AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರದ ಚಡಚಣದ ಎಸ್​ಬಿಐ ಬ್ಯಾಂಕ್​​ನಲ್ಲಿ ದರೋಡೆ; ಮ್ಯಾನೇಜರನ್ನು ಕಟ್ಟಿಹಾಕಿ 8 ಕೋಟಿ ರೂ., 50 ಕೆಜಿ ಚಿನ್ನ ಕಳವು

ವಿಜಯಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಂದು ಹಾಡಹಗಲೇ ಎಸ್​ಬಿಐ ಬ್ಯಾಂಕ್​ಗೆ ನುಗ್ಗಿದ ಐವರು ದರೋಡೆಕೋರರು ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಯನ್ನು ಕಟ್ಟಿಹಾಕಿ ಸುಮಾರು 8 ಕೋಟಿ ರೂ. ಹಣ ಹಾಗೂ 50 ಕೆಜಿಗೂ ಅಧಿಕ ಚಿನ್ನವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ಚಡಚಣದ ಸುತ್ತಲೂ ಆತಂಕ ಮೂಡಿಸಿದೆ.

ವಿಜಯಪುರದ ಚಡಚಣದ ಎಸ್​ಬಿಐ ಬ್ಯಾಂಕ್​​ನಲ್ಲಿ ದರೋಡೆ; ಮ್ಯಾನೇಜರನ್ನು ಕಟ್ಟಿಹಾಕಿ 8 ಕೋಟಿ ರೂ., 50 ಕೆಜಿ ಚಿನ್ನ ಕಳವು
Sbi
ಅಶೋಕ ಯಡಳ್ಳಿ, ವಿಜಯಪುರ
| Updated By: ಸುಷ್ಮಾ ಚಕ್ರೆ|

Updated on:Sep 16, 2025 | 10:29 PM

Share

ವಿಜಯಪುರ, ಸೆಪ್ಟೆಂಬರ್ 16: ವಿಜಯಪುರ (Vijayapura) ಜಿಲ್ಲೆಯ ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ (SBI Bank) ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ವೇಳೆ ದರೋಡೆಕೋರರು 8 ಕೋಟಿ ನಗದು, ಸುಮಾರು 50 ಕೆ.ಜಿಗೂ ಹೆಚ್ಚು ಚಿನ್ನವನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಿಸ್ತೂಲ್​, ಮಾರಕಾಸ್ತ್ರಗಳೊಂದಿಗೆ ಬಂದಿದ್ದ 5ಕ್ಕೂ ಹೆಚ್ಚು ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಬ್ಯಾಂಕ್​ನ ಮ್ಯಾನೇಜರ್‌, ಕ್ಯಾಶಿಯರ್‌, ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ, ಅವರನ್ನು ರೂಂನಲ್ಲಿ ಕೂಡಿ ಹಾಕಿ ದರೋಡೆ ನಡೆಸಿದ್ದಾರೆ.

ಮಹಾರಾಷ್ಟ್ರದ ದರೋಡೆಕೋರರ ಗ್ಯಾಂಗ್ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಪೊಲೀಸರು ಮಹಾರಾಷ್ಟ್ರವನ್ನು ಸಂಪರ್ಕಿಸುವ ರಸ್ತೆಗಳಿಗೆ ನಾಕಾ ಬಂಧಿ ಹಾಕಿದ್ದಾರೆ. ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಆಧಿಕಾರಿಗಳು ಆ ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಪೊಲೀಸರು ಬ್ಯಾಂಕ್‌ನಲ್ಲಿದ್ದ ಸಿಸಿ ಕ್ಯಾಮರಾಗಳ ದೃಶ್ಯ ಪರಿಶೀಲಿಸಿದ್ದಾರೆ. 8 ಕೋಟಿ ನಗದು, ಸುಮಾರು 50 ಕೆ.ಜಿಗೂ ಹೆಚ್ಚು ಚಿನ್ನ ದರೋಡೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಿಂದಾಗಿ ಎಸ್​ಬಿಐ ಬ್ಯಾಂಕ್ ನಲ್ಲಿ ಚಿನ್ನಾಭರಣವನ್ನು ಇಟ್ಟ ಗ್ರಾಹಕರಲ್ಲಿ ಆತಂಕ ಮನೆಮಾಡಿದೆ.

ಇದನ್ನೂ ಓದಿ: Video: ಡೆಲಿವರಿ ಬಾಯ್ ಬಟ್ಟೆ ತೊಟ್ಟು ಆಭರಣದ ಅಂಗಡಿ ದರೋಡೆ, 30 ಲಕ್ಷ ರೂ. ಮೌಲ್ಯದ ಒಡವೆಗಳ ಕಳವು

ಹಣ ಮತ್ತು ಚಿನ್ನ ಕಳ್ಳತನವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಹಕರು ಇಂದು ಸಂಜೆಯವರೆಗೂ ಎಸ್​ಬಿಐ ಬ್ಯಾಂಕ್ ಎದುರು ಜಮಾವಣೆಯಾಗಿದ್ದಾರೆ. ಜನರನ್ನು ಚದುರಿಸಲು ಪೊಲೀಸರು ಪರದಾಡಬೇಕಾಯಿತು. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 5ಕ್ಕೂ ಅಧಿಕ ಮುಸುಕುಧಾರಿ ದರೋಡೆಕೋರರಿಂದ ಕೃತ್ಯ ನಡೆದಿದೆ. ಬ್ಯಾಂಕ್ ಆಧಿಕಾರಿಗಳು ನಿಖರವಾಗಿ ಮಾಹಿತಿ ನೀಡಿದ ಬಳಿಕವಷ್ಟೇ ದರೋಡೆಯಾದ ನಗದು ಹಾಗೂ ಚಿನ್ನಾಭರಣ ಮಾಹಿತಿ ಲಭ್ಯವಾಗಲಿದೆ. ಬ್ಯಾಂಕ್ ನಲ್ಲಿದ್ದ ಸಿಸಿ ಕ್ಯಾಮೆರಾ ಹಾರ್ಡ್ ಡಿಸ್ಕ್ ವಶಕ್ಕೆ ಪಡೆದ ಪೊಲೀಸರು ಸುತ್ತಮುತ್ತಲ ಸಿಸಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಈ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳನ್ನು ಕರೆಸಲು ಸೂಚಿಸಲಾಗಿದೆ.

ಇದನ್ನೂ ಓದಿ: ವಿಜಯಪುರ: ಅಕ್ರಮ ಸಂಬಂಧಕ್ಕಾಗಿ ಪ್ರೇಮಿಯ ಕೈಯಲ್ಲೇ ಪತಿಯ ಕೊಲೆ ಮಾಡಿಸಲೆತ್ನಿಸಿದ ಪತ್ನಿ, ರಹಸ್ಯ ಬಯಲಾಗಿದ್ದೇ ರೋಚಕ

ಚಡಚಣ ಪಟ್ಟಣದ ಎಸ್ ಬಿ ಐ ಬ್ಯಾಂಕ್ ದರೋಡೆಕೋರರು ಮಹಾರಾಷ್ಟ್ರದತ್ತ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಚಡಚಣ ಪಟ್ಟಣದಿಂದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಿಜಂತಿ ಗ್ರಾಮದ ಮಾರ್ಗವಾಗಿ ಹೋಗಿರುವ ದರೋಡೆಕೋರರ ಗುಂಪು ಚದುರಿಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹುಲಿಜಂತಿ ಗ್ರಾಮದ ಬಳಿ ದರೋಡೆಕೋರರು ಪ್ರಯಾಣ ಮಾಡುತ್ತಿದ್ದ ಕಾರು ಕುರಿಗಳಿಗೆ ಡಿಕ್ಕಿಯಾಗಿದೆ. ಕುರಿಗಳಿಗೆ ಡಿಕ್ಕಿಯಾದದ್ದನ್ನ ಪ್ರಶ್ನಿಸಿದ ಗ್ರಾಮಸ್ಥರಿಗೆ ಕಾರಿನಲ್ಲಿದ್ದ ಓರ್ವ ದರೋಡೆಕೋರ ಕೈಯಲ್ಲಿ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿ ಪರಾರಿಯಾಗಿರುವುದು ತಿಳಿದುಬಂದಿದೆ. KA 24 DH 2456 ನಂಬರಿನ ಕಾರಿನಲ್ಲಿ ಬಂದಿದ್ದ ಓರ್ವ ದರೋಡೆಕೋರನ ಕಾರಿನಲ್ಲಿ ಅಲ್ಪಸ್ವಲ್ಪ ಚಿನ್ನಾಭರಣ ಬಿದ್ದಿತ್ತು. ಇನ್ನುಳಿದ ದರೋಡೆಕೋರರು ಪ್ರತ್ಯೇಕವಾಗಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಬ್ಯಾಂಕ್​​ನಲ್ಲಿ ದರೋಡೆ ನಡೆದ ಸ್ಥಳಕ್ಕೆ ‌ಶ್ವಾನದಳ ಬೆರಳಚ್ಚು‌ದಳ‌ ಸಿಬ್ಬಂದಿ ಆಗಮಿಸಿ ಪರೀಕ್ಷೆ ನಡೆಸಿದ್ದಾರೆ. ಈ ಘಟನೆ ಕುರಿತು ಸಕಲ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ, ಸದ್ಯ ಎಷ್ಟು ಪ್ರಮಾಣದ ನಗದು ಚಿನ್ನ ಕಳ್ಳತನವಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 pm, Tue, 16 September 25