
ಬೆಂಗಳೂರು, ಅ.21: ಬೆಂಗಳೂರು-ಹೊಸೂರು ಮೆಟ್ರೋ ಯೋಜನೆ (Bengaluru-Hosur Metro) ಬಗ್ಗೆ ಬಿಎಂಆರ್‌ಸಿಎಲ್ ಮಹತ್ವ ಅಪ್ಡೇಟ್ ನೀಡಿದೆ. ಬೆಂಗಳೂರು ಮತ್ತು ಹೊಸೂರು ನಡುವೆ ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ ಮಾರ್ಗವನ್ನು ನಿರ್ಮಿಸುವ ತಮಿಳುನಾಡಿನ ಯೋಜನೆಯು ತಾಂತ್ರಿಕ ಕಾರ್ಯಸಾಧನೆ ಸಾಧ್ಯವಿಲ್ಲ ಎಂದು ಹೇಳಿದೆ. ವರದಿ ಪ್ರಕಾರ ಈ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದೆ. ಇದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್)ನ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಈಗಾಗಲೇ ಮೆಟ್ರೋ ಯೋಜನೆಯನ್ನು ನಾಲ್ಕು ಕಡೆ ವಿಸ್ತರಣೆ ಮಾಡಲು ಕಾರ್ಯತಂತ್ರಗಳನ್ನು ಹಾಕಿಕೊಂಡಿದೆ. ಅದರಲ್ಲಿ ಮೂರು ವಿಸ್ತರಣೆಗಳು ಮತ್ತು ಒಂದು ಹೊಸ ಮಾರ್ಗವನ್ನು ಪರಿಶೀಲಿಸುತ್ತಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಬೆಂಗಳೂರು ಮೆಟ್ರೋವನ್ನು 470 ಕಿ.ಮೀ.ಗೆ ವಿಸ್ತರಿಸಲು ಯೋಜನೆ ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರ ಬಿಎಂಆರ್ಸಿಎಲ್ಗೆ ಕೇಳಿತ್ತು. ಹಾಗಾಗಿ ಬಿಎಂಆರ್‌ಸಿಎಲ್ ಈ ಯೋಜನೆ ಬಗ್ಗೆ ಅಧ್ಯಯವನ್ನು ನಡೆಸಿತ್ತು. 23 ಕಿ.ಮೀ. ಹೊಸೂರು-ಬೊಮ್ಮಸಂದ್ರ ಕಾರಿಡಾರ್ಗೆ ವಿಭಿನ್ನ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳಬಹುದು, ಆದರೆ ನಮ್ಮ ಮೆಟ್ರೋಗೆ ಸಂಯೋಜಿಸಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ಕರ್ನಾಟಕ ಸರ್ಕಾರಕ್ಕೆ ತಿಳಿಸಿದೆ. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ನಡೆಸಿದ ಅಧ್ಯಯನ ಪ್ರಕಾರ, 25 kV AC ಓವರ್‌ಹೆಡ್ ವಿದ್ಯುತ್ ಶಕ್ತಿ ಬಳಸಿಕೊಂಡು ಹೊಸೂರು ಮತ್ತು ಬೊಮ್ಮಸಂದ್ರವನ್ನು ಸಂಪರ್ಕಿಸುವ ಪ್ರಸ್ತಾಪ ಮಾಡಿದೆ.
ಬೊಮ್ಮಸಂದ್ರದಿಂದ ತಮಿಳುನಾಡಿನ ಕಡೆಗೆ ಹಾಗೂ ಅತ್ತಿಬೆಲೆಯವರೆಗೆ ಮೆಟ್ರೋವನ್ನು ವಿಸ್ತರಿಸಲು ಬಿಎಂಆರ್‌ಸಿಎಲ್ ಅಧ್ಯಯನವನ್ನು ನಡೆಸಿತು. ಆದರೆ ಬೊಮ್ಮಸಂದ್ರದಿಂದ ಹೊಸೂರಿಗೆ ಮಾರ್ಗ ನಿರ್ಮಿಸುವುದು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಹೇಳಿದೆ. ಹೊಸೂರು ಮಾರ್ಗವನ್ನು ನಮ್ಮ ವ್ಯವಸ್ಥೆಯಲ್ಲಿ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗಾಗಲೇ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇವೆ.ಮುಂದಿನ ನಿರ್ಧಾರಗಳನ್ನು ಅವರು ತೆಗೆದುಕೊಳ್ಳಲಿದ್ದಾರೆ. ಕೈಗಾರಿಕಾ ಪಟ್ಟಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಮಿಳುನಾಡು ಹೊಸೂರು-ಬೊಮ್ಮಸಂದ್ರ ಮೆಟ್ರೋ ಯೋಜನೆಗೆ ಮುಂದಾಗಿತ್ತು.
ಆದರೆ ಬೆಂಗಳೂರು ಮತ್ತು ಹೊಸೂರು ನಡುವಿನ ನೇರ ಮೆಟ್ರೋ ಸಂಪರ್ಕದ ಕಲ್ಪನೆಗೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ಬೆಂಗಳೂರಿಗಿಂತ ಹೊಸೂರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಮತ್ತು ನಗರಕ್ಕೆ ಮತ್ತಷ್ಟು ಹೊರೆಯಾಗುತ್ತದೆ ಎಂದು ಹೇಳಿದ್ದಾರೆ. ತಮಿಳುನಾಡು ಹೊಸೂರಿನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಕರ್ನಾಟಕದ ಗಡಿಯವರೆಗೆ ಮೆಟ್ರೋ ಆರಂಭಿಸಿದರೆ, ಅತ್ತಿಬೆಲೆಯಲ್ಲಿ ಸುಮಾರು 300 ಮೀಟರ್ ಅಂತರದಲ್ಲಿ ಎರಡು ನಿಲ್ದಾಣಗಳು ಸಿಗಬಹುದು. ಈ ನಿಲ್ದಾಣಗಳನ್ನು ಪಾದಚಾರಿ ಮೇಲ್ಸೇತುವೆಯ ಮೂಲಕ ಸಂಪರ್ಕಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ವಿಶೇಷ ರೈಲು, ವೇಳಾಪಟ್ಟಿ ಇಲ್ಲಿದೆ
ಬೊಮ್ಮಸಂದ್ರ-ಅತ್ತಿಬೆಲೆ ಮಾರ್ಗವು 4ನೇ ಹಂತದ ಅಡಿಯಲ್ಲಿ ನಾಲ್ಕು ನಮ್ಮ ಮೆಟ್ರೋ ವಿಸ್ತರಣೆಗಳಲ್ಲಿ ಒಂದಾಗಿದೆ. ಇದು 7-8 ನಿಲ್ದಾಣಗಳನ್ನು ಹೊಂದಿರುತ್ತದೆ. ಇನ್ನು ಮಾದವರದಿಂದ ತುಮಕೂರುವರೆಗಿನ ಹಸಿರು ಮಾರ್ಗವನ್ನು (59.6 ಕಿ.ಮೀ) ವಿಸ್ತರಿಸುವ ಬಗ್ಗೆ ಬಿಎಂಆರ್‌ಸಿಎಲ್ ಅಧ್ಯಯನ ಮಾಡಿದೆ. 25 ನಿಲ್ದಾಣಗಳನ್ನು ಹೊಂದಿರುವ ಈ 20,896 ಕೋಟಿ ರೂ. ವೆಚ್ಚದ ಮಾರ್ಗಕ್ಕಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದೆ. ಹೀಗೆ ಅನೇಕ ಮೆಟ್ರೋ ಹೊಸ ಯೋಜನೆಗಳನ್ನು ಬಿಎಂಆರ್‌ಸಿಎಲ್ ಹಾಕಿಕೊಂಡಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ