ ವಸ್ತುಗಳ ಜೊತೆಗೆ ಕ್ಯಾಬ್ ಡ್ರೈವರ್ ಮೊಬೈಲ್ ಅನ್ನು ಸಹ ತನ್ನ ಬ್ಯಾಗ್‌ನಲ್ಲಿ ಹಾಕಿಕೊಂಡು ಬಂದಿದ್ಲು. ಹಾಗಾಗಿ ಆರೋಪಿ ಪತ್ತೆ ಹಚ್ಚೋದು ಪೊಲೀಸರಿಗೆ ಕಷ್ಟವಾಗಿತ್ತು. ಕೂಡಲೇ ಖಾಕಿ ಟೀಮ್ ಕ್ಯಾಬ್ ನಂಬರ್ ಪಡೆದು, ಉಬರ್ ಕಂಪನಿಯ ಸಹಾಯ ಪಡೆದು ಆರೋಪಿ ಮನೆಯ ವಿಳಾಸ ಪತ್ತೆ ಹಚ್ಚಿತ್ತು.

ಸಮಯ ನಿನ್ನೆ ಬೆಳಗ್ಗೆ 11 ಗಂಟೆ, ಪೊಲೀಸರ ಕೈಗೆ ಸಿಕ್ಕಿಬಿದ್ದ ಕಾಮುಕ ಡ್ರೈವರ್
ಬೆಂಗಳೂರು ಹೊರವಲಯದ ಹಳ್ಳಿಯಲ್ಲಿ ಕ್ಯಾಬ್ ಡ್ರೈವರ್ ದೇವರಾಜ್ ಇರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಕಾರಿನ ಜೊತೆಗೆ ಆರೋಪಿಯನ್ನ ವಶಕ್ಕೆ ಪಡೆದು ಠಾಣೆಗೆ ಕರೆತಂದು ಫುಲ್ ಗ್ರಿಲ್ ಮಾಡಿದ್ದಾರೆ.

ಸಮಯ ನಿನ್ನೆ ಮಧ್ಯಾಹ್ನ 2 ಗಂಟೆ, ವಿಚಾರಣೆ ಬಳಿಕ ಕ್ಯಾಬ್ ಡ್ರೈವರ್ ಅರೆಸ್ಟ್
ವಿಚಾರಣೆ ವೇಳೆ ಆರೋಪಿ ತನ್ನದೇನು ತಪ್ಪಿಲ್ಲ. ನಾನೇನು ಮಾಡಿಲ್ಲ ಅಂತಾನೆ ವಾದಿಸುತ್ತಿದ್ದ. ಆದ್ರೆ ಪೊಲೀಸರು ಬೆಂಡೆತ್ತುತ್ತಿದ್ದಂತೆ ಸತ್ಯ ಒಪ್ಪಿಕೊಂಡಿದ್ದಾನೆ. ತಾನು ಮಾಡಿದ ನೀಚ ಕೆಲಸದ ಬಗ್ಗೆ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.

ರೇಪ್ ಬಳಿಕ ಸಾರಿ ಕೇಳಿದ್ದನಂತೆ ಕ್ಯಾಬ್ ಡ್ರೈವರ್
ಕ್ಯಾಬ್ ಯುವತಿ ಮನೆ ಹತ್ತಿರ ಬರ್ತಿದ್ದಂತೆ ಡ್ರೈವರ್ ನೀಚ ಕೃತ್ಯ ಎಸಗಿದ್ದ. ಈ ವೇಳೆ ಕಾರಿನಿಂದ ಎದ್ನೋ ಬಿದ್ನೋ ಅಂತಾ ಹೊರಬಂದ ಯುವತಿ ಬಳಿ ಕ್ಯಾಬ್ ಚಾಲಕ ಡ್ರೈವರ್ ಸಾರಿ ಕೇಳಿದ್ದನಂತೆ. ಘಟನೆಯಿಂದ ಗಾಬರಿಗೊಂಡಿದ್ದ ಯುವತಿ ಕಿರುಚಾಡಿಕೊಂಡು ಮನೆ ಸೇರಿದ್ದಾಳೆ.

ಅತ್ಯಾಚಾರ ಬಳಿಕ ಮತ್ತೆ ಸ್ಪಾಟ್‌ಗೆ ಬಂದಿದ್ದ ಕ್ಯಾಬ್ ಡ್ರೈವರ್
ಅತ್ಯಾಚಾರ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದ ಕ್ಯಾಬ್ ಡ್ರೈವರ್, ಐದು ನಿಮಿಷಗಳ ಬಳಿಕ ಮತ್ತದ್ದೇ ಜಾಗಕ್ಕೆ ಬಂದಿದ್ದಾನೆ. ಯಾಕಂದ್ರೆ ಉಬರ್ ಟ್ರಿಪ್ ಕಂಪ್ಲೀಟ್ ಆಗಿರಲಿಲ್ಲ. ಹಾಗಾಗಿ ಆತ ಮೊಬೈಲ್‌ಗಾಗಿ ಕಾರಿನಲ್ಲಿ ತಡಕಾಡಿದ್ದಾನೆ. ಕೊನೆಗೆ ಘಟನೆ ನಡೆದ ಸ್ಥಳದಲ್ಲೇ ಇರಬಹುದೆಂದು ಬಂದಿದ್ದಾನೆ. ಆದ್ರೆ ಯುವತಿ ಗಾಬರಿಯಲ್ಲಿ ಹಿಂದಿನ ಸೀಟಿನಲ್ಲಿದ್ದ ಈತನ ಮೊಬೈಲನ್ನ ಸಹ ತೆಗೆದುಕೊಂಡು ಹೋಗಿದ್ಲು.

ಕ್ಯಾಬ್ ಡ್ರೈವರ್‌ ಮೊಬೈಲ್‌ನಲ್ಲಿತ್ತು ಯುವತಿಯೊಂದಿಗಿನ ಸೆಲ್ಫಿ
ಅಂದಹಾಗೆ ಕ್ಯಾಬ್ ಡ್ರಾಪ್ ಪಾಯಿಂಟ್‌ಗೆ ಬರ್ತಿದ್ದಂತೆ ಯುವತಿಯನ್ನ ಎದ್ದೇಳಿಸಲು ಹಿಂಬದಿ ಡೋರ್ ತೆಗೆದಿದ್ದಾನೆ. ಈ ವೇಳೆ ಕ್ಯಾಬ್ ಡ್ರೈವರ್ ಯುವತಿಯೊಂದಿಗೆ ಕೆಲ ಸೆಲ್ಫಿಗಳನ್ನ ತೆಗೆದುಕೊಂಡಿರುವುದು ಮೊಬೈಲ್ ಪರಿಶೀಲನೆ ವೇಳೆ ಪತ್ತೆಯಾಗಿದೆ.

ಅತ್ಯಾಚಾರವಾಗಿರೋ ಬಗ್ಗೆ ವೈದ್ಯರಿಂದ ಮೌಖಿಕ ಮಾಹಿತಿ
ದೂರಿನ ಬಳಿಕ ಯುವತಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಆಕೆ ಧರಿಸಿದ್ದ ಬಟ್ಟೆಯನ್ನ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇನ್ನು ಆರೋಪಿ ಕೂಡ ಅತ್ಯಾಚಾರದ ವೇಳೆ ಧರಿಸಿದ್ದ ಬಟ್ಟೆಯಲ್ಲೇ ಸಿಕ್ಕಿಬಿದಿದ್ದ. ಹಾಗಾಗಿ ಈತನ ಬಟ್ಟೆಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಸದ್ಯ ತಪಾಸಣೆ ಮಾಡಿರುವ ವೈದ್ಯರು ಅತ್ಯಾಚಾರವಾಗಿರೋ ಬಗ್ಗೆ ಮೌಖಿಕವಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇಂದು ಮೆಡಿಕಲ್ ರಿಪೋರ್ಟ್ ಬರಲಿದ್ದು ಸತ್ಯ ಬಯಲಾಗಿದೆ.

ಅತ್ಯಾಚಾರ ಆರೋಪಿ ಇಂದು ಕೋರ್ಟ್‌ಗೆ ಹಾಜರ್
ಅಂದಹಾಗೆ ಬಂಧಿತ ಆರೋಪಿ ದೇವರಾಜ್ ಆಂಧ್ರಪ್ರದೇಶ ಮೂಲದವನಾಗಿದ್ದು, ಎರಡು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಕ್ಯಾಬ್ ಚಲಾಯಿಸ್ತಿದ್ದನಂತೆ. ಸದ್ಯ ಕ್ಯಾಬ್ ಡ್ರೈವರ್ ದೇವರಾಜ್ ವಿರುದ್ಧ ರೇಪ್ ಕೇಸ್ ದಾಖಲಿಸಿರೋ ಪೊಲೀಸರು ಇಂದು ಕೋರ್ಟ್‌ಗೆ ಹಾಜರುಪಡಿಸಿಲಿದ್ದಾರೆ. ವಿಚಾರಣೆಗಾಗಿ ಮತ್ತೆ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ. ಅಷ್ಟೇ ಅಲ್ಲ ಈ ಹಿಂದೆಯೂ ಇದೇ ರೀತಿ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಹೀಗಾಗಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪಾನಮತ್ತ ಯುವತಿ ಮೇಲೆ ಕ್ಯಾಬ್​ ಚಾಲಕನಿಂದ ಅತ್ಯಾಚಾರ ಆರೋಪ; ಕ್ಯಾಬ್ ಚಾಲಕನ ಬಂಧನ

Read Full Article

Click on your DTH Provider to Add TV9 Kannada