ಅಟ್ಟಿಕಾ ಗೋಲ್ಡ್ ಕಂಪನಿ ಮೇಲೆ ದಾಳಿ: ಸ್ಫೋಟಕ ಮಾಹಿತಿ ಬಯಲಿಗೆಳೆದ ಇಡಿ
ಅಟ್ಟಿಕಾ ಗೋಲ್ಡ್ ಕಂಪನಿ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ಮಾಡಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ಅಟ್ಟಿಕಾ ಗೋಲ್ಡ್ ಸಂಸ್ಥೆಗೆ ಸೇರಿದ ಒಟ್ಟು 16 ಕಡೆ ಇಡಿ ದಾಳಿ ಮಾಡಿದ್ದು ಮಹತ್ವ ದಾಖಲೆಗಳ್ನು ವಶಕ್ಕೆ ಪಡೆದುಕೊಂಡಿದೆ. ಶೋಧ ಕಾರ್ಯಾಚರಣೆಯಲ್ಲಿ ಏನೆಲ್ಲಾ ಪತ್ತೆಯಾಗಿದೆ. ಏನೇನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನುವ ಬಗ್ಗೆ ಸ್ವತಃ ಇಡಿ ಮಾಧ್ಯಮ ಪ್ರಕಟಣೆ ಮೂಲಕ ಬಹಿರಂಗ ಪಡಿಸಿದ್ದು, ಅದು ಈ ಕೆಳಗಿನಂತಿದೆ.

ಬೆಂಗಳೂರು, (ಸೆಪ್ಟೆಂಬರ್ 25): ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಸೆಕ್ಷನ್ 17ರ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಸೆಪ್ಟೆಂಬರ್ 23 ಮತ್ತು 24ರಂದು ಬೆಂಗಳೂರಿನ 16 ಸ್ಥಳಗಳು ಸೇರಿದಂತೆ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿರುವ M/s Attica Gold Private Limited, Bengaluru ಹಾಗೂ ಇತರರಿಗೆ ಸೇರಿದ 16 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿ ಹಿಂದಿನ ಕಾರಣ ತಿಳಿಸಿದ ಇಡಿ
ಕಳ್ಳತನವಾದ ಚಿನ್ನಾಭರಣಗಳನ್ನು ಖರೀದಿ/ಸ್ವಾಧೀನಪಡಿಸಿಕೊಳ್ಳುವಲ್ಲಿ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್, ಅದರ ಷೇರುದಾರರು ಮತ್ತು ನಿರ್ದೇಶಕರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಶೋಧ ನಡೆಸಲಾಗಿದೆ. ಈ ಮೂಲಕ ಕಂಪನಿಗೆ ನಿಕಟವಾಗಿ ಸಂಬಂಧ ಹೊಂದಿರುವ ಪಿ.ಎಸ್. ಆಯುಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು, ಒಬೇದುಲ್ಲಾ ಎ., ಮೊಹಮ್ಮದ್ ಸಲ್ಮಾನ್ ಎ. ಹಾಗೂ ಅವರ ಕುಟುಂಬ ಸದಸ್ಯರು ಮತ್ತು ಸಹಚರರು ಭಾರಿ ಪ್ರಮಾಣದ ಅಪರಾಧದ ಆದಾಯವನ್ನು (Proceeds of Crime) ಗಳಿಸಿದ್ದಾರೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಅಟ್ಟಿಕಾ ಗೋಲ್ಡ್ ಕಂಪನಿಗೆ ಡಬಲ್ ಶಾಕ್: ಇಡಿ ಬೆನ್ನಲ್ಲೇ ಐಟಿ ರೇಡ್; 19 ಸ್ಥಳಗಳಲ್ಲಿ ದಾಳಿ
ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವು ಎಫ್‌ಐಆರ್‌ಗಳು ಹಾಗೂ ಸಲ್ಲಿಸಲಾದ ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ತನಿಖೆ ಆರಂಭಿಸಲಾಗಿತ್ತು. ಕಳ್ಳತನದ ಚಿನ್ನಾಭರಣಗಳನ್ನು ಖರೀದಿಸುವುದು, ಸ್ವಾಧೀನಪಡಿಸಿಕೊಳ್ಳುವುದು ಹಾಗೂ ವಹಿವಾಟು ನಡೆಸಿದ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಎಫ್‌ಐಆರ್‌ಗಳಿಂದ ಸಂಗ್ರಹಿಸಲಾಗಿದ್ದು, ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಂಗ್ರಹಿಸಿದ ಪರಿಶೀಲಿಸಬಹುದಾದ ಮಾಹಿತಿಯೂ ಇದಕ್ಕೆ ಪೂರಕವಾಗಿದೆ. ಶೋಧ ಕಾರ್ಯಾಚರಣೆಯಲ್ಲಿ ಕಂಪನಿಯ ನಿರ್ದೇಶಕರು, ಮಾಜಿ ನಿರ್ದೇಶಕರು, ಷೇರುದಾರರು, ಪ್ರಧಾನ ಕಚೇರಿ ಹಾಗೂ ವಿವಿಧ ಶಾಖೆಗಳಿಗೆ ಸೇರಿದ ನಿವಾಸಗಳು ಮತ್ತು ಕಚೇರಿಗಳನ್ನು ಪರಿಶೀಲಿಸಲಾಯಿತು.
ED, Bengaluru conducted searches across 16 premises in Bengaluru, Chennai, Hyderabad & Visakhapatnam under PMLA, 2002 targeting M/s Attica Gold Pvt Ltd, its directors & associates like P.S. Ayub over allegations of habitually purchasing stolen gold and amassing PoC, resulting in… pic.twitter.com/poERz6mMxS
— ED (@dir_ed) September 25, 2026
ಬೊಮ್ಮನಹಳ್ಳಿ ಬಾಬು ಸೇರಿದಂತೆ ಹಲವು ಎಸ್ಕೇಪ್
ಪಿ.ಎಸ್. ಆಯುಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು, ಒಬೇದುಲ್ಲಾ ಎ., ಮೊಹಮ್ಮದ್ ಸಲ್ಮಾನ್ ಎ. ಮತ್ತು ಅರ್ಬಿನ್ ತಾಜ್ ಎ. ಸೇರಿದಂತೆ ಪ್ರಮುಖ ವ್ಯಕ್ತಿಗಳು ಶೋಧ ಕಾರ್ಯಾಚರಣೆಯ ವೇಳೆ ಸಹಕರಿಸದೆ, ತಲೆಮರೆಸಿಕೊಂಡಿದ್ದರು. ಶೋಧ ನಡೆಸಲಾದ ಸಂಸ್ಥೆಯ ಕಚೇರಿಗಳಲ್ಲಿದ್ದ ಉದ್ಯೋಗಿಗಳಿಗೂ ಪ್ರಮುಖ ವ್ಯಕ್ತಿಗಳು ಲಭ್ಯವಾಗದಂತೆ ಸೂಚಿಸಿದ್ದರು ಎಂದು ಇಡಿ ತಿಳಿಸಿದೆ.
ಶೋಧ ಕಾರ್ಯಾಚರಣೆಯಲ್ಲಿ ಅಪರಾಧದ ಆದಾಯಕ್ಕೆ ಸಂಬಂಧಿಸಿದಂತೆ 7,52,000 ನಗದು, ವಿದೇಶಿ ಕರೆನ್ಸಿ, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.




