
ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರು ಮೂಲದ ಸಂಸ್ಥೆಯೊಂದು ನೇಮಕಾತಿಯಲ್ಲಿ ಉತ್ತರ ಭಾರತದ ನಿರ್ದಿಷ್ಟ ರಾಜ್ಯಗಳ ಅಭ್ಯರ್ಥಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ‘A1 Sports World’ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಕಾರ್ತಿಕ್ ಎಸ್‌ಜಿ ಅವರ ಈ ನಿರ್ಧಾರ ಸದ್ಯ ಚರ್ಚೆಗೆ ಕಾರಣವಾಗಿದೆ.
ಈ ಕುರಿತಾಗಿ ಕಾರ್ತಿಕ್ ಎಸ್‌ಜಿ ಅವರು ಈ ಕುರಿತಾಗಿ ಟ್ವೀಟ್ ಮಾಡಿದ್ದು, ‘ಸುದೀರ್ಘ ಚರ್ಚೆ ಬಳಿಕ ನಮ್ಮ ಸಂಸ್ಥೆಯಲ್ಲಿ ಉತ್ತರ ಭಾರತದ ನಾಲ್ಕು ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶ ಮೂಲದ ಯಾವುದೇ ಪುರುಷ ಅಭ್ಯರ್ಥಿಗಳನ್ನು ಇನ್ನು ಮುಂದೆ ಕೆಲಸಕ್ಕೆ ನೇಮಿಸಿಕೊಳ್ಳದಿರಲು ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಈ ನಿರ್ಧಾರಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದು, ‘ಈಗಾಗಲೇ ತಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜಸ್ಥಾನದ ಮಹಿಳಾ ಉದ್ಯೋಗಿಯೊಬ್ಬರು ಈ ನಿರ್ಧಾರಕ್ಕೆ ಶೇಕಡಾ 100ರಷ್ಟು ಬೆಂಬಲ ಸೂಚಿಸಿದ್ದಾರೆ’ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಸಿಇಒ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇವರ ನಿರ್ಧಾರವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಈ ರೀತಿಯ ಕ್ರಮಕ್ಕೆ ಮತ್ತು ತಾರತಮ್ಯ ಧೋರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಬೆನ್ನಲ್ಲೇ ಕೆಲ ಕಮೆಂಟ್ಗಳಿಗೆ ಪ್ರತಿಕ್ರಿಯಿಸಿರುವ ಕಾರ್ತಿಕ್, ತಮ್ಮ ಸಂಸ್ಥೆಯ ನಿರ್ಧಾರಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ‘ನಾವು ಮಕ್ಕಳೊಂದಿಗೆ ಕೆಲಸ ಮಾಡುತ್ತೇವೆ, ಹೀಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಅಲ್ಲದೆ, ಆ ಭಾಗಗಳಿಂದ ಬರುವ ಯುವಕರಿಗೆ ಜೀವನದ ಮೌಲ್ಯದ ಬಗ್ಗೆ ಅರಿವಿರುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:04 pm, Thu, 24 September 26