ಒಡ ಹುಟ್ಟಿದವನಿಗೇ ಚಟ್ಟ ಕಟ್ಟಿದ ಅಣ್ಣ: ಊರಿನಿಂದ ಕರೆಸಿ ತಮ್ಮನ ಡೆಡ್ಲಿ ಮರ್ಡರ್​

ಆನೇಕಲ್‌ನ ಬನ್ನೇರುಘಟ್ಟದಲ್ಲಿ ಯುವಕನ ಕೊಳೆತ ಶವ ಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕುಡುಕ ಮತ್ತು ಕಳ್ಳತನ ಮಾಡುತ್ತಿದ್ದ ತಮ್ಮನನ್ನು ಅಣ್ಣನೇ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರೋದು  ತನಿಖೆ ವೇಳೆ ಬಯಲಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಒಡ ಹುಟ್ಟಿದವನಿಗೇ ಚಟ್ಟ ಕಟ್ಟಿದ ಅಣ್ಣ: ಊರಿನಿಂದ ಕರೆಸಿ ತಮ್ಮನ ಡೆಡ್ಲಿ ಮರ್ಡರ್​
ಬಂಧಿತ ಆರೋಪಿಗಳು
Edited By:

Updated on: Nov 21, 2025 | 7:24 PM

ಆನೇಕಲ್​, ನವೆಂಬರ್​​ 21: ಇದೇ ತಿಂಗಳ 6ನೇ ತಾರೀಕು ಆನೇಕಲ್ ತಾಲೂಕಿನ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಗ್ಗಲೀಪುರ ರಸ್ತೆ ಬದಿಯ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.  ಕುಡಿದು ಬಂದು ಗಲಾಟೆ ಮಾಡುವುದಲ್ಲದೆ, ಕಳ್ಳತನಕ್ಕೂ ಇಳಿದಿದ್ದ ತಮ್ಮನ ಕಾಟ ತಾಳಲಾರದೆ ಒಡ ಹುಟ್ಟಿದವನನ್ನು ಅಣ್ಣನೇ ಮರ್ಡರ್​ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಕಬುರಗಿ ಮೂಲದ ಧನರಾಜ್(24) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಸಹೋದರ ಶಿವರಾಜ್​​ ಮತ್ತು ಸ್ನೇಹಿತರನ್ನು ಬಂಧಿಸಲಾಗಿದೆ. ಪ್ರಕರಣ ಬೆನ್ನತ್ತಿದ್ದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಕೊಲೆಯಾದ ಧನರಾಜ್ ಕಲಬುರಗಿಯಲ್ಲಿಯೇ ತಂದೆ-ತಾಯಿಯ ಜೊತೆ ವಾಸವಿದ್ದ. ಕೆಲಸಕ್ಕೆ ಹೋಗದೆ ಕಳ್ಳತನ ಮಾಡೋದರ ಜೊತೆಗೆ, ಕುಡಿದು ಬಂದು ಹೆತ್ತವರ ಮೇಲೆ ನಿತ್ಯ ಹಲ್ಲೆ ಮಾಡ್ತಿದ್ದ. ಪ್ರಶ್ನೆ ಮಾಡಿದ ಸಹೋದರ ಶಿವರಾಜನ ಮೇಲೂ ಹಲವು ಬಾರಿ ಹಲ್ಲೆ ನಡೆಸಿದ್ದು, ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದ. ಮೊಬೈಲ್, ಕುರಿ ಸೇರಿದಂತೆ ಸಿಕ್ಕ ಸಿಕ್ಕ ಕಡೆ ಈತ ಕಳ್ಳತನ ಮಾಡುತ್ತಿದ್ದ. ಈತನ ಕೆಲಸದಿಂದಾಗಿ ಅದೆಷ್ಟೋ ಬಾರಿ ಮನೆ ಬಳಿ ಬಂದು ಜನರು ಗಲಾಟೆ ಮಾಡಿದ್ದರು. ಹೀಗಾಗಿ ಸಹೋದರ ಧನರಾಜ್​​ನ ಕಾಟ ತಾಳಲಾರದೆ ಆತನ ಕೊಲೆಗೆ ಸ್ನೇಹಿತರ ಜೊತೆ ಸೇರಿ ಶಿವರಾಜ್​ ಪ್ಲ್ಯಾನ್​​ ಮಾಡಿದ್ದ. ಅದರ ಭಾಗವಾಗಿ ಕೆಲಸ ಕೊಡಿಸೋದಾಗಿ ಹೇಳಿ ಧನರಾಜ್​​ನನ್ನು ಬೆಂಗಳೂರಿಗೆ ಕರೆದಿದ್ದ. ಬೆಂಗಳೂರಿಗೆ ಬಂದ ಧನರಾಜ್​​ ಕಾರಿನಲ್ಲಿ ಕುಳಿತು ಮೊಬೈಲ್ ನೋಡ್ತಿದ್ದ ವೇಳೆ ಆತನ ಕೈಗಳನ್ನು ಹಿಂಬದಿಯಿಂದ ಶಿವರಾಜ್​​ ಸ್ನೇಹಿತರಾದ ಸಂದೀಪ್ ಮತ್ತು ಪ್ರಶಾಂತ್  ಹಿಡಿದುಕೊಂಡಿದ್ದಾರೆ. ಈ ವೇಳೆ ಮಚ್ಚಿನಿಂದ ಧನರಾಜ್​​ ಕತ್ತಿನ ಭಾಗಕ್ಕೆ ಹೊಡೆದು ಕಾರಿನಲ್ಲಿಯೇ ಶಿವರಾಜ್​​ ಕೊಲೆ ಮಾಡಿದ್ದಾನೆ. ಬಳಿಕ ಕಗ್ಗಲೀಪುರ ರಸ್ತೆ ಬದಿಯ ಪೊದೆಯಲ್ಲಿ ಶವ ಎಸೆದು ಆರೋಪಿಗಳು ಎಸ್ಕೇಪ್​​ ಆಗಿದ್ದರು.

ಇದನ್ನೂ ಓದಿ: ಸಹೋದ್ಯೋಗಿಯೊಂದಿಗೆ ಅರಣ್ಯಾಧಿಕಾರಿಗೆ ಅಕ್ರಮ ಸಂಬಂಧ, ಪತ್ನಿ, ಮಕ್ಕಳನ್ನೇ ಕೊಂದು ಹೂತು ಹಾಕಿದ್ದ ವ್ಯಕ್ತಿ

ಪ್ರಕರಣ ಸಂಬಂಧ ತನಿಖೆ ವೇಳೆ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದಾಗ ಆರೋಪಿಗಳು ಶವ ಎಸೆದು ಹೋಗಿರೋದು ಗೊತ್ತಾಗಿದೆ. ಕಾರಿನ ನಂಬರ್ ಆಧರಿಸಿ ಆರೋಪಿಗಳನ್ನು  ಬಂಧನ ಮಾಡಲಾಗಿದೆ. ನಿತ್ಯ ಕಿರುಕುಳ ಕೊಡುತ್ತಿದ್ದ ಕಿರಿಯ ಮಗನ ಸಾವಿನ ಬಗ್ಗೆ ತಲೆ ಕೆಡಿಸಿಕೊಳ್ಳದ ಪೋಷಕರು, ಕುಟುಂಬಕ್ಕೆ ಆಧಾರವಾಗಿದ್ದ ಹಿರಿಯ ಮಗ ಶಿವರಾಜನನ್ನು ನ್ಯಾಯಾಂಗದ ಕುಣಿಕೆಯಿಂದ ಪಾರು ಮಾಡುವಂತೆ ಬೇಡಿಕೊಂಡಿದ್ದಾರೆ. ಆದ್ರೆ, ಬನ್ನೇರುಘಟ್ಟ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.