AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ನಲ್ಲಿ ನವೆಂಬರ್ ಕೌತುಕ: ರಾಜಣ್ಣ ನಿವಾಸದಲ್ಲಿ ಸಿಎಂಗೆ ಔತಣಕೂಟ, ಸಿದ್ದರಾಮಯ್ಯ ಪಟ್ಟ ಉಳಿಸಲು ಬೆಂಬಲಿಗರ ಆಟ

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆ ವಿಚಾರ ಕುತೂಹಲ ಮೂಡಿಸಿದೆ. ನವೆಂಬರ್‌ನಲ್ಲಿ ಏನಾಗುತ್ತದೆ ಎಂಬ ಚರ್ಚೆ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಕೆಎನ್ ರಾಜಣ್ಣ ತುಮಕೂರಿನ ನಿವಾಸದಲ್ಲಿ ಸಿಎಂಗೆ ಔತಣಕೂಟ ಏರ್ಪಡಿಸಿರುವ ಬೆನ್ನಲ್ಲೇ ಚರ್ಚೆಗಳು ಹೆಚ್ಚಿವೆ. ಸಿದ್ದರಾಮಯ್ಯ ಬೆಂಬಲಿಗರು, ಅಹಿಂದ ನಾಯಕರು ಪಟ್ಟ ಉಳಿಸಲು ರಣತಂತ್ರ ಹೆಣೆಯುತ್ತಿದ್ದಾರೆ. ಈ ಮಧ್ಯೆ, ಸಚಿವ ಸ್ಥಾನ ಉಳಿಸಿಕೊಳ್ಳಲು ಕೆಲ ಸಚಿವರು ದೆಹಲಿಗೆ ತೆರಳಿ ಹೈಕಮಾಂಡ್ ಓಲೈಕೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್​ನಲ್ಲಿ ನವೆಂಬರ್ ಕೌತುಕ: ರಾಜಣ್ಣ ನಿವಾಸದಲ್ಲಿ ಸಿಎಂಗೆ ಔತಣಕೂಟ, ಸಿದ್ದರಾಮಯ್ಯ ಪಟ್ಟ ಉಳಿಸಲು ಬೆಂಬಲಿಗರ ಆಟ
ರಾಜ್ಯ ಕಾಂಗ್ರೆಸ್​​ನಲ್ಲಿ ನವೆಂಬರ್ ಕುರ್ಚಿ ಕೌತುಕ
ಹರೀಶ್ ಜಿ.ಆರ್​.
| Edited By: |

Updated on: Oct 31, 2025 | 7:26 AM

Share

ಬೆಂಗಳೂರು, ಅಕ್ಟೋಬರ್ 31: ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯೋ, ಸಚಿವ ಸಂಪುಟ ಪುನಾರಚನೆಯಾಗಲಿದೆಯೋ? ಏನಾಗಲಿದೆ ಎಂಬ ಅಂದಾಜು ಯಾರಿಗೂ ಸಿಗುತ್ತಿಲ್ಲ. ಈಮಧ್ಯೆ, ಸಿದ್ದರಾಮಯ್ಯ (Siddaramaiah) ಆಪ್ತ ಕೆಎನ್ ರಾಜಣ್ಣ (KN Rajanna) ತುಮಕೂರಿನ ನಿವಾಸದಲ್ಲಿ ಸಿಎಂಗೆ ಔತಣಕೂಟ ಏರ್ಪಡಿಸಿರುವುದು ಮತ್ತು ದಲಿತ ನಾಯಕರಾದ ಡಾ.ಜಿ. ಪರಮೇಶ್ವರ್ ಮತ್ತು ಡಾ. ಹೆಚ್.ಸಿ. ಮಹದೇವಪ್ಪ ರಹಸ್ಯ ಅವರ ಸಭೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ಪಟ್ಟ ಉಳಿಸಿಕೊಳ್ಳಲು ಅಹಿಂದ ಅಸ್ತ್ರ ಹೂಡಲಾಗಿದೆ ಎಂಬ ಚರ್ಚೆಗಳ ಮಧ್ಯೆ, ಸಿಎಂ ಬದಲಾವಣೆ ಆದರೆ ದಲಿತರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಒತ್ತಡ ಹೇರುವ ಬಗ್ಗೆಯೂ ದಲಿತ ಸಚಿವರು ಚರ್ಚಿಸಿದ್ದಾರೆ.

ಸಿಎಂ ರಾಜಣ್ಣ ನಿವಾಸಕ್ಕೆ ಊಟಕ್ಕೆ ಹೋಗುತ್ತಿರುವುದಕ್ಕೆ ಮತ್ತು ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜಣ್ಣ ಮನೆಗೆ ಸಿಎಂ ಸಿದ್ದರಾಮಯ್ಯ ಊಟಕ್ಕೆ ಹೋಗುವುದರಲ್ಲಿ ವಿಶೇಷ ಏನಿದೆ? ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪದೇ ಪದೇ ಕೇಳಿದರೆ ನಾವು ಏನು ಉತ್ತರ ಕೊಡುವುದು? ಯಾವುದನ್ನೂ ನಾವು ನಿರ್ಧಾರ ಮಾಡಲು ಆಗುವುದಿಲ್ಲ. ಸಂಪುಟ ಪುನನಾರಚನೆ ವಿಚಾರ ನನ್ನ ವ್ಯಾಪ್ತಿಗೆ ಬರುವುದೇ ಇಲ್ಲ ಎಂದಿದ್ದಾರೆ.

ಔತಣಕೂಟ ಯಾವುದರೂ ಇಲ್ಲ ಕಣ್ರೀ, ಅವರ ಮನೆ ಹೈವೇ ಪಕ್ಕದಲ್ಲಿಯೇ ಇದೆ. ಪ್ರತಿಸಲ ಊಟಕ್ಕೆ ಕರೆಯುತ್ತಾರೆ. ಅದೇ ರೀತಿ ಈ ಸಲವೂ ಅವರು ಕರೆದಿದ್ದಾರೆ. ಅದಕ್ಕೆ ನಾವು ಬರುತ್ತೇವೆ ಎಂದಿದ್ದೇವೆ. ಸಹಜವಾಗಿ ಊಟಕ್ಕೆ ಕರೆದಿದ್ದಾರೆ, ಅದಕ್ಕೆ ಎಲ್ಲರೂ ಹೋಗುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ಸಚಿವ ಸ್ಥಾನ ಉಳಿಸಿಕೊಳ್ಳಲು ದೆಹಲಿ ಸರ್ಕಸ್!

ನವೆಂಬರ್‌ನಲ್ಲಿ ಸಂಪುಟ ಪುನಾರಚನೆ ಆಗಲಿದೆ ಎಂಬ ಚರ್ಚೆಗಳ ಹಿನ್ನೆಲೆಯಲ್ಲಿ ಕೆಲವು ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಹೀಗಾಗಿ, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಓಲೈಕೆಗೆ ಮುಂದಾಗಿದ್ದಾರೆ. ದೆಹಲಿಗೆ ಹೋಗಿ ಬಂದಿದ್ದ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಹೋಗಿದ್ದೆವು. ಹಲವಾರು ಬಾರಿ ದೆಹಲಿ ಭೇಟಿ ನೀಡಿದ್ದೇವೆ, ಆದರೆ ಈ ಸಲ ಸುದ್ದಿ ಆಗಿದೆ. ಶೇ 95 ಶಾಸಕರು ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ಸಿಎಂ ಇದ್ದಾರೆ. ಅವರು ಇರುವಾಗ ಮತ್ತೊಂದು ಸಿಎಂ, ಅಧಿಕಾರ ಹಂಚಿಕೆ ವಿಚಾರ ಅನಾವಶ್ಯಕ ಎಂದಿದ್ದಾರೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಆ ಪ್ರಶ್ನೆ ಇಲ್ಲ. ಯಾವ ಕ್ರಾಂತಿ ಕೂಡಾ ಇಲ್ಲ. ಎಲ್ಲಾ ಶಾಸಕರು ಹೈ ಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ಇದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದ ಯತ್ನಾಳ್

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕುರ್ಚಿ ಕಿತ್ತಾಟದ ವಿಚಾರಕ್ಕೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಟ್ವಿಸ್ಟ್ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲು ಕಾಯುತ್ತಿದ್ದಾರೆ‌. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ನಾಯಕರ ಮುಂದೆ ಕಣ್ಣೀರು ಹಾಕಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಪದೆ ಪದೆ ಭೇಟಿ ಮಾಡುತ್ತಾ ಇದ್ದಾರೆ. ಇತ್ತ ಡಿಕೆ ಶಿವಕುಮಾರ್ ಹೋಮ, ಹವನ ಮಾಡುತ್ತಾ ಇದ್ದಾರೆ. ಡಿಕೆ ಶಿವಕುಮಾರ್ ಹತಾಶರಾಗಿದ್ದಾರೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯರನ್ನೇ 5 ವರ್ಷ ಸಿಎಂ ಎಂದು ಘೋಷಿಸಿ: ಅಹಿಂದ ಸಂಘಟನೆಗಳಿಂದ ರಾಹುಲ್ ಗಾಂಧಿಗೆ ಪತ್ರ ಅಭಿಯಾನ

ಒಟ್ಟಾರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆ ವಿಚಾರ ನವೆಂಬರ್‌ನಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ