ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಚೋರರ ಹಾವಳಿ (Cyber Thieves Menace In Bengaluru) ಹೆಚ್ಚಾಗುತ್ತಿದ್ದು, ಒಂದೇ ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ ಈ ಎಲ್ಲಾ ಪ್ರಕರಣಗಳ ತನಿಖೆಗೆ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಉಪ ವಿಭಾಗದ ಮಟ್ಟದಲ್ಲಿ ಸೆನ್ ಠಾಣೆಗಳನ್ನ ತೆರಯಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಸರಿಯಾದ ತನಿಖೆ ನಡೆಯದೆ ದಾಖಲಾದ ಅಷ್ಟೂ ಪ್ರಕರಣಗಳು ಅತಂತ್ರವಾಗುತ್ತಿವೆ. ಹೌದು, ವರ್ಷದ ಮೊದಲ ತಿಂಗಳಲ್ಲೇ (ಜನವರಿ) ಬೆಂಗಳೂರಿನಲ್ಲಿ ಸೈಬರ್ ಖದೀಮರು ಹೆಚ್ಚು ಕೈಚಳಕ ತೋರಿದ್ದು, ವಿವಿಧ ಠಾಣೆಗಳಲ್ಲಿ ಒಟ್ಟು 1228 ಸೈಬರ್ ವಂಚನೆ ಪ್ರಕರಣಗಳು (Cyber Cases In Bengaluru) ದಾಖಲಾಗಿವೆ. ಕಳೆದ ವರ್ಷವೂ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಈಗ ವರ್ಷದ ಮೊದಲ ತಿಂಗಳಲ್ಲೇ ಸೈಬರ್ ಚೋರರು ಆರ್ಭಟಿಸಲು ಆರಂಭಿಸಿದ್ದಾರೆ.
ಇದನ್ನೂ ಓದಿ: Crime News: ಚಲಿಸುವ ಬಸ್ನಿಂದ ಬಿದ್ದು, ಚಕ್ರದಡಿ ಸಿಲುಕಿ ಅಪ್ಪಚ್ಚಿಯಾದ ಕಾಲೇಜು ವಿದ್ಯಾರ್ಥಿ
ಕೇವಲ ಒಂದು ತಿಂಗಳಿನಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಇದರ ತನಿಖೆ ನಡೆಸಲು ಸೆನ್ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಮಾತ್ರವಲ್ಲದೆ ಉಪ ವಿಭಾಗದ ಮಟ್ಟದಲ್ಲಿ ಸೆನ್ ಠಾಣೆಗಳನ್ನ ಸರ್ಕಾರ ತೆರಯಲು ಇನ್ನೂ ಮುಂದಾಗಿಲ್ಲ. ಇದರಿಂದಾಗಿ ಸಮರ್ಪಕ ತನಿಖೆಯಾಗದೆ ಸೈಬರ್ ಕ್ರೈಂ ಪ್ರಕರಣಗಳು ಆತಂತ್ರವಾಗುತ್ತಿವೆ. ಸದ್ಯ ವಿಭಾಗೀಯ ಮಟ್ಟದಲ್ಲಿ ಮಾತ್ರ ಸೆನ್ ಪೊಲೀಸ್ ಠಾಣೆಗಳಿವೆ. ಇದನ್ನ ಉಪ ವಿಭಾಗದ ಮಟ್ಟದಲ್ಲಿ ತೆರಯುವ ಮೂಲಕ ಶೀಘ್ರ ತನಿಖೆಗೆ ಮುಂದಾಗಬೇಕಿದೆ. ಆದರೂ ರಾಜ್ಯ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.
ಅಗ್ನೇಯ ವಿಭಾಗ ಸೆನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿದ್ದು, ಒಂದು ತಿಂಗಳಲ್ಲಿ 223 ಪ್ರಕರಣಗಳು ದಾಖಲಾಗಿವೆ. ನಂತರ, ಉತ್ತರ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ 215 ಪ್ರಕರಣಗಳು, ವೈಟ್ ಫೀಲ್ಡ್ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ 160 ಪ್ರಕರಣಗಳು, ಈಶಾನ್ಯ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ 155 ಪ್ರಕರಣಗಳು, ದಕ್ಷಿಣ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ 145 ಪ್ರಕರಣಗಳು, ಪೂರ್ವ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ 122 ಪ್ರಕರಣಗಳು, ಪಶ್ಚಿಮ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ 118 ಪ್ರಕರಣಗಳು ಹಾಗೂ ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ 90 ಪ್ರಕರಣಗಳು ದಾಖಲಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Tue, 7 February 23