ವಿಜಯಪುರ: ಅಕ್ರಮ ಸಂಬಂಧಕ್ಕಾಗಿ ಪ್ರೇಮಿಯ ಕೈಯಲ್ಲೇ ಪತಿಯ ಕೊಲೆ ಮಾಡಿಸಲೆತ್ನಿಸಿದ ಪತ್ನಿ, ರಹಸ್ಯ ಬಯಲಾಗಿದ್ದೇ ರೋಚಕ
ಅಕ್ರಮ ಹಾಗೂ ಅನೈತಿಕ ಸಂಬಂಧ ಅನಾಹುತಕ್ಕೆ ದಾರಿ ಎಂಬ ಮಾತಿದೆ. ಈ ಮಾತು ವಿಜಯಪುರ ಜಿಲ್ಲೆಯಲ್ಲಿ ನಡೆದ ಘಟನೆಗೆ ಉದಾಹರಣೆಯಾಗಿದೆ. ಅನೈತಿಕ ಸಂಬಂಧ ಉಳಿಸಲು ಮಹಿಳೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಗಂಡನನ್ನೇ ಆತನ ಕೈಯಲ್ಲಿ ಕೊಲೆ ಮಾಡಿಸಲು ಹೋಗಿ ಜೈಲು ಪಾಲಾಗಿದ್ದಾಳೆ. ಅತ್ತ ಮದುವೆಯಾಗಿ ಮಕ್ಕಳಿದ್ದರೂ ಪರಸಂಗದ ಕಾರಣ ಪ್ರೇಯಸಿಯ ಪತಿಯನ್ನು ಕೊಲೆ ಮಾಡಲು ಯತ್ನಿಸಿದವ ಶವವಾಗಿ ಪತ್ತೆಯಾಗಿದ್ದಾನೆ!

ವಿಜಯಪುರ, ಸೆಪ್ಟೆಂಬರ್ 12: ವಿಜಯಪುರ (Vijayapura) ಜಿಲ್ಲೆಯ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದ ಬಾಡಿಗೆ ಮನೆಯಲ್ಲಿ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಲು ಮುಂದಾಗಿ ಜೈಲುಪಾಲಾದ ಘಟನೆ ನಡೆದಿದೆ. ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಬೀರಪ್ಪ ಪೂಜಾರ, ಪತ್ನಿ ಸುನಂದಾ ಹಾಗೂ ಇಬ್ಬರು ಮಕ್ಕಳೊಂದಿಗೆ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸದಾ ಕಾಲ ಮೊಬೈಲ್ನಲ್ಲಿ ವ್ಯಸ್ತವಾಗಿರುತ್ತಿದ್ದ ಕಾರಣ ಸುನಂದಾ ಜೊತೆಗೆ ಬೀರಪ್ಪ ಜಗಳ ಮಾಡುತ್ತಿದ್ದ. ಇದು ಬಿಟ್ಟರೆ ಅವರ ಸಂಸಾರ ಖುಷಿಯಾಗಿಯೇ ಇತ್ತು. ಇಂಥ ಚಿಕ್ಕ, ಚೊಕ್ಕ ಸಂಸಾರ ಹೊಂದಿದ್ದ ಸುನಂದಾಳಿಗೆ ಅದೇ ಅಂಜುಟಗಿ ಗ್ರಾಮದ ಹಾಗೂ ಪತಿಯ ಗೆಳೆಯ ಸಿದ್ದಪ್ಪ ಕ್ಯಾತಕೇರಿ ಜೊತೆಗೆ ಅಕ್ರಮ ಸಂಬಂಧ ಇತ್ತು. ಇದು ಬೀರಪ್ಪಗೆ ಗೊತ್ತಿರಲಿಲ್ಲ.
ಆಗಸ್ಟ್ 31 ರ ಮದ್ಯರಾತ್ರಿ ಸುನಂದಾ ತನ್ನ ಪ್ರಿಯಕರ ಸಿದ್ದಪ್ಪನಿಗೆ ಕರೆ ಮಾಡಿ, ‘ಮನೆಗ ಬಾ, ನನ್ನ ಗಂಡನನ್ನು ಮುಗಿಸೋಣ’ ಎಂದು ಕರೆಸಿಕೊಂಡಿದ್ದಳು. ಸಿದ್ದಪ್ಪ ಮತ್ತೋರ್ವನನ್ನು ಕರೆದುಕೊಂಡು ನಟ್ಟ ನಡುರಾತ್ರಿ ಪ್ರೇಯಸಿಯ ಮನೆಗೆ ಬಂದಿದ್ದ.
ಕತ್ತು, ಮರ್ಮಾಂಗ ಹಿಸುಕಿ ಕೊಲೆಗೆ ಯತ್ನ
ಗಾಢವಾಗಿ ನಿದ್ದೆ ಮಾಡುತ್ತಿದ್ದ ಬೀರಪ್ಪನ ಎದೆಯ ಮೇಲೆ ಸಿದ್ದಪ್ಪ ಕುಳಿತು ಕತ್ತು ಹಿಸುಕಿದರೆ ಮತ್ತೋರ್ವ ಕಾಲ ಮೇಲೆ ಕುಳಿತು ಮರ್ಮಾಂಗ ಹಿಚುಕಿದ್ದ. ಈ ವೇಳೆ ಒದ್ದಾಡಿದ ಬೀರಪ್ಪನ ಕಾಲು ಕೂಲರ್ಗೆ ಬಡಿದು ಬಿದ್ದು ಪಾತ್ರೆಗಳೆಲ್ಲಾ ಸದ್ದು ಮಾಡಿದ್ದವು. ಇದರಿಂದ ಎಚ್ಚರಗೊಂಡ ಮನೆ ಮಾಲೀಕರು ಬಂದು ನೋಡಿದಾಗ ಒಳಗಿದ್ದ ಸಿದ್ದಪ್ಪ ಹಾಗೂ ಮತ್ತೋರ್ವ ಓಡಿ ಹೋಗಿದ್ದರು.
ನಂತರ ಸುನಂದಾ ಏನೇನೋ ಕಲಥೆ ಕಟ್ಟಿದ್ದಳು. ಪತಿಯ ವಿರೋಧಿಗಳ ಕೃತ್ಯವಿದು. ನನಗೂ ಹಲ್ಲೆ ಮಾಡಿದ್ದಾರೆ ಎಂದೆಲ್ಲಾ ಹೇಳಿದ್ದಳು. ಇದನ್ನು ಮನೆ ಮಾಲೀಕರು ನಂಬಿದ್ದರು.
ಪತ್ನಿ ಮೇಲೆಯೇ ಬಂತು ಸಂಶಯ
ಕತ್ತು ಹಿಸುಕಿ ಕೊಲೆ ಮಾಡುವ ಯತ್ನ ನಡೆದಿದ್ದರೂ ಮನೆ ಮಾಲೀಕರು ಬರುವ ವರೆಗೆ ಪತ್ನಿ ಯಾಕೆ ಸುಮ್ಮನಿದ್ದಳು ಎಂಬ ಸಂಶಯ ಬೀರಪ್ಪಗೆ ಬಂದಿತ್ತು. ಬೆಳಗಾಗುತ್ತಲೇ ಇಂಡಿ ತಾಲುಕು ಆಸ್ಪತ್ರೆಗೆ ದಾಖಲಾಗಿ ಎಂಎಲ್ಸಿ ಮಾಡಿಸಿ ನಡೆದ ಘಟನೆ ಕುರಿತು ದೂರು ನೀಡಿದ್ದ. ತನಿಖೆ ನಡೆಸಿದ್ದ ಇಂಡಿ ಪಟ್ಟಣದ ಪೊಲೀಸರಿಗೆ ಬೀರಪ್ಪನ ಪತ್ನಿಯ ನೌಟಂಕಿ ಆಟ ಗೊತ್ತಾಗಿ ಹೋಗಿತ್ತು. ಆಕೆಯನ್ನು ಕರೆಸಿ ವಿಚಾರಣೆ ಮಾಡಿದಾಗ ಪತಿಯನ್ನೇ ಕೊಲೆ ಮಾಡುವ ಇಡೀ ಸಂಚನ್ನು ಬಾಯಿ ಬಿಟ್ಟಿದ್ದಳು.
ಈ ಎಲ್ಲ ಬೆಳವಿಗೆಗಳ ಮಧ್ಯೆ, ರಾತ್ರಿ ಬೀರಪ್ಪನ ಕೊಲೆ ಯತ್ನ ಮಾಡಿ ಓಡಿ ಹೋಗಿದ್ದ ಸಿದ್ದಪ್ಪ ಪರಾರಿಯಾಗಿದ್ದ. ಅಜ್ಞಾತ ಸ್ಥಳದಿಂದ ವಿಡಿಯೋ ರೆಕಾರ್ಡ್ ಮಾಡಿ, ‘‘ಬೀರಪ್ಪನ ಹತ್ಯೆಗೆ ಸಂಚು ಹೂಡಿದ್ದೇ ಆತನ ಪತ್ನಿ ಸುನಂದಾ. ಆಕೆಯೆ ಹತ್ಯೆಗೆ ದಿನ ಹಾಗೂ ಸಮಯ ನಿಗದಿ ಮಾಡಿದ್ದಳು. ಆದರೀಗ ಪ್ರಕರಣದಲ್ಲಿ ನನ್ನನ್ನು ಮಾತ್ರ ಸಿಕ್ಕಿ ಹಾಕಿಸಲು ಪ್ಲಾನ್ ಸಹ ಮಾಡಿದ್ದಳು’’ ಎಂದು ದೂರಿದ್ದ. ಇಬ್ಬರು ಸೇರಿಯೇ ಕೊಲೆಗೆ ಯತ್ನಿಸಿದ್ದೇವೆ. ಆದರೆ ಸುನಂದಾ ಹಾಗೂ ಆಕೆಯ ಅಣ್ಣ, ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ಸೇರಿ ನನ್ನೊಬ್ಬನನ್ನೇ ಕೊಲೆ ಪ್ರಕರಣದಲ್ಲಿ ಸಿಕ್ಕಿಸಿಹಾಕಲು ತಂತ್ರ ಹೂಡಿದ್ದಾರೆ ಎಂದಿದ್ದಾನೆ. ಅಲ್ಲದೆ, ಪೊಲೀಸರು ಇಬ್ಬರನ್ನೂ ಆರೋಪಿಗಳನ್ನಾಗಿ ಮಾಡಲಿ ಎಂದು ಆಗ್ರಹಿಸಿದ್ದಾನೆ. ಸುನಂದಾಳ ಜತೆಗಿನ ಪ್ರೇಮ ಕಹಾನಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದ.
ಇದನ್ನೂ ಓದಿ: ವಿಜಯಪುರ: ಮಹಾದೇವ ಭೈರಗೊಂಡ ಪರಮಾಪ್ತ ರೌಡಿಶೀಟರ್ ಭೀಮನಗೌಡ ಗುಂಡಿನ ದಾಳಿಗೆ ಬಲಿ
ಘಟನೆ ನಡೆದ ದಿನದಿಂದ ನಾಪತ್ತೆಯಾಗಿದ್ದ ಸಿದ್ದಪ್ಪ ಕ್ಯಾತಕೇರಿ ಗುರುವಾರ ಸ್ವಗ್ರಾಮ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರ ಭಾಗದಲ್ಲಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶವವೆಲ್ಲಾ ಊದಿಕೊಂಡು ವಾಸನೆ ಹರಡಿದಾಗಲೇ ಸ್ಥಳಿಯರಿಗೆ ಮಾಹಿತಿ ದೊರಕಿದೆ. ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀರಪ್ಪನ ಕೊಲೆ ವಿಚಾರದಲ್ಲಿ ಸಿಲುಕಿಕೊಂಡು ತಾನೇ ನೇಣು ಹಾಕಿಕೊಂಡನಾ? ಬೇರೆಯವರು ಕೊಲೆ ಮಾಡಿ ನೇಣು ಹಾಕಿದರಾ? ಬೀರಪ್ಪನ ಕೊಲೆ ಮಾಡಲು ಸಿದ್ದಪ್ಪ ತನ್ನೊಂದಿಗೆ ಯಾರನ್ನು ಕರೆ ತಂದಿದ್ದ? ಇಷ್ಟೆಲ್ಲಾ ಪ್ರಶ್ನೆಗೆ ಸದ್ಯ ಉತ್ತರ ಇಲ್ಲವಾಗಿದೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



