ಬೆಂಗಳೂರು, ಸೆಪ್ಟೆಂಬರ್ 13: ಕ್ಯಾಂಟರ್ ಕೆಳಗೆ ಸಿಲುಕಿ ಎರಡು ತುಂಡಾಗಿರುವ ಆಟೋ, ಯಮದೂತನಾಗಿ ಬಂದು ಎರಡು ಜೀವಗಳನ್ನು ಬಲಿ ಪಡೆದು ನಿಂತಿರುವ ಕ್ಯಾಂಟರ್. ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ. ಇಷ್ಟೇ ಅಲ್ಲ, ಸಿಸಿಟಿವಿಯಲ್ಲಿ ಸೆರೆಯಾಗಿರುವ ಎದೆ ಝಲ್ಲೆನಿಸುವ ಅಪಘಾತದ ದೃಶ್ಯ. ಇಂಥದ್ದೊಂದು ಭೀಕರ ಅಪಘಾತಕ್ಕೆ ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ (Bengaluru) ಸುಮ್ಮನಹಳ್ಳಿ ಜಂಕ್ಷನ್ ಸಾಕ್ಷಿಯಾಗಿದೆ. ಚಿಕ್ಕಗೊಲ್ಲರಹಟ್ಟಿಯಲ್ಲಿ ವಾಸವಾಗಿದ್ದ ಯೇಸು ಮತ್ತು ಜೆನಿಫರ್ ಎಂಬ ಅಪ್ಪ ಮಗಳು ದುರಂತದಲ್ಲಿ ಮೃತಪಟ್ಟಿದ್ದಾರೆ. ಮುಂದಿನ ತಿಂಗಳು 22 ವರ್ಷದ ಜೆನಿಫರ್ಗೆ ಮದುವೆ ನಿಶ್ಚಿತವಾಗಿತ್ತು. ಹೀಗಾಗಿ ಕ್ರಿಶ್ಚನ್ ಸಂಪ್ರದಾಯದಂತೆ ಇಂದು ಚರ್ಚಿನಲ್ಲಿ ಪ್ರಾರ್ಥನೆ ಸಲ್ಲಿಸಲು ತಂದೆ ಮಗಳಿಬ್ಬರು ತಮ್ಮದೇ ಆಟೋದಲ್ಲಿ ಹೊರಟಿದ್ದರು. ಆದರೆ ಸುಮ್ಮನಹಳ್ಳಿ ಜಂಕ್ಷನ್ ಬಳಿ ಅಂದ್ರೆ ಕಾಮಾಕ್ಷಿ ಪಾಳ್ಯ- ಮಾಗಡಿ ರಸ್ತೆಯಲ್ಲಿ ಇಂಡಸ್ಟ್ರೀಯಲ್ ಏರಿಯಾ ಕಡೆಯಿಂದ ಬಂದ ಕ್ಯಾಂಟರ್ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಮುಖ್ಯ ರಸ್ತೆಯಲ್ಲಿ ಹೋಗ್ತಿದ್ದ ಬೈಕ್ ಗೆ ಮೊದಲು ಡಿಕ್ಕಿ ಹೊಡೆದು ನಂತರ ಆಟೋ ಮತ್ತು ಕಾರಿಗೆ ಡಿಕ್ಕಿ ಹೊಡೆದು ಫುಟ್ ಪಾತ್ ತಡೆಗೋಡೆ ಬಳಿ ನಿಂತಿದೆ.
ಕ್ಯಾಂಟರ್ ಕೆಳಗೆ ಸಿಲುಕಿ ಆಟೋ ಅಪ್ಪಚ್ಚಿ ಆಗಿ ಎರಡು ತುಂಡಾಗಿತ್ತು. ತಕ್ಷಣವೇ ಸ್ಥಳೀಯರು ಆಟೋದಲ್ಲಿ ಸಿಲುಕಿದ್ದ ಅಪ್ಪ ಮಗಳನ್ನ ಹರಸಾಹಸದಿಂದ ಹೊರತೆಗೆದರು. ಆದರೆ, ಮದುವೆ ಕನಸು ಕಂಡಿದ್ದ ಅಪ್ಪ ಮಗಳ ಉಸಿರು ಅದಾಗಲೇ ನಿಂತಿತ್ತು.
ಮತ್ತೊಂದು ಕಾರಿನಲ್ಲಿದ್ದ ವಿಜಯ್ ಎಂಬಾತ ತನ್ನ ಮಗ ಮತ್ತು ಗರ್ಭಿಣಿ ಪತ್ನಿ ಜೊತೆ ಆಸ್ಪತ್ರೆಗೆ ಹೋಗುತ್ತಿದ್ದರು. ಆದರೆ ಕ್ಯಾಂಟರ್ ಡಿಕ್ಕಿ ಹೊಡೆದ ರಭಸಕ್ಕೆ ವಿಜಯ್ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣ ನಾಗಲ್ಯಾಂಡ್ ಮೂಲದ ಕ್ಯಾಂಟರ್ ಚಾಲಕ ಎಸ್ಕೇಪ್ ಆಗಿದ್ದಾನೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಕಾಮಾಕ್ಷಿ ಪಾಳ್ಯ ಸಂಚಾರ ಠಾಣಾ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದರು. ಆಸ್ಪತ್ರೆಯಲ್ಲಿ ಪತಿ ಮತ್ತು ಮಗಳನ್ನ ಕಳೆದುಕೊಂಡ ಮಹಿಳೆ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ಹಾಸನ ದುರಂತಕ್ಕೂ ಮುನ್ನ ಮತ್ತೊಂದು ಅಪಘಾತ ಮಾಡಿದ್ದ ಟ್ರಕ್ ಚಾಲಕ? ಸ್ಫೋಟಕ ಮಾಹಿತಿ ಬಹಿರಂಗ
ಘಟನಾ ಸ್ಥಳಕ್ಕೆ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭಂವಿಸಿರೋ ಸಾಧ್ಯತೆ ಇದೆ ಎಂದಿದ್ದಾರೆ. ತನಿಖೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ನಡೆದ ಈ ಭೀಕರ ಅಪಘಾತ ಜನರನ್ನು ಬೆಚ್ಚಿಬೀಳಿಸಿದೆ. ಸದ್ಯ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕ್ಯಾಂಟರ್ ಚಾಲಕ ಸಿಕ್ಕಿದ ಬಳಿಕವಷ್ಟೇ ಅಪಘಾತಕ್ಕೆ ನಿಖರ ಕಾರಣ ತಿಳಿಯಲಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9, ಬೆಂಗಳೂರು
Published On - 3:56 pm, Sat, 13 September 25