AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ಟೀಕೆ ಬೆನ್ನಲ್ಲೇ ಮಜುಂದಾರ್ ಶಾ ಭೇಟಿಯಾಗಿದ್ಯಾಕೆ? ಡಿಸಿಎಂ ಹೇಳಿದ್ದಿಷ್ಟು

ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿ, ಕಸ ಹಾಗೂ ಟ್ರಾಫಿಕ್ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ಇಂದು (ಅಕ್ಟೋಬರ್ 21) ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಹಾಗಾದ್ರೆ, ಭೇಟಿ ವೇಳೆ ಏನೆಲ್ಲಾ ಚರ್ಚೆ ನಡೆಯಿತು ಎನ್ನುವುದನ್ನು ಡಿಕೆಶಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ಟೀಕೆ ಬೆನ್ನಲ್ಲೇ ಮಜುಂದಾರ್ ಶಾ ಭೇಟಿಯಾಗಿದ್ಯಾಕೆ? ಡಿಸಿಎಂ ಹೇಳಿದ್ದಿಷ್ಟು
ರಮೇಶ್ ಬಿ. ಜವಳಗೇರಾ
|

Updated on:Oct 21, 2025 | 3:42 PM

Share

ಬೆಂಗಳೂರು, (ಅಕ್ಟೋಬರ್ 21): ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ (Kiran Mazumdar Shaw )ಅವರು ಇಂದು (ಅಕ್ಟೋಬರ್ 21) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ರಸ್ತೆ ಗುಂಡಿ, ಕಸ ಹಾಗೂ ಟ್ರಾಫಿಕ್ ಸಮಸ್ಯೆ ಸೇರಿದಂತೆ ಮೂಲಸೌಕರ್ಯ ಕುರಿತು ಶಾ, ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದರು.  ಇದು ಭಾರೀ  ಜಟಾಪಟಿಗೆ ಕಾರಣವಾಗಿತ್ತು. ಈ  ಬೆಳವಣಿಗೆಗಳ ನಡುವೆ ಕಿರಣ್ ಮಜುಂದಾರ್ ದಿಢೀರ್ ಸಿಎಂ-ಡಿಸಿಎ.ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಸಿಎಂ ಡಿಸಿಎಂನ ಭೇಟಿಯಾಗಿದ್ಯಾಕೆ?

ಬೆಂಗಳೂರಿನಲ್ಲಿ ಮೂಲಸೌಕರ್ಯ ಕುರಿತು ಶಾ ಮತ್ತು ಕರ್ನಾಟಕದ ಸಚಿವರ ನಡುವಿನ ವಾಗ್ವಾದದ ನಂತರ ಈ ಭೇಟಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ, ಮಜುಂದಾರ್ ಶಾ ಅವರು ಉದ್ಯಮಿಯಾಗಿರುವ ತಮ್ಮ ಸೋದರಳಿಯನ ಮದುವೆಗೆ ಆಹ್ವಾನಿಸಲು ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಭೇಟಿ ಬಗ್ಗೆ ಡಿಕೆಶಿ ಹೇಳಿದ್ದೇನು?

ಇನ್ನು ಉದ್ಯಮಿ ಕಿರಣ್ ಮಜುಂದಾರ್​ ಶಾ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬೆಂಗಳೂರು, ರಾಜ್ಯದ ಹಿತಕ್ಕೆ ಸಹಕಾರ ನೀಡುತ್ತೇನೆ ಎಂದಿದ್ದಾರೆ. ಅವರನ್ನೆಲ್ಲಾ ಕರೆದು ನಾನು ಮೀಟಿಂಗ್ ಮಾಡುತ್ತಿದ್ದೇನೆ. ಈಗ ಎಲ್ಲಾ ಪಾಲಿಕೆಗಳಿಗೆ ಹೋಗಿ ಭೇಟಿ ಮಾಡುತ್ತಿದ್ದೇನೆ. ಬಳಿಕ ಐಟಿ-ಬಿಟಿಯವರನ್ನ ಕರೆದು ಸಭೆ ಮಾಡುತ್ತೇನೆ ಎಂದರು.

ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದ ಮಜುಂದಾರ್  ಟ್ವೀಟ್

ಕಿರಣ್ ಮಜುಂದಾರ್ ಮತ್ತು ಮತ್ತೋರ್ವ ಉದ್ಯಮಿ ಟಿವಿ ಮೋಹನ್ ದಾಸ್ ಪೈ, ಸತತವಾಗಿ ಬೆಂಗಳೂರಿನ ಮೂಲಭೂತ ಸೌಕರ್ಯ, ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನ ಗುಂಡಿ ಬಿದ್ದ ರಸ್ತೆಯ ಬಗ್ಗೆ ಸಾಮಾಜಿಜ ಜಾಲತಾಣಗಳ ಮೂಲಕ ಧ್ವನಿ ಎತ್ತುತ್ತಲೇ ಬರುತ್ತಿದ್ದಾರೆ. ಉದ್ಯಮಿಗಳ ಟೀಕೆ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿತ್ತು ಎನ್ನುವುದು ಒಂದು ಕಡೆ. ಮತ್ತೊಂದು ಕಡೆ, ಸರ್ಕಾರಕ್ಕೆ ಇದು ತೀವ್ರ ಮುಜುಗರವನ್ನುಂಟು ಮಾಡಿದೆ.

ಇದನ್ನೂ ಓದಿ: ರಸ್ತೆ ಸರಿಪಡಿಸೋದು ನಮ್ಮ ಅಜೆಂಡಾ ಎಂದ ಉದ್ಯಮಿ ಕಿರಣ್ ಮಜುಂದಾರ್ ಶಾ

ಅದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಾಕ್ಸಮರಕ್ಕೆ ಕಾರಣವಾಗಿತ್ತು. ಕಿರಣ್ ಮಜುಂದಾರ್ ಶ ಮತ್ತು ಮೋಹನ್ ದಾಸ್ ಪೈ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಕಿರಣ್ ಶಾ ಪ್ರತಿಕ್ರಿಯಿಸಿ, ಬಿಜೆಪಿ ಕಾಲದಲ್ಲೂ ನಾವು ಮೂಲಭೂತ ಸೌಕರ್ಯ ಸರಿಯಿಲ್ಲದಿದ್ದಾಗ ಎಚ್ಚರಿಸಿದ್ದೆವು ಎಂದು ಹೇಳಿದ್ದರು.

ಬೆಂಗಳೂರಿನ ಹದೆಗೆಟ್ಟ ರಸ್ತೆಯ ಬಗ್ಗೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದ ಕಿರಣ್ ಮಜುಂದಾರ್ ಗೆ ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ ಸಹ ತಿರುಗೇಟು ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಿರುಣ್ ಮಜುಂದಾರ್ ಅವರು ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

Published On - 3:38 pm, Tue, 21 October 25