ಹೊಸ ವರ್ಷ ಹಿನ್ನೆಲೆ ಬೆಂಗಳೂರಲ್ಲಿ ಭರ್ಜರಿ ಡ್ರಗ್ಸ್ ಬೇಟೆ; 2 ಪ್ರತ್ಯೇಕ ಪ್ರಕರಣಗಳಲ್ಲಿ 28 ಕೋಟಿ ರೂ.ಮೌಲ್ಯದ ಗಾಂಜಾ ಸೀಜ್

ಹೊಸ ವರ್ಷದ ಮುನ್ನ ಬೆಂಗಳೂರಲ್ಲಿ ಸಿಸಿಬಿ ಮಾದಕ ವಸ್ತು ನಿಗ್ರಹ ದಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 28 ಕೋಟಿ ರೂ. ಮೌಲ್ಯದ MDMA ಮತ್ತು ಹೈಡ್ರೋಗಾಂಜಾ ವಶಪಡಿಸಿಕೊಂಡಿದೆ. ಈ ವೇಳೆ ಇಬ್ಬರು ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಿದ್ದು, ಚಾಮರಾಜಪೇಟೆಯಲ್ಲಿಯೂ ಡ್ರಗ್ಸ್ ಸೀಜ್ ಆಗಿದೆ. ಹೊಸ ವರ್ಷಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹೊಂಚಿಗೆ ಬ್ರೇಕ್ ಬಿದ್ದಿದೆ.

ಹೊಸ ವರ್ಷ ಹಿನ್ನೆಲೆ ಬೆಂಗಳೂರಲ್ಲಿ ಭರ್ಜರಿ ಡ್ರಗ್ಸ್ ಬೇಟೆ; 2 ಪ್ರತ್ಯೇಕ ಪ್ರಕರಣಗಳಲ್ಲಿ 28 ಕೋಟಿ ರೂ.ಮೌಲ್ಯದ ಗಾಂಜಾ ಸೀಜ್
ಆರೋಪಿಗಳಾದ ಎಮುನಲ್ ಅರೆಂಜಿ ಇಡಿಕೋ ಮತ್ತು ನ್ಯಾನ್ಸಿ

Updated on: Dec 03, 2025 | 12:24 PM

ಬೆಂಗಳೂರು, ಡಿಸೆಂಬರ್ 03: ಹೊಸ ವರ್ಷದ ಸಂಭ್ರಮಕ್ಕೆ ಮುನ್ನ ಬೆಂಗಳೂರಿನಲ್ಲಿ (Bengaluru) ಸಿಸಿಬಿ ಮಾದಕ ವಸ್ತು ನಿಗ್ರಹ ದಳ ಭರ್ಜರಿ ದಾಳಿ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 28 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು (Drugs seized) ವಶಕ್ಕೆ ಪಡೆದಿದೆ. ವಿದೇಶಿ ಮೂಲದ ಇಬ್ಬರು ಪೆಡ್ಲರ್​ಗಳನ್ನು ಬಂಧಿಸಲಾಗಿದ್ದು, ಚಾಮರಾಜಪೇಟೆಯಲ್ಲಿಯೂ 8 ಕೋಟಿ ರೂ. ಮೌಲ್ಯದ ಮಾದಕವಸ್ತು ಸೀಜ್ ಮಾಡಲಾಗಿದೆ.

ವಿದೇಶಿ ಮಹಿಳೆಯ ಮನೆಯಲ್ಲಿ 9 ಕೆ.ಜಿ MDMA ಪತ್ತೆ

ಮೊದಲ ಪ್ರಕರಣದಲ್ಲಿ ಸಂಪಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ತಾಂಜೇನಿಯಾ ಮೂಲದ ನ್ಯಾನ್ಸಿ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಈಕೆಯ ಮನೆಯಲ್ಲಿ ಸಿಕ್ಕ 9 ಕೆ.ಜಿ ಎಂಡಿಎಂಎ ಕ್ರಿಸ್ಟಲ್​ ಅನ್ನು ವಶಕ್ಕೆ ಪಡೆಯಲಾಗಿದೆ.   ಮೂರು ವರ್ಷಗಳ ಹಿಂದೆ ಟೂರಿಸ್ಟ್ ವಿಸಾದಡಿ ಭಾರತಕ್ಕೆ ಬಂದಿದ್ದ ಈಕೆಗೆ ಸಾಥ್ ನೀಡುತ್ತಿದ್ದ ಇನ್ನೊಬ್ಬ ಪೆಡ್ಲರ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ ಬೆಂಗಳೂರಿನಲ್ಲಿ 23 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ; ವಿದೇಶಿ ಪೆಡ್ಲರ್ ಬಂಧನ

ಹೊಸ ವರ್ಷಕ್ಕೆ ಹೆಚ್ಚಿನ ಬೆಲೆಗೆ ಡ್ರಗ್ಸ್ ಮಾರುವ ಪ್ಲಾನ್

ಇನ್ನೊಂದು ಪ್ರಕರಣದಲ್ಲಿ ನೈಜೀರಿಯಾ ಮೂಲದ ಎಮುನಲ್ ಅರೆಂಜಿ ಇಡಿಕೋ ಎಂಬಾತನನ್ನು ಬಂಧಿಸಲಾಗಿದ್ದು, ಈತ ನಾಲ್ಕು ವರ್ಷಗಳ ಹಿಂದೆ ಬ್ಯುಸಿನೆಸ್ ವಿಸಾದಡಿ ಭಾರತಕ್ಕೆ ಬಂದು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ. ಈತನ ಮನೆಯಿಂದ 1 ಕೆ.ಜಿ ಎಂಡಿಎಂಎ ಸೀಜ್ ಆಗಿದ್ದು, ಆರೋಪಿಗಳು ದೆಹಲಿಯಿಂದ ಡ್ರಗ್ ತರಿಸಿ, ಸ್ಥಳೀಯರು, ವಿದ್ಯಾರ್ಥಿಗಳು ಮತ್ತು ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆಂದು ಸಿಸಿಬಿ ತಿಳಿಸಿದೆ. ಹೊಸ ವರ್ಷದ ಸಂದರ್ಭ ಹೆಚ್ಚಿನ ಬೆಲೆ ಪಡೆಯಲು ದೊಡ್ಡ ಮಟ್ಟದ ಡ್ರಗ್ ಪೆಡ್ಲಿಂಗ್ ಪ್ಲಾನ್ ಇದ್ದದ್ದು ತನಿಖೆಯಿಂದ ತಿಳಿದು ಬಂದಿದೆ. ಇದೇ ವೇಳೆ ಚಾಮರಾಜಪೇಟೆ ವಿದೇಶಿ ಪೋಸ್ಟ್ ಆಫೀಸ್‌ನಲ್ಲಿ ನಡೆದ ಪರಿಶೀಲನೆಯಲ್ಲಿ 8 ಕೋಟಿ ರೂ. ಮೌಲ್ಯದ 8 ಕೆ.ಜಿ ಹೈಡ್ರೋಗಾಂಜಾ ಪತ್ತೆಯಾಗಿದ್ದು, ಎಲ್ಲಾ ಪ್ರಕರಣಗಳ ಕುರಿತು ತನಿಖೆ ಮುಂದುವರಿದಿದೆ.

ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.