ದೀಪಾವಳಿ ಪ್ರಯುಕ್ತ ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ವಿಶೇಷ ರೈಲು, ವೇಳಾಪಟ್ಟಿ ಇಲ್ಲಿದೆ
ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣಕ್ಕೆ ಒಂದು-ಮಾರ್ಗದ ವಿಶೇಷ ರೈಲು ಸೇವೆ ಒದಗಿಸಿದೆ. ನಾಳೆಯಿಂದ ಅಂದರೆ ಅಕ್ಟೋಬರ್ 22ರಿಂದ ಈ ವಿಶೇಷ ರೈಲು ಸಂಚಾರ ಆರಂಭಿಸಲಿದೆ. ಹಾಗಾದ್ರೆ, ಈ ರೈಲು ಎಲ್ಲಿಲ್ಲಿ ನಿಲುಗಡೆಯಾಗಲಿದೆ ಎನ್ನುವ ವೇಳಾಪಟ್ಟಿ ಈ ಕೆಳಗಿನಂತಿದೆ.

ಬೆಂಗಳೂರು, (ಅಕ್ಟೋಬರ್ 20): ದೀಪಾವಳಿ ಹಬ್ಬದ (Deepavali Festival) ಪ್ರಯುಕ್ತ ಜನರು ಊರಿನತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಬಸ್ ಹಾಗೂ ರೈಲುಗಳು ತುಂಬಿ ತುಳುಕುತ್ತಿವೆ. ಇದನ್ನು ಅರಿತ ನೈಋತ್ಯ ರೈಲ್ವೆಯು (Western Railways), ಪ್ರಯಾಣಿಕರ ದಟ್ಟಣೆ ಕಡಿಮೆ ಬೆಂಗಳೂರು ಟು ವಿಶಾಖಪಟ್ಟಣ (Bengaluru To Visakhapatnam) ನಡುವೆ ವಿಶೇಷ ರೈಲು ಬಿಟ್ಟಿದೆ. ಹೌದು.. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣಂಗೆ ಒಂದು-ಮಾರ್ಗದ ವಿಶೇಷ ರೈಲು ಸೇವೆ ಆರಂಭಿಸಲಿದೆ.
ರೈಲಿನ ವೇಳಾಪಟ್ಟಿ ಇಂತಿದೆ
ರೈಲು ಸಂಖ್ಯೆ 08544 ಅಕ್ಟೋಬರ್ 22, 2025 ರಂದು ಮಧ್ಯಾಹ್ನ 3:50ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟ, ಗೂಡೂರು, ನೆಲ್ಲೂರು, ಗುಡಿವಾಡ, ಕೈಕಲೂರು, ಆಕಿವಿಡು, ಭೀಮಾವರಂ, ತನುಕು, ನಿಡದವೋಲು, ರಾಜಮಂಡ್ರಿ, ಸಾಮಲಕೋಟ, ಎಲಮಂಚಿಲಿ ಮತ್ತು ದುವ್ವಾಡ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿ, ಅಕ್ಟೋಬರ್ 23, 2025 ರಂದು ಮಧ್ಯಾಹ್ನ 1:30ಕ್ಕೆ ವಿಶಾಖಪಟ್ಟಣಂ ನಿಲ್ದಾಣವನ್ನು ತಲುಪಲಿದೆ.
ಹುಬ್ಬಳ್ಳಿ – ಬೆಂಗಳೂರು ನಡುವೆ ವಿಶೇಷ ರೈಲು
ಇನ್ನು ದೀಪಾವಳಿ ವೇಳೆ ರಾಜ್ಯಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯನಗರಿ ಹುಬ್ಬಳ್ಳಿ ಮಧ್ಯೆ ನಿತ್ಯ ʼಸೂಪರ್ ಫಾಸ್ಟ್ ವಿಶೇಷ ರೈಲುʼ ಸಂಚಾರದ ಕೊಡುಗೆಯಾಗಿ ನೀಡಿದೆ. ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಡಿಸೆಂಬರ್ 8ರಿಂದ ಪ್ರತಿನಿತ್ಯವೂ ಈ ವಿಶೇಷ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ರೈಲು ಸಂಖ್ಯೆ 20687 ಮತ್ತು 20688 SBC ಈ ಮಾರ್ಗದಲ್ಲಿ ನಿಯತಕಾಲಿಕವಾಗಿ ಸಂಚಾರ ಆರಂಭಿಸಲಿವೆ.
ಈ ಸೂಪರ್ ಫಾಸ್ಟ್ ರೈಲು ಹುಬ್ಬಳ್ಳಿ, ಕರ್ಜಗಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬಿರೂರು, ಅರಸಿಕೆರೆ, ಸಂಪಿಗೆ ರೋಡ್, ತುಮಕೂರು, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ಮಧ್ಯೆ ಸಂಚರಿಸಲಿದೆ. ರಾಜಧಾನಿ ಮತ್ತು ಉತ್ತರ ಕರ್ನಾಟಕ ಮಾತ್ರವಲ್ಲದೇ, ಮಧ್ಯ ಕರ್ನಾಟಕಕ್ಕೂ ಸಂಪರ್ಕ ಸೇತುವಾಗಿದ್ದು, ಇದರಿಂದ ರಾಜ್ಯದ ಏಳೆಂಟು ಜಿಲ್ಲೆಗಳ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
Published On - 9:51 pm, Mon, 20 October 25




