
ಬೆಂಗಳೂರು, ಮೇ 29: ರಾಜಧಾನಿ ಬೆಂಗಳೂರಿನ (Bengaluru) ಟ್ರಾಫಿಕ್ ಸಮಸ್ಯೆ ನಿವಾರಸುವ ನಿಟ್ಟಿನಲ್ಲಿನ ಪ್ರಮುಖ ಯೋಜನೆಗಳ ಪೈಕಿ ನಮ್ಮ ಮೆಟ್ರೋ ಕೂಡ ಒಂದು. ಹಸಿರು, ನೇರಳೆ ಮತ್ತು ಹಳದಿ ಸೇರಿ ಒಟ್ಟು ಮೂರು ಮಾರ್ಗಗಳಲ್ಲಿ ಈಗಾಗಲೇ ಮೆಟ್ರೋ ರೈಲುಗಳು ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. ಹೀಗಿದ್ದರೂ ಪ್ರಯಾಣಿಕರು ಮಾತ್ರ ಬಿಎಂಆರ್‌ಸಿಎಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಕಾರಣವಾಗಿರೋದು ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲುಗಳ ನಡುವೆ ಇರುವ ಸಮಯದ ಅಂತರ.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರಿಂದ 2025ರ ಆಗಸ್ಟ್ 10ರಂದು ನಮ್ಮ ಮೆಟ್ರೋದ ಯೆಲ್ಲೋ ಮಾರ್ಗಕ್ಕೆ ಚಾಲನೆ ಸಿಕ್ಕಿದ್ದು, ಆಗಸ್ಟ್ 11ರಿಂದ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಿತ್ತು. ಆದರೆ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಶುರುವಾಗಿ 9 ತಿಂಗಳುಗಳೇ ಕಳೆದಿದ್ದರೂ ರೈಲುಗಳಿಗಾಗಿ ಪ್ರಯಾಣಿಕರ ಪರದಾಟ ಮಾತ್ರ ತಪ್ಪಿಲ್ಲ. ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಹೆಚ್ಚು ಜನಸಂದಣಿ ಇರುವ ಸಮಯದ ವೇಳೆ 3-4 ನಿಮಿಷಕ್ಕೊಂದರಂತೆ ರೈಲು ಸಂಚರಿಸುತ್ತವೆ. ಹಾಗೆಯೇ ಉಳಿದ ಸಮದಲ್ಲಿ 5 ನಿಮಿಷಗಳಿಗೊಂದು ಮೆಟ್ರೋ ಓಡಾಡಲಿದೆ. ಹೀಗಿರುವಾಗ ಯೆಲ್ಲೋ ಲೈನ್ನಲ್ಲಿ ಮಾತ್ರ ಪೀಕ್ ಅವರ್ನಲ್ಲಿ 9 ನಿಮಿಷಕ್ಕೊಂದು ಹಾಗೆಯೇ ಉಳಿದ ಸಮಯದಲ್ಲಿ 14 ನಿಮಿಷಗಳಿಗೊಂದು ರೈಲು ಸಂಚಾರ ಯಾಕೆಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಗ್ರೀನ್ ಲೈನ್ ಮೂಲಕ ಆರ್. ವಿ. ರೋಡ್ಗೆ ಬರುವ ಪ್ರಯಾಣಿಕರು, ಯೆಲ್ಲೋ ಲೈನ್ನ ರೈಲಿಗಾಗಿ ಇಲ್ಲಿ ಸುಮಾರು 10 ರಿಂದ 14 ನಿಮಿಷಗಳ ಕಾಲ ಕಾಯಬೇಕಾದ ಸ್ಥಿತಿ ಇದೆ ಎಂದು ಅಲವತ್ತುಕೊಂಡಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರೇ ಗಮನಿಸಿ!; ಭಾನುವಾರ ನೇರಳೆ ಮಾರ್ಗದ ಈ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ!
ಹಳದಿ ಮಾರ್ಗದ ಮೆಟ್ರೋ ರೈಲುಗಳ ಕಾರ್ಯಾಚರಣೆ ಶುರುವಾಗಿ 9 ತಿಂಗಳುಗಳೇ ಕಳೆದರೂ ರೈಲುಗಳ ಸಂಖ್ಯೆ ಮಾತ್ರ ಹೆಚ್ಚಾಗಿಲ್ಲ. ಈ ಲೈನ್ ಆರಂಭದ ವೇಳೆ 3 ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದರೆ ಈಗ ಅವುಗಳ ಸಂಖ್ಯೆ 8ಕ್ಕೆ ಏರಿವೆ. 9 ಮತ್ತು 10ನೇ ರೈಲು ಅದಾಗಲೇ ಬೆಂಗಳೂರಿಗೆ ಆಗಮಿಸಿದ್ದರೂ ಅವುಗಳಿನ್ನೂ ವಾಣಿಜ್ಯ ಸಂಚಾರಕ್ಕೆ ಲಭ್ಯವಾಗಿಲ್ಲ. ಅವುಗಳ ಪರೀಕ್ಷೆ ಇನ್ನೂ ಮುಗಿಯದ ಕಾರಣ ಮೆಟ್ರೋ ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಹೀಗಾಗಿ ಶೀಘ್ರ ಆ ಎರಡು ರೈಲುಗಳ ಪರೀಕ್ಷೆ ಮುಗಿಸಿ ಅವುಗಳನ್ನು ವಾಣಿಜ್ಯ ಸಂಚಾರಕ್ಕೆ ಲಭ್ಯ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:58 pm, Fri, 29 May 26