ಬೆಂಗಳೂರಿನಲ್ಲಿ ಅಗ್ನಿ ದುರಂತ: ಲಾಡ್ಜ್​​ನ ಒಂದೇ ರೂಮಿನಲ್ಲಿದ್ದ ಯುವಕ-ಯುವತಿ ಸಜೀವ ದಹನ

ಬೆಂಗಳೂರಿನ ಯಲಹಂಕದ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಕಟ್ಟಡದಲ್ಲಿದ್ದ ಲಾಡ್ಜ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಗದಗ ಮೂಲದ ಯುವಕ ಮತ್ತು ಹುನಗುಂದ ಮೂಲದ ಯುವತಿ ಸಜೀವ ದಹನವಾಗಿರುವಂತಹ ಘಟನೆ ನಡೆದಿದೆ. ಸದ್ಯ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಅಗ್ನಿ ದುರಂತ: ಲಾಡ್ಜ್​​ನ ಒಂದೇ ರೂಮಿನಲ್ಲಿದ್ದ ಯುವಕ-ಯುವತಿ ಸಜೀವ ದಹನ
ಬೆಂಕಿ ಅನಾಹುತ

Updated on: Oct 09, 2025 | 9:00 PM

ಬೆಂಗಳೂರು, ಅಕ್ಟೋಬರ್​ 09: ಬೆಂಕಿ ಅನಾಹುತದಿಂದ (Fire accident) ಯುವಕ ಮತ್ತು ಯುವತಿ ಸಜೀವ ದಹನವಾಗಿರುವಂತಹ (death) ಘಟನೆ ಬೆಂಗಳೂರಿನ ಯಲಹಂಕದಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಲಾಡ್ಜ್​ನಲ್ಲಿ ನಡೆದಿದೆ. ಗದಗ ಮೂಲದ ಯುವಕ ರಮೇಶ್ ಮತ್ತು ಹುನಗುಂದ ಮೂಲದ ಕಾವೇರಿ ಬಡಿಗೇರ್ ಮೃತರು. ಸದ್ಯ ಇಬ್ಬರ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನಡೆದದ್ದೇನು?

ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಬಿಲ್ಡಿಂಗ್​​ನಲ್ಲಿದ್ದ ಲಾಡ್ಜ್​​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಯುವಕ ಮತ್ತು ಯುವತಿ ಲಾಡ್ಜ್​ನ ಒಂದೇ ರೂಮಿನಲ್ಲಿದ್ದರು. ಲಾಡ್ಜ್​ನ ಬಾತ್​ರೂಂ‌ ಒಳಗಡೆ ಯುವತಿ ಇದ್ದು, ಬಾಗಿಲು ಹಾಕಲಾಗಿತ್ತು. ಹೊಗೆ ಬಂದ ತಕ್ಷಣ ಯುವತಿಯೇ ಲಾಡ್ಜ್​​​ನವರಿಗೆ ಕರೆ ಮಾಡಿದ್ದಳು. ರೂಂ ಕೂಡ ಲಾಕ್ ಆಗಿತ್ತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಬಂದು ಬಾಗಿಲು ಹೊಡೆದು ಒಳಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರು ಮೃತಪಟ್ಟಿದ್ದರು.

ಇದನ್ನೂ ಓದಿ: ಮೂಡಲಗಿ: ಪತ್ನಿ ಕೊಂದು 2 ದಿನ ಶವದೊಂದಿಗೆ ಕಳೆದ ಪತಿ, ಕೊಲೆಗೆ ಅದೇ ಕಾರಣನಾ?

ಮೃತ ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರೆಸ್ಟೋರೆಂಟ್ ಸಮೀಪದ ಬಿಲ್ಡಿಂಗ್ ಸ್ಫಾನಲ್ಲಿ ಯುವತಿ ಕೆಲಸ‌ ಮಾಡುತ್ತಿದ್ದಳು. ರೆಸ್ಟೋರೆಂಟ್​ನ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿ ಮತ್ತು ಗ್ರಾಹಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ರಕ್ಷಣೆ ಕಾರ್ಯ ಮಾಡಲಾಗುತ್ತಿದೆ.

ಡಿಸಿಪಿ ಸಜೀತ್ ಹೇಳಿದ್ದಿಷ್ಟು

ಈ ಬಗ್ಗೆ ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಹೇಳಿಕೆ ನೀಡಿದ್ದು, ಯಲಹಂಕದ ಕಿಚನ್ 6 ರೆಸ್ಟೋರೆಂಟ್​​ನಲ್ಲಿ ಅವಘಡ ಸಂಭವಿಸಿದೆ. ಲಾಡ್ಜ್​​ನ 3ನೇ ಮಹಡಿಯ ರೂಮ್​​ನಲ್ಲಿದ್ದ ರಮೇಶ್ ಮತ್ತು ಕಾವೇರಿ ಬಡಿಗೇರ ಮೃತಪಟ್ಟಿದ್ದಾರೆ. ಆತ್ಮಹತ್ಯೆನಾ ಅಥವಾ ಏನು ಎಂದು ತನಿಖೆ ಮಾಡುತ್ತೇವೆ. ಇಬ್ಬರು ಕಳೆದ 1 ವಾರದಿಂದ ಲಾಡ್ಜ್​ನಲ್ಲಿದ್ದರು ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ ರಮೇಶ್, ಕಾವೇರಿ ನಡುವೆ ಜಗಳವಾಗಿತ್ತು. ಮಧ್ಯಾಹ್ನ ಕಾವೇರಿ ರೂಮ್​ನಲ್ಲಿದ್ದರೆ, ರಮೇಶ್ ಹೊರಹೋಗಿದ್ದ. ರೂಮ್​ಗೆ ಹಿಂದಿರುಗುವಾಗ ಪೆಟ್ರೋಲ್ ತುಂಬಿದ್ದ ಬಾಟಲಿ ತಂದಿದ್ದ. ರೂಮ್​ನಲ್ಲಿ ರಮೇಶ್, ಕಾವೇರಿ ಮತ್ತೆ ಜಗಳವಾಡಿರುವ ಸಾಧ್ಯತೆ ಇದ್ದು, ಜಗಳ ವಿಕೋಪವಾಗಿ ರಮೇಶ್ ಪೆಟ್ರೋಲ್ ಸುರಿದುಕೊಂಡಿದ್ದಾನೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಾವೇರಿ ಬಾತ್​ರೂಮ್​ಗೆ ಓಡಿದ್ದಾಳೆ ಎಂದರು.

ಇದನ್ನೂ ಓದಿ: ಚಡಚಣ SBI ದರೋಡೆ ಕೇಸ್​: 3 ಆರೋಪಿಗಳ ಬಂಧನ; 9 ಕೆ.ಜಿ. ಚಿನ್ನ, 86 ಲಕ್ಷ ರೂ. ನಗದು ರಿಕವರಿ

ಬಾತ್​ರೂಮ್ ಡೋರ್ ಲಾಕ್ ಮಾಡಿಕೊಂಡಿದ್ದ ಕಾವೇರಿ, ತನ್ನ ಸ್ಪಾ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಳು. ಅಷ್ಟೊತ್ತಿಗಾಗಲೇ ಬೆಂಕಿ ಕೆನ್ನಾಲಿಗೆ ಇಡೀ ರೂಮ್​ಗೆ ವ್ಯಾಪಿಸಿತ್ತು. ಬೆಂಕಿ ಜ್ವಾಲೆಯಲ್ಲಿ ಸಿಲುಕಿ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೊಗೆಯಿಂದ ಉಸಿರುಗಟ್ಟಿ ಕಾವೇರಿ ಕೂಡ ಮೃತಪಟ್ಟಿದ್ದಾಳೆ. ಸದ್ಯ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಡಿಸಿಪಿ ವಿ.ಜೆ.ಸಜೀತ್ ಹೇಳಿದ್ದಾರೆ.

ವರದಿ: ಪ್ರದೀಪ್​​ ಚಿಕ್ಕಾಟೆ ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:51 pm, Thu, 9 October 25