
ಬೆಂಗಳೂರು, ಅಕ್ಟೋಬರ್ 30: ಆಕೆ ಕೇರ್ ಟೇಕರ್ ಆಗಿ ಮನೆಗೆ ಬಂದಿದ್ದಳು. 15 ವರ್ಷ ಎಲ್ಲರ ವಿಶ್ವಾಸ ಗಳಿಸಿದ್ದಳು. ವಿಶ್ವಾಸಕ್ಕೆ ಬೆಲೆ ಕೊಟ್ಟ ಒಡತಿ ಕೋಟಿ ಕೋಟಿ ಬೆಲೆಯ ಮನೆಯನ್ನೇ ಕೆಲಸದಾಕೆಗೆ ವಿಲ್ ಮಾಡಿದ್ದರು. ಅದಕ್ಕೆ ಬೆಲೆ ಕೊಡದ ಯುವತಿ (girl) ಆನ್‌ಲೈನ್ ಬೆಟ್ಟಿಂಗ್ ಹುಚ್ವಿಗಾಗಿ ತಿಜೋರಿಯಲ್ಲಿದ್ದ ಚಿನ್ನಕ್ಕೆ ಕನ್ನ (theft) ಹಾಕಿದ್ದ ಘಟನೆ ನಗರದಲ್ಲಿ ನಡೆದಿದೆ. ಸದ್ಯ ಜೆಪಿ ನಗರ ಪೊಲೀಸರು ಆರೋಪಿ ಮಂಗಳನ್ನು ಬಂಧಿಸಿದ್ದಾರೆ. ಆಕೆಯ ಬಳಿಯಿದ್ದ 50 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿಯನ್ನು ಸೀಜ್ ಮಾಡಿದ್ದಾರೆ.
15 ವರ್ಷದ ಹಿಂದೆ ಜೆಪಿ ನಗರದಲ್ಲಿರುವ 58 ವರ್ಷದ ಆಶಾ ಜಾಧವ್ ಎಂಬುವರ ಮನೆಗೆ ಮಂಗಳ ಕೇರ್ ಟೇಕರ್ ಆಗಿ ಬಂದಿದ್ದಳು. ಹೀಗೆ ಬಂದವಳು ಸರಿಯಾಗಿ ಕೆಲಸ ಮಾಡಿಕೊಂಡಿದ್ದಿದ್ದರೆ, ಅದೇ ಮನೆಯ ಒಡತಿ ಆಗಿರುತ್ತಿದ್ದಳು. ಆದರೆ ಆನ್‌ಲೈನ್ ಬೆಟ್ಟಿಂಗ್, ಪಾರ್ಟಿ, ಪಬ್ಬು, ಬಾಯ್ ಫ್ರೆಂಡ್ ಹುಚ್ಚು. ಕೋಟಿ ಕೋಟಿ ಆಸ್ತಿ ಕೈ ತಪ್ಪಿ ಬೀದಿಗೆ ಬರುವಂತೆ ಮಾಡಿದೆ. ಅಲ್ಲದೇ ನಂಬಿಕೆ ದ್ರೋಹ ಬಗೆದು ಆರೋಪಿ ಸ್ಥಾನದಲ್ಲಿ ನಿಂತಿದ್ದಾಳೆ.
ಆಶಾ ಜಾಧವ್ ಪತಿ ಹಾಗೂ ತಾಯಿ ಜೊತೆಗೆ ಜೆಪಿ ನಗರದಲ್ಲಿ ವಾಸವಿದ್ದರು. ದಂಪತಿಗೆ ಕೋಟಿ ಕೋಟಿ ಮೌಲ್ಯದ ಆಸ್ತಿ ಇದ್ದು ಮಕ್ಕಳಿರಲಿಲ್ಲ. ಪತಿ 25 ವರ್ಷದ ಹಿಂದೆಯೇ ಮೃತಪಟ್ಟಿದ್ದರು. ತಾಯಿ ಜೊತೆಗೆ ವಾಸವಿದ್ದ ಇವರಿಗೆ ಆರೈಕೆ ಮಾಡಲು 15 ವರ್ಷದ ಹಿಂದೆ ಮಂಗಳ ಆಗಮಿಸಿದ್ದಳು.
ಇದನ್ನೂ ಓದಿ: ಅಮೆಜಾನ್ನಲ್ಲಿ ಬುಕ್ ಮಾಡಿದ್ದು 1.85 ಲಕ್ಷ ರೂ.ಮೊಬೈಲ್: ಪಾರ್ಸಲ್ ಬಂದಿದ್ದು ಟೈಲ್ಸ್ ಕಲ್ಲು
ಕೇರ್ ಟೇಕರ್ ಆಗಿ ಕೆಲಸಕ್ಕೆ ಬಂದಿದ್ದ ಈಕೆ 10 ವರ್ಷ ಅನಾರೋಗ್ಯ ಪೀಡಿತ ಆಶಾ ಜಾಧವ್ ತಾಯಿಯ ಆರೈಕೆ ಮಾಡಿದ್ದಳು. ಇದು ಮಂಗಳ ಮೇಲೆ ಆಶಾ ಜಾಧವ್ಗೆ ವಿಶ್ವಾಸ ಮೂಡುವಂತೆ ಮಾಡಿತ್ತು. ಆಕೆಯನ್ನ ತನ್ನ ಮಗಳಂತೆಯೇ ನೋಡಿಕೊಂಡಿದ್ದರು. ಆಕೆಯ ಪ್ರತಿ ಹುಟ್ಟುಹಬ್ಬವನ್ನು ಒಂದೊಂದು ದೇಶಕ್ಕೆ ಕರೆದುಕೊಂಡು ಹೋಗಿ ಆಚರಣೆ ಮಾಡುತ್ತಿದ್ದರು. ಅಷ್ಟೇ ಅಲ್ಲ ಜೆಪಿ ನಗರದಲ್ಲಿರುವ ಒಂದೂವರೆ ಕೋಟಿ ರೂ ಮೌಲ್ಯದ ಒಂದು ಮನೆಯನ್ನು ಮಂಗಳ ಹೆಸರಿಗೆ ಬರೆದು ಕೊಟ್ಟಿದ್ದರು. ಆದರೆ ಆಕೆಯ ಮತ್ತೊಂದು ಮುಖ ಮನೆ ಒಡತಿಗೆ ಗೊತ್ತಾಗಲೇ ಇಲ್ಲ.
ಆನ್‌ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದಿದ್ದ ಮಂಗಳ, ಎಲ್ಲಾ ಹಣವನ್ನು ಅಲ್ಲಿಯೇ ಕಳೆದಿದ್ದಳು. ಎಷ್ಟರ ಮಟ್ಟಿಗೆ ಅಂದರೆ ಮನೆಯನ್ನೇ ಮಾರಾಟ ಮಾಡುವಷ್ಟು. ಅಷ್ಟೇ ಅಲ್ಲಾ ಅದೇ ಆನ್‌ಲೈನ್ ಬೆಟ್ಟಿಂಗ್ನಲ್ಲಿ ಮುಳುಗಿ 40 ಲಕ್ಷ ರೂ. ಸಾಲವನ್ನು ಮಾಡಿಕೊಂಡಿದ್ದಳು. ಎಲ್ಲಾ ವಿಚಾರ ಗೊತ್ತಿದ್ದು, ಆಗಿದ್ದಾಯ್ತು ಅಂತಾ ಆಶಾ 40 ಲಕ್ಷ ರೂ. ಸಾಲ ತೀರಿಸಿದ್ದರು. ಅಷ್ಟೇ ಆಗಿದ್ದರೂ ಪರವಾಗಿಲ್ಲ ಸದ್ಯ ತಾನಿರುವ 5 ಕೋಟಿ ರೂ. ಬೆಲೆ ಬಾಳುವ ಮನೆಯನ್ನು ಮಂಗಳ ಹೆಸರಿಗೆ ವಿಲ್ ಮಾಡಿದ್ದರು. ಆದರೆ ಆಕೆ ತನ್ನ ಕೆಟ್ಟ ಚಟದಿಂದ ಅನ್ನ ಹಾಕಿದ ಮನೆಗೆ ಕನ್ನ ಹಾಕಿದ್ದಾಳೆ.
ಆಶಾ ಜಾಧವ್ ಅವರ ಅಪಾರ ಪ್ರೀತಿ ಮತ್ತು ಉದಾರತೆಯನ್ನು ಮಂಗಳ ಅರ್ಥಮಾಡಿಕೊಳ್ಳಲಿಲ್ಲ. ಮತ್ತದೇ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು, ಮನೆಯಲ್ಲಿದ್ದ ಚಿನ್ನಾಭರಣಗಳಿಗೆ ಕನ್ನ ಹಾಕಲು ನಿರ್ಧರಿಸಿದ್ದಳು. ಬೀರುವಿನಲ್ಲಿದ್ದ ಚಿನ್ನವನ್ನು ಮೂಲ ಕೀ ಬಳಸಿ ಕದ್ದು, ನಂತರ ಕೀಯನ್ನು ಯಾರ ಗಮನಕ್ಕೂ ಬಾರದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾಳೆ. ಕೆಲ ದಿನಗಳ ಕಾಲ ಆಶಾ, ಕೀ ಕಳೆದುಹೋಗಿದೆ ಎಂದು ಭಾವಿಸಿ ಸುಮ್ಮನಾಗಿದ್ದರು. ದೀಪಾವಳಿ ಹಬ್ಬಕ್ಕೆ ಚಿನ್ನ ಹಾಕಿಕೊಳ್ಳಲು ನಕಲಿ ಕೀ ಬಳಸಿ ಬೀರು ತೆಗೆಸಿದಾಗ, 450 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಚಿನ್ನ ಕಳ್ಳತನದ ಬಗ್ಗೆ ಆಶಾ ಜಾಧವ್ ಅಪರಿಚಿತರ ವಿರುದ್ಧ ದೂರು ನೀಡಿದ್ದರು. ಆದರೆ ಪೊಲೀಸರಿಗೆ ಮಂಗಳ ಮೇಲೆ ಅನುಮಾನವಿತ್ತು. ಆಶಾ ಜಾಧವ್ ಇದನ್ನು ಒಪ್ಪಲೇ ಇಲ್ಲ. ಅವಳು ಅಂತಹವಳಲ್ಲ, ಆಕೆಯ ಮೇಲೆ ಅನುಮಾನ ಪಡಬೇಡಿ ಎಂದು ಪೊಲೀಸರನ್ನು ಕೇಳಿಕೊಂಡಿದ್ದರು. ಆದರೆ ಜೆಪಿ ನಗರ ಪೊಲೀಸರು ಮಂಗಳ ಅನ್ನು ಸಿಡಿಆರ್ ಪರಿಶೀಲಿಸಿದಾಗ, ಚಿನ್ನ ಅಡಮಾನ ಇಟ್ಟಿದ್ದಕ್ಕೆ ಸಂಬಂಧಿಸಿದ ಮೆಸೇಜ್‌ಗಳು ಪತ್ತೆಯಾಗಿವೆ. ತಕ್ಷಣವೇ ಮಂಗಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ವೃದ್ಧಾಪ್ಯದಲ್ಲಿ ಮಹಿಳೆಯರ ಚಪಲ: ಬೆಂಗಳೂರಲ್ಲಿ ವ್ಯಕ್ತಿ ಕಳೆದುಕೊಂಡಿದ್ದು ಲಕ್ಷ ಲಕ್ಷ ಹಣ
ಮಂಗಳ ಅನ್ನು ಬಂಧಿಸಲು ಮುಂದಾದಾಗಲೂ ಆಶಾ ಜಾಧವ್, ಚಿನ್ನ ಸಿಕ್ಕಿದೆಯಲ್ಲಾ, ಪಾಪ ಅವಳ ಪಾಡಿಗೆ ಬದುಕಿಕೊಳ್ಳಲಿ ಬಿಟ್ಟುಬಿಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರಂತೆ. ಆದರೆ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಮಂಗಳನನ್ನು ಬಂಧಿಸಿದ್ದಾರೆ.
ಸದ್ಯ ಆಶಾ ಜಾಧವ್ ಮಂಗಳ ಹೆಸರಿಗೆ ಮಾಡಿದ್ದ ವಿಲ್ ವಾಪಸ್ ಮಾಡಿಕೊಂಡಿದ್ದು, ಆಕೆಗೆ ಒಳ್ಳೆಯ ಹುಡುಗನನ್ನು ನೋಡಿ ತಾವೇ ಮದುವೆ ಮಾಡಬೇಕೆಂಬ ಕಂಡ ಕನಸು ನುಚ್ಚು ನೂರಾಗಿದೆ. ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಲಿಯಾದ ಮಂಗಳ, ತನ್ನ ದುರಾಸೆಯಿಂದ ತಾನೇ ತನ್ನ ಭವಿಷ್ಯಕ್ಕೆ ಹಳ್ಳ ತೋಡಿಕೊಂಡಿದ್ದಾಳೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.