
ಬೆಂಗಳೂರು, ಅಕ್ಟೋಬರ್ 02: ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿ.ಓಜೋನ್ ಅರ್ಬನ್ ಇನ್ಫ್ರಾ ಡೆ.ಪ್ರೈಲಿ.ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ವಾಸುದೇವನ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಮನೆ ಖರೀದಿದಾರರಿಗೆ 927.22 ಕೋಟಿ ರೂ ವಂಚಿಸಿರುವುದು ತನಿಖೆಯಲ್ಲಿ ಪತ್ತೆ ಆಗಿದೆ.
ಸಿಬಿಐ ಮತ್ತು ಬೆಂಗಳೂರಲ್ಲಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ಇ.ಡಿ ತನಿಖೆ ನಡೆಸಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರುವ ವಾಸುದೇವನ್ರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ಇ.ಡಿಯ ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಸೆಪ್ಟೆಂಬರ್ 30ರಂದು ಬಂಧಿಸಿದ್ದು, ಅಕ್ಟೋಬರ್ 1ರಂದು ಅವರನ್ನು ಬೆಂಗಳೂರಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಮುಂದಿನ ವಿಚಾರಣೆಗಾಗಿ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿದೆ.
ಗ್ರಾಹಕರಿಗೆ ಅಪಾರ್ಟ್‌ಮೆಂಟ್ ನೀಡುವುದಾಗಿ ನಂಬಿಸಿ ಹಣ ಸಂಗ್ರಹಿಸಿದ್ದ ಕಂಪನಿ ಮತ್ತು ಅದರ ಪ್ರವರ್ತಕರು, ನಿಗದಿತ ಸಮಯಕ್ಕೆ ಫ್ಲ್ಯಾಟ್‌ಗಳ ನಿರ್ಮಾಣವನ್ನೂ ಪೂರ್ಣಗೊಳಿಸಿಲ್ಲ. ಅಲ್ಲದೇ ಗ್ರಾಹಕರ ನೀಡಿದ ಕೋಟ್ಯಂತರ ರೂ ಹಣವನ್ನೂ ಮರುಪಾವತಿಸಿಲ್ಲ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ: ಬೆಂಗಳೂರಿನ 5 ಕಂಪನಿಗಳಿಗೆ ಇಡಿ ಶಾಕ್, 6 ಕೋಟಿ ರೂ ಜಪ್ತಿ
ಇನ್ನು ಮನೆ ಖರೀದಿದಾರರಿಂದ ಸಂಗ್ರಹಿಸಲಾಗಿದ್ದ 927.22 ಕೋಟಿ ರೂ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಈ ಅಕ್ರಮ ಹಣದ ಮೂಲ, ಹಣ ಬೇರೆಡೆಗೆ ವರ್ಗಾವಣೆಗೊಂಡ ಮಾರ್ಗಗಳು ಮತ್ತು ಆ ಹಣವನ್ನು ಎಲ್ಲೆಲ್ಲಿ ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಆರೋಪಿಯನ್ನು ಬಂಧಿಸುವುದು ಅಗತ್ಯವಾಗಿತ್ತು ಎಂದು ಇ.ಡಿ ಸ್ಪಷ್ಟನೆ ನೀಡಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು 2025ರ ಆಗಸ್ಟ್ 1 ರಂದು ಹಲವು ಕಡೆ ಶೋಧ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ನಂತರ ಸುಮಾರು 423.378 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಇದನ್ನೂ ಓದಿ: ಅಟ್ಟಿಕಾ ಗೋಲ್ಡ್ ಕಂಪನಿ ಮೇಲೆ ದಾಳಿ: ಸ್ಫೋಟಕ ಮಾಹಿತಿ ಬಯಲಿಗೆಳೆದ ಇಡಿ
ಇದರಲ್ಲಿ ಓಜೋನ್‌ನ ಅವೆನ್ಯೂ ಯೋಜನೆಯ 92 ಮಾರಾಟವಾಗದ ಫ್ಲ್ಯಾಟ್‌ಗಳು, ಆಕ್ವಾ 2 ಯೋಜನೆಯ 13 ಫ್ಲ್ಯಾಟ್‌ಗಳು, 4.5 ಎಕರೆ ವಾಣಿಜ್ಯ ಭೂಮಿ ಹಾಗೂ ವಾಸುದೇವನ್ ಮತ್ತು ಅವರ ಪತ್ನಿಗೆ ಸೇರಿದ ಆಸ್ತಿಗಳು ಸೇರಿವೆ. ಜೊತೆಗೆ ಕರ್ನಾಟಕದ ಮೂಡಿಗೆರೆ ತಾಲೂಕಿನ ಕನ್ನೆಹಳ್ಳಿ ಗ್ರಾಮದಲ್ಲಿರುವ 179 ಎಕರೆ ಭೂಮಿಯನ್ನೂ ಇ.ಡಿ ಜಪ್ತಿ ಮಾಡಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.