ಬೆಂಗಳೂರಿಗರಿಗೆ ಗುಡ್ ನ್ಯೂಸ್: ಸಂಜೆ 5ರಿಂದ ಮಧ್ಯರಾತ್ರಿವರೆಗೂ ಮನೆ ಬಾಗಿಲಿಗೆ ಬರಲಿದೆ ಕಸದ ಆಟೋ!

ಬೆಳಗ್ಗೆ ಕಸದ ವಾಹನ ಬರುವ ಸಮಯಕ್ಕೆ ಮನೆಯಲ್ಲಿರಲು ಸಾಧ್ಯವಾಗದ ಬೆಂಗಳೂರಿನ ಉದ್ಯೋಗಿಗಳು ಹಾಗೂ ಗೃಹಿಣಿಗಳಿಗೆ ಅನುಕೂಲ ಕಲ್ಪಿಸಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹೊಸ ಯೋಜನೆ ಆರಂಭಿಸಿದೆ. ಬೊಮ್ಮನಹಳ್ಳಿ ವ್ಯಾಪ್ತಿಯ ಐದು ವಾರ್ಡ್‌ಗಳಲ್ಲಿ ಸಂಜೆ 5ರಿಂದ ಮಧ್ಯರಾತ್ರಿ 12ರವರೆಗೆ ಮನೆಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತದೆ. ಇದು ಯಶಸ್ವಿಯಾದರೆ ನಗರದಾದ್ಯಂತ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿಗರಿಗೆ ಗುಡ್ ನ್ಯೂಸ್: ಸಂಜೆ 5ರಿಂದ ಮಧ್ಯರಾತ್ರಿವರೆಗೂ ಮನೆ ಬಾಗಿಲಿಗೆ ಬರಲಿದೆ ಕಸದ ಆಟೋ!
ಸಾಂದರ್ಭಿಕ ಚಿತ್ರ
Edited By:

Updated on: Oct 23, 2026 | 8:02 AM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಸಂಜೆ ವೇಳೆಯೂ ಕಸ ಸಂಗ್ರಹ
  • ಬೊಮ್ಮನಹಳ್ಳಿ ವ್ಯಾಪ್ತಿಯ ಐದು ವಾರ್ಡ್‌ಗಳಲ್ಲಿ ಯೋಜನೆ
  • ಸಂಜೆ ಐದರಿಂದ ಮಧ್ಯರಾತ್ರಿ ಹನ್ನೆರಡರವರೆಗೆ ಸೇವೆ

ಬೆಂಗಳೂರು, ಅಕ್ಟೋಬರ್ 23: ಬೆಂಗಳೂರಿನಲ್ಲಿ ಬೆಳಗ್ಗೆ ಕಸ ವಿಲೇವಾರಿ ಮಾಡಲು ಸಾಧ್ಯವಾಗದೆ ಪರದಾಡುವ ಉದ್ಯೋಗಿಗಳು ಹಾಗೂ ಗೃಹಿಣಿಗಳಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಸಿಹಿ ಸುದ್ದಿ ನೀಡಿದೆ. ಕಸದ ವಾಹನ ಬರುವ ಸಮಯಕ್ಕೆ ಮನೆಯಲ್ಲಿರಲು ಸಾಧ್ಯವಾಗದೆ, ಅನಿವಾರ್ಯವಾಗಿ ರಸ್ತೆಬದಿ ಕಸ ಎಸೆಯುವವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಹೊಸ ಯೋಜನೆಗೆ ಚಾಲನೆ ನೀಡಿದೆ. ಬೊಮ್ಮನಹಳ್ಳಿ ವ್ಯಾಪ್ತಿಯ ಐದು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ವೇಳೆಯಲ್ಲೂ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಆರಂಭಿಸಲಾಗಿದೆ.

ಬೆಳಗ್ಗೆ ಕಸ ವಿಲೇವಾರಿ ಮಾಡಲು ಆಗದವರಿಗೆ ಅನುಕೂಲ

ಬೆಳಗ್ಗೆ ಕಚೇರಿಗೆ ತೆರಳುವ ಉದ್ಯೋಗಿಗಳು, ಐಟಿ ವೃತ್ತಿಪರರು ಹಾಗೂ ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳಿರುವ ಮನೆಗಳಲ್ಲಿ ದಿನನಿತ್ಯದ ಕೆಲಸಗಳ ನಡುವೆ ಕಸ ವಿಲೇವಾರಿ ಮಾಡುವುದು ಸವಾಲಿನ ಕೆಲಸವಾಗಿದೆ. ಕಸದ ಆಟೋ ಬರುವ ಸಮಯಕ್ಕೆ ಮನೆಯವರು ಹೊರಗೆ ಹೋಗಿರುವುದರಿಂದ ಕಸ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಗೃಹಿಣಿಯರಿಗೂ ಬೆಳಗಿನ ಅಡುಗೆ ಮತ್ತು ಇತರ ಕೆಲಸಗಳ ನಡುವೆ ಕಸ ವಿಲೇವಾರಿ ಮಾಡುವುದು ಕೆಲವೊಮ್ಮೆ ಕಷ್ಟವಾಗುತ್ತಿತ್ತು.

ಕಸದ ವಾಹನವನ್ನು ತಪ್ಪಿಸಿಕೊಂಡಾಗ ಕೆಲವರು ರಸ್ತೆಬದಿ ಅಥವಾ ಚರಂಡಿಗಳ ಪಕ್ಕದಲ್ಲಿ ಕಸ ಎಸೆಯುತ್ತಿದ್ದರು. ಇದರಿಂದ ನಗರದ ವಿವಿಧೆಡೆ ಕಸದ ರಾಶಿಗಳು ಸಂಗ್ರಹವಾಗಿ, ಬ್ಲಾಕ್‌ಸ್ಪಾಟ್‌ಗಳು ಸೃಷ್ಟಿಯಾಗುತ್ತಿದ್ದವು. ಕಸದ ರಾಶಿಯಿಂದ ದುರ್ನಾತ ಹರಡುವುದರ ಜತೆಗೆ ನೊಣ ಮತ್ತು ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತಿತ್ತು. ಇದರಿಂದ ಸಾರ್ವಜನಿಕರ ಆರೋಗ್ಯ ಹಾಗೂ ನಗರದ ಸ್ವಚ್ಛತೆಯ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿತ್ತು.

ಸಂಜೆ 5ರಿಂದ ರಾತ್ರಿ 12ರವರೆಗೆ ಕಸ ಸಂಗ್ರಹ

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಬೊಮ್ಮನಹಳ್ಳಿ ವ್ಯಾಪ್ತಿಯ ಐದು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ವೇಳೆಯ ಕಸ ಸಂಗ್ರಹ ವ್ಯವಸ್ಥೆ ಆರಂಭಿಸಿದೆ. ಈ ಯೋಜನೆಯಡಿ ಪ್ರತಿದಿನ ಸಂಜೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವಿಶೇಷ ಆಟೋಗಳು ಮತ್ತು ಸಿಬ್ಬಂದಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸಲಿದ್ದಾರೆ.

ಕಚೇರಿ ಮುಗಿಸಿ ಸಂಜೆ ಮನೆಗೆ ಹಿಂದಿರುಗುವ ಉದ್ಯೋಗಿಗಳಿಗೆ ಈ ವ್ಯವಸ್ಥೆಯಿಂದ ಅನುಕೂಲವಾಗಲಿದೆ. ಮನೆಯಲ್ಲಿರುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಜೆ ವೇಳೆಯಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡಬಹುದು. ಬೆಳಗಿನ ಸಮಯದಲ್ಲಿ ಕಸದ ವಾಹನವನ್ನು ಕಾಯಲು ಸಾಧ್ಯವಾಗದವರಿಗೂ ಇದರಿಂದ ಪರ್ಯಾಯ ವ್ಯವಸ್ಥೆ ದೊರೆತಂತಾಗಲಿದೆ.

ಬ್ಲಾಕ್‌ಸ್ಪಾಟ್‌ಗಳಿಗೆ ಮುಕ್ತಿ ಸಿಗುತ್ತಾ?

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಈ ಪ್ರಯೋಗಕ್ಕೆ ಸಾರ್ವಜನಿಕರಿಂದ, ವಿಶೇಷವಾಗಿ ಉದ್ಯೋಗಸ್ಥರಿಂದ ಮೆಚ್ಚುಗೆ ವ್ಯಕ್ತವಾಗುವ ನಿರೀಕ್ಷೆಯಿದೆ. ಸಂಜೆ ವೇಳೆಯಲ್ಲೂ ಕಸ ಸಂಗ್ರಹಿಸುವುದರಿಂದ ರಸ್ತೆಬದಿ ಕಸ ಎಸೆಯುವ ಪ್ರವೃತ್ತಿ ಕಡಿಮೆಯಾಗಬಹುದು. ಇದರಿಂದ ನಗರದ ಕಸದ ಬ್ಲಾಕ್‌ಸ್ಪಾಟ್‌ಗಳನ್ನು ನಿಯಂತ್ರಿಸಲು ಸಹಾಯವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ನೀವು ನಿಜವಾಗ್ಲೂ ಇಂಜಿನಿಯರಿಂಗ್ ಮಾಡಿದ್ದೀರಾ? ರಸ್ತೆಗಳನ್ನ ತೋರಿಸಿ ಅಧಿಕಾರಿಗಳಿಗೆ ಕೃಷ್ಣಬೈರೇಗೌಡ ಕ್ಲಾಸ್

ಬೊಮ್ಮನಹಳ್ಳಿ ವ್ಯಾಪ್ತಿಯ ಐದು ವಾರ್ಡ್‌ಗಳಲ್ಲಿ ಆರಂಭಿಸಿರುವ ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಕಸ ವಿಲೇವಾರಿ ಸಮಸ್ಯೆ ಎದುರಿಸುತ್ತಿರುವ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸ್ವಚ್ಛ ಬೆಂಗಳೂರು ನಿರ್ಮಾಣದ ನಿಟ್ಟಿನಲ್ಲಿ ಈ ವ್ಯವಸ್ಥೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More
Loading...
Unable to load recommendations.
Follow Us