ಬೆಂಗಳೂರು: ಬೆಡ್ ಬ್ಲಾಕಿಂಗ್ ವಿಚಾರ ಇನ್ನೊಮ್ಮೆ ಮುನ್ನೆಲೆಗೆ ಬಂದಿದೆ. ‘ಬೆಡ್ ಬ್ಲಾಕಿಂಗ್ ವಿಚಾರವಾಗಿ ನಾನು ಪಕ್ಷದ ಹಿರಿಯರಿಗೆ ತಿಳಿಸಿದ್ದೇನೆ. ಮೌಖಿಕವಾಗಿ ಒಂದೆ ಅಲ್ಲದೇ ಲಿಖಿತವಾಗಿಯೂ ಹಿರಿಯರಿಗೆ ದೂರು ನೀಡಿದ್ದೇನೆ. ಹಿರಿಯರು ಕೂಡ ಕರೆದು ಮಾತನಾಡುವ ಭರವಸೆ ನೀಡಿದ್ದಾರೆ. ಬೆಡ್ ಬ್ಲಾಕಿಂಗ್ ವಿಚಾರವಾಗಿ ಆಗಿರುವ ಘಟನೆಯನ್ನು ಸಂಪೂರ್ಣವಾಗಿ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ನಾನೇ ಪತ್ರಿಕಾಗೋಷ್ಠಿ ಮಾಡಿ ಎಲ್ಲವನ್ನು ತಿಳಿಸುತ್ತೇನೆ’ ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ.
ಈ ಮಧ್ಯೆ ಸ್ವಪಕ್ಷೀಯರ ವಿರುದ್ದವೇ ಶಾಸಕ ಸತೀಶ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರದ ಸಚಿವರ ವಿರುದ್ದ ಘಟನೆ ಹಿಂದೆ ನಮ್ಮವರದ್ದೇ ಷಡ್ಯಂತ್ರ ಇದೆ ಎಂದು ಶಾಸಕ ಸತೀಶ್ ರೆಡ್ಡಿ ಬಿಜೆಪಿ ಹಿರಿಯ ನಾಯಕರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಸ್ವಪಕ್ಷೀಯರ ಕೈವಾಡದ ಬಗ್ಗೆ ದೂರು ನೀಡಿದ್ದು, ಮುಂದಿನ ದಿನಗಳಲ್ಲಿ ದೆಹಲಿಯ ಅಂಗಳಕ್ಕೂ ಈ ದೂರನ್ನು ಒಯ್ಯುವ ತಯಾರಿಯಲ್ಲಿ ಶಾಸಕ ಸತೀಶ್ ರೆಡ್ಡಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆನ್ನಲ್ಲೇ ಶಾಸಕ ಸತೀಶ್ ರೆಡ್ಡಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಘಟನೆ ಹಿಂದೆ ನಮ್ಮವರದ್ದೇ ಷಡ್ಯಂತ್ರ ಇದೆ ಎಂದು ಕೆಲವು ಈಗಾಗಲೇ ದೂರಿದ್ದಾರೆ. 4,500 ಬೆಡ್ ಹಗರಣ ಬಯಲಿಗೆ ಎಳೆದಿದ್ದೇವೆ. ಆದರೆ ಈ ದಂದೆಯನ್ನು ಬಯಲಿಗೆಳೆದ ನಮ್ಮ ಮೇಲೆಯೇ ಆರೋಪ ಮಾಡಿರುವುದು ಬಹಳ ಬೇಸರ ಮೂಡಿಸಿದೆ. ಈ ದಂದೆಯನ್ನು ಬೊಮ್ಮನಹಳ್ಳಿ ಬಾಬು ಮಾಡಿದ್ದಾನೆ ಅಂತಾರೆ. ಆದರೆ ಬಂಧಿತ ಬಾಬು ಜತೆ ನನಗೆ ಸಂಪರ್ಕವೇ ಇಲ್ಲ. ಆತ ಯಾರಿಗೆ ಆಪ್ತ? ನನ್ನ ಜೊತೆ ಕನಿಷ್ಠ ಆರು ತಿಂಗಳ ಹತ್ತಿರ ಇರಬೇಕು ಕನಿಷ್ಠ ಕರೆಯಾದರು ಮಾಡಬೇಕು. ಆತನ ಜತೆ ಎಲ್ಲಿ ಸಂಪರ್ಕ ಇದೆ ನನಗೆ? ಎಂದು ಶಾಸಕ ಸತೀಶ್ ರೆಡ್ಡಿ ಪ್ರಶ್ನಿಸಿದ್ದಾರೆ.
ಸಂಬಂಧ ಇಲ್ಲದೇ ಇರದ ವ್ಯಕ್ತಿಗಳನ್ನು ಜೊತೆ ನನ್ನ ಹೆಸರ ಜತೆ ಜೋಡಿಸಿದ್ದಾರೆ. ನಾವು 4,500 ಬೆಡ್ ವಿಚಾರ ಎತ್ತಿದ್ದು ಸರ್ಕಾರದಲ್ಲಿ ಕೆಲವರಿಗೆ ಮುಜುಗರ ಆಗಿದೆ. ಕೆಲ ಅಧಿಕಾರಿಗಳು ಮಿಸ್ ಗೈಡ್ ಮಾಡಿ ಕೋಟ್ಯಾಂತರ ಅವ್ಯವಹಾರ ಮಾಡಿದ್ದಾರೆ. ಅಂಥವರ ವಿರುದ್ಧ ಕ್ರಮ ಆಗಬೇಕು. ನನ್ನ ಅಭಿವೃದ್ದಿ ಸಹಿಸಲು ಸಾಧ್ಯವಾಗದೇ ಈ ರೀತಿ ಮಾಡಿದ್ದಾರೆ. ಅವರಿಗೆ ಭಗವಂತ ಅವರಿಗೆ ಒಳ್ಳೇದು ಮಾಡಲಿ. ನಾನು 20 ವರ್ಷದ ರಾಜಕಾರಣದಲ್ಲಿ ತಪ್ಪು ಮಾಡಿಲ್ಲ ಎಂದು ಶಾಸಕ ಸತೀಶ್ ರೆಡ್ಡಿ ಟಿವಿ9ಗೆ ಹೇಳಿಕೊಂಡಿದ್ದಾರೆ.
ಸಿಎಂ ಯಡಿಯೂರಪ್ಪ ವಿರುದ್ದ ಟ್ವೀಟ್ ವಿಚಾರವಾಗಿಯೂ ಮಾತನಾಡಿದ ಶಾಸಕ ಸತೀಶ್ ರೆಡ್ಡಿ, ಈ ಹಿಂದೆ ನಾವು ಸಿಎಂ ಯಡಿಯೂರಪ್ಪ ವಿರುದ್ದ ಮಾಡಿಲ್ಲ. ಅರ್ಹತೆ ಇರುವವರನ್ನು ಸಚಿವರನ್ನಾಗಿ ಮಾಡಿದ್ದಿರಾ? ಎಂದು ಕೇಳಿದ್ದೇ ಅಷ್ಟೇ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆದ ಬೆಡ್ ಬ್ಲಾಕಿಂಗ್ ದಂಧೆಯ ಪಿನ್ ಟು ಪಿನ್ ಮಾಹಿತಿ.. ವಿಚಾರಣೆಯಲ್ಲಿ ಬಯಲಾಯ್ತು ಮತ್ತಷ್ಟು ಕಟು ಸತ್ಯಗಳು
ಕಾಂಗ್ರೆಸ್ನ ಕೆಲ ಬುದ್ಧಿಜೀವಿಗಳು ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ: ಸಂಸದ ತೇಜಸ್ವಿ ಸೂರ್ಯ
(Bengaluru Covid bed blocking scam MLA Sathish Reddy complaint against BJP senior leaders about the issue)
Published On - 3:03 pm, Tue, 22 June 21