AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಭಾರಿ ಮಳೆ: ವಾಹನ ಸವಾರರ ಪರದಾಟ; ಮುಂದಿನ 2 ದಿನ ಮಳೆ ಮುನ್ಸೂಚನೆ

ಬೆಂಗಳೂರಿನಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಮೆಜೆಸ್ಟಿಕ್, ಕೆ.ಆರ್. ಪುರಂ ಸೇರಿ ಹಲವೆಡೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಐಎಂಡಿ ಮುಂದಿನ 2 ದಿನ ಗುಡುಗು-ಸಿಡಿಲು ಸಹಿತ ಮಳೆಯ ಮುನ್ಸೂಚನೆ ನೀಡಿದೆ. ಪೊಲೀಸರು ಜಾಗರೂಕ ಪ್ರಯಾಣಕ್ಕೆ ಸಲಹೆ ನೀಡಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಭಾರಿ ಮಳೆ: ವಾಹನ ಸವಾರರ ಪರದಾಟ; ಮುಂದಿನ 2 ದಿನ ಮಳೆ ಮುನ್ಸೂಚನೆ
ಬೆಂಗಳೂರಿನಲ್ಲಿ ಮಳೆ
ಅಕ್ಷಯ್​ ಪಲ್ಲಮಜಲು​​
|

Updated on:Oct 05, 2026 | 4:15 PM

Share

ಬೆಂಗಳೂರು, ಅ.5: ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮತ್ತೆ ತೀವ್ರಗೊಂಡಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ನಗರದ ಹಲವೆಡೆ ಕಪ್ಪು ಮೋಡಗಳು ಕವಿದು, ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ. ದಿಢೀರ್ ಸುರಿದ ವರ್ಷಧಾರೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಗಿದೆ.

ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕೆಆರ್ ಪುರಂ, ಟಿನ್ ಫ್ಯಾಕ್ಟರಿ, ಟಿಸಿ ಪಾಳ್ಯ, ಜಕ್ಕೂರು ಹಾಗೂ ಹೆಬ್ಬಾಳ ಸುತ್ತಮುತ್ತ ಭಾರಿ  ಮಳೆಯಾಗಿದೆ. ಕೆಆರ್ ಪುರಂ ಮೆಟ್ರೋ ನಿಲ್ದಾಣ ಮತ್ತು ಟಿನ್ ಫ್ಯಾಕ್ಟರಿ ರಸ್ತೆಯ ಸುತ್ತಮುತ್ತ ಜಲಾವೃತಗೊಂಡಿದ್ದು, ಸಂಚಾರ ಸಂಪೂರ್ಣ ನಿದಾನಗೊಂಡಿದೆ. ದಿಢೀರ್ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ದೃಶ್ಯಗೋಚರತೆ ಕಡಿಮೆಯಾಗಿದ್ದು, ವಾಹನ ಸವಾರರು ಹೆಡ್‌ಲೈಟ್ ಆನ್ ಮಾಡಿಕೊಂಡು ಸಾಗುವಂತಾಯಿತು.

ಮಳೆಯಿಂದಾಗಿ ಹಲವು ಕಡೆ ನೀರು ನಿಂತ ಪರಿಣಾಮ ಬೆಂಗಳೂರು ಸಂಚಾರ ಪೊಲೀಸರು ಮುನ್ನೆಚ್ಚರಿಕೆ ಸಲಹೆ ಜಾರಿ ಮಾಡಿದ್ದಾರೆ. ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿ ರಸ್ತೆಯಲ್ಲಿ ಭಾರಿ ಪ್ರಮಾಣದ ಮಳೆ ನೀರು ಶೇಖರಣೆಯಾಗಿದೆ. ಹೀಗಾಗಿ ಹೆಣ್ಣೂರು ಕಡೆಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದ್ದು, ಚಾಲಕರು ಜಾಗರೂಕತೆಯಿಂದ ಚಲಿಸುವಂತೆ ಪೊಲೀಸರು ಕೋರಿದ್ದಾರೆ.

ಇದನ್ನೂ ಓದಿ: ‘ತಂದೆ ಕೆಲಸದಲ್ಲಿದ್ದರೆ ಸಾಲದು, ತಾಯಿ ಗೃಹಿಣಿಯಾಗಿರಬೇಕು’: ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಅಸಲಿ ಬಣ್ಣ ಬಯಲು

ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ (ಅಕ್ಟೋಬರ್ 5 ಮತ್ತು 6) ಗುಡುಗು ಹಾಗೂ ಸಿಡಿಲು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸಾಧಾರಣ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವ ಸಾಧ್ಯತೆಯಿದ್ದು, ಸಂಜೆ ಕಚೇರಿಗಳಿಂದ ಮನೆಗೆ ಮರಳುವ ಉದ್ಯೋಗಿಗಳು ಮತ್ತು ವಾಹನ ಸವಾರರು ಹೆಚ್ಚಿನ ಸಮಯ ಮೀಸಲಿಟ್ಟು ಜಾಗರೂಕರಾಗಿ ಪ್ರಯಾಣಿಸುವಂತೆ ಸೂಚಿಸಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಕೊಡಗಿಗೆ ತಂಪೆರೆದ ವರುಣ; ಹಾವೇರಿಯಲ್ಲಿ ಸಿಡಿಲು ಬಡೆದು ರೈತ ಸಾವು:

ಕೊಡಗು ಜಿಲ್ಲೆಯಾದ್ಯಂತ ಭಾರಿ ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆ ಮಂಜಿನ ನಗರಿಗೆ ತಂಪು ನೀಡಿದ್ದರೆ, ಹಾವೇರಿ ಜಿಲ್ಲೆಯಲ್ಲಿ ಕೆಲಸದ ವೇಳೆಗೆ ಸುರಿದ ಮಳೆಗೆ ಸಿಡಿಲು ಬಡೆದು ಜಮೀನಿನಲ್ಲಿದ್ದ ವೃದ್ಧ ರೈತರೊಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹಾವೇರಿ ಜಿಲ್ಲೆಯ ಹಲವೆಡೆ ಇಂದು ಸಿಡಿಲು ಮತ್ತು ಗುಡುಗು ಸಹಿತ ಭಾರಿ ಮಳೆಯಾಗಿದೆ. ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಈ ಕರಳು ಹಿಂಡುವ ಘಟನೆ ಸಂಭವಿಸಿದೆ.

ಚಿಕ್ಕಮರಳಿಹಳ್ಳಿ ಗ್ರಾಮದ ನಿವಾಸಿ ದೊಡ್ಡಹನುಮಂತಪ್ಪ ನಿಂಗಪ್ಪ ರಿತ್ತಿ (60) ಮೃತಪಟ್ಟ ದುರದೃಷ್ಟಕರ ರೈತ. ದೊಡ್ಡಹನುಮಂತಪ್ಪ ಅವರು ತಮ್ಮ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದಾಗ ದಿಢೀರನೆ ಭಾರಿ ಮಳೆ ಹಾಗೂ ಸಿಡಿಲು ಆರಂಭವಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಅವರು ಜಮೀನಿನಲ್ಲಿದ್ದ ಮರದ ಕೆಳಗೆ ನಿಂತಿದ್ದ ವೇಳೆ ಭೀಕರ ಸಿಡಿಲು ಬಡೆದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Mon, 5 October 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More