ಚಡಚಣ SBI ದರೋಡೆ ಕೇಸ್: 3 ಆರೋಪಿಗಳ ಬಂಧನ; 9 ಕೆ.ಜಿ. ಚಿನ್ನ, 86 ಲಕ್ಷ ರೂ. ನಗದು ರಿಕವರಿ
ಕಳೆದ ಸೆಪ್ಟೆಂಬರ್ 16ರಂದು ಸಂಜೆ 6 ಗಂಟೆ ಸುಮಾರಿಗೆ ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದ್ದ ದರೋಡೆ ಕೇಸ್ ಸಂಬಂಧ ಬಿಹಾರ ಮೂಲದ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ 9 ಕೆ.ಜಿ. ಚಿನ್ನ, 86 ಲಕ್ಷ ರೂ. ನಗದನ್ನು ಪೊಲೀಸರು ರಿಕವರಿ ಮಾಡಿದ್ದಾರೆ.

ವಿಜಯಪುರ, ಅಕ್ಟೋಬರ್ 09: ಚಡಚಣ ಪಟ್ಟಣದಲ್ಲಿ ನಡೆದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಬರಿ (SBI Robery) ಕೇಸ್ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ಸಂಬಂಧ ಬಿಹಾರ ಮೂಲದ ಮೂವರು ಆರೋಪಿ ಬಂಧಿಸಿದ್ದಾರೆ. ಬಿಹಾರ ಮೂಲದ ರಾಕೇಶಕುಮಾರ್ ಸಹಾನಿ (22), ರಾಜಕುಮಾರ್ ಪಾಸ್ವಾನ್ (21) ಮತ್ತು ರಕ್ಷಕಕುಮಾರ್ ಮಾತೋ (21) ಬಂಧಿತ ಆರೋಪಿಗಳಾಗಿದ್ದು, ಬಂಧಿತರು ಬ್ಯಾಂಕ್ ದರೋಡೆ ಮಾಡಿದ್ದ ಆರೋಪಿಗಳಿಗೆ ಗನ್ ಪೂರೈಕೆ ಮಾಡಿದ್ದರು ಎಂಬುದು ಗೊತ್ತಾಗಿದೆ.
ಕಳೆದ ಸೆಪ್ಟೆಂಬರ್ 16ರಂದು ಸಂಜೆ 6 ಗಂಟೆ ಸುಮಾರಿಗೆ ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದರೋಡೆ ನಡೆದಿತ್ತು. ಗನ್ ಸಮೇತ ಬ್ಯಾಂಕಿಗೆ ನುಗ್ಗಿದ್ದ ಮೂವರು ದರೋಡೆಕೋರರು ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ, ಗ್ರಾಹಕರನ್ನ ಕಟ್ಟಿಹಾಕಿ 20 ಕೆ.ಜಿ. ಚಿನ್ನಾಭರಣ, 1.50 ಕೋಟಿ ನಗದು ದೋಚಿ ಪರಾರಿಯಾಗಿದ್ದರು. ಮಹಾರಾಷ್ಟ್ರದ ಮಂಗಳವೇಡ ತಾಲೂಕಿನ ಹುಲಜಂತಿ ಮೂಲಕ ಪರಾರಿಯಾಗುತ್ತಿದ್ದಾಗ ದರೋಡೆಕೋರರ ಕಾರು ಬೈಕ್ ಗೆ ಡಿಕ್ಕಿಯಾಗಿ ಗಲಾಟೆ ನಡೆದಿತ್ತು. ಬಳಿಕ ಖದೀಮರು ಅಲ್ಲಿಯೇ ಕಾರು ಬಿಟ್ಟು ಸ್ಥಳೀಯರನ್ನ ಹೆದರಿಸಿ ಪರಾರಿಯಾಗಿದ್ದರು. ಪ್ರಕರಣದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು, ಈಗ 3 ಆರೋಪಿಗಳನ್ನ ಬಂಧಿಸಿದ್ದಾರೆ. ದರೋಡೆಯಾಗಿದ್ದ 20 ಕೆ.ಜಿ. ಚಿನ್ನಾಭರಣ ಪೈಕಿ 9 ಕೆ.ಜಿ. ಚಿನ್ನ ಹಾಗೂ 1.50 ಕೋಟಿ ನಗದು ಪೈಕಿ 86 ಲಕ್ಷ ನಗದನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ವಿಜಯಪುರ SBI ಬ್ಯಾಂಕ್ ದರೋಡೆ: ಸಿಕ್ಕ ಸಿಕ್ಕಲ್ಲಿ ಹಣ ಎಸೆದು ಹೋದ ದರೋಡೆಕೋರರು
ಇದಲ್ಲದೆ ಕಳೆದ ಮೇ 25ರಂದು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ ಕೆನರಾ ಬ್ಯಾಂಕ್‌ನಲ್ಲಿ 58 ಕೆ.ಜಿ. ಚಿನ್ನಾಭರಣ, 5 ಲಕ್ಷ ರೂಪಾಯಿ ನಗದು ಕಳ್ಳತನ ನಡೆದಿತ್ತು. ಖತರ್ನಾಕ್ ಕಳ್ಳರು ಚಿನ್ನಾಭರಣಗಳನ್ನ ಕರಗಿಸಿ ಗಟ್ಟಿ ಮಾಡಿದ್ದರು. ಆ ಪೈಕಿ ಕೆಲವನ್ನು ಮಾರಿದ್ದರು. ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ಕಳೆದ ತಿಂಗಳು 39 ಕೆ.ಜಿ ಬಂಗಾರದ ಗಟ್ಟಿ ಹಾಗೂ 1.16 ಕೋಟಿ ನಗದನ್ನ ವಶಕ್ಕೆ ಪಡೆದಿದ್ದರು. ಈಗ ಮತ್ತೆ 4.8 ಕೆ.ಜಿ. ಚಿನ್ನದ ಗಟ್ಟಿ ಹಾಗೂ 22 ಲಕ್ಷ ನಗದನ್ನ ಜಪ್ತಿ ಮಾಡಿದ್ದಾರೆ. ಹೀಗಾಗಿ ಬ್ಯಾಂಕ್ನಿಂದ ಕಳುವಾಗಿದ್ದ 58 ಕೆ.ಜಿ. ಚಿನ್ನದ ಪೈಕಿ ಸುಮಾರು 43 ಕೆ.ಜಿ.ಯಷ್ಟು ಚಿನ್ನದ ಗಟ್ಟಿಗಳು ರಿಕವರಿಯಾಗಿವೆ. 1.38 ಕೋಟಿ ನಗದು ವಶ ಪಡಿಸಿಕೊಂಡಂತಾಗಿದೆ. ಪ್ರಕರಣ ಸಂಬಂಧ ಒಟ್ಟು 15 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮುದ್ದೇಬಿಹಾಳ ತಾಲೂಕು ನ್ಯಾಯಾಲಯದ ಜಡ್ಜ್ ನಿವಾಸದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನೂ ಪೊಲೀಸರು ಭೇದಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



