ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್! ಹಾಲು, ಅಕ್ಕಿ ದುಬಾರಿ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಆಹಾರ ದರ ಶೇ 10-15 ಹೆಚ್ಚಳ

ಹಾಲು, ಅಕ್ಕಿ, ಬೇಳೆಕಾಳು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಬೆಂಗಳೂರಿನ ಹೋಟೆಲ್‌ಗಳ ಮೆನು ಮೇಲೂ ಬಿದ್ದಿದೆ. ಹಲವು ಹೋಟೆಲ್‌ಗಳು ಆಹಾರ ದರವನ್ನು ಶೇ 10ರಿಂದ 15ರಷ್ಟು ಹೆಚ್ಚಿಸಿದ್ದು, ಟೀ-ಕಾಫಿ ದರ 3ರಿಂದ 5 ರೂಪಾಯಿವರೆಗೆ ಏರಿಕೆಯಾಗಿದೆ. ಇನ್ನು ಕೆಲವು ಹೋಟೆಲ್​ಗಳು ದರ ಹೆಚ್ಚಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್! ಹಾಲು, ಅಕ್ಕಿ ದುಬಾರಿ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಆಹಾರ ದರ ಶೇ 10-15 ಹೆಚ್ಚಳ
ಸಾಂದರ್ಭಿಕ ಚಿತ್ರ

Updated on: Nov 05, 2026 | 8:37 AM

ಮುಖ್ಯಾಂಶಗಳು

  • ಹೋಟೆಲ್ ಆಹಾರ ದರ ಶೇ 15ವರೆಗೆ ಹೆಚ್ಚಳ
  • ಹಾಲು, ಅಕ್ಕಿ ಬೆಲೆ ಏರಿಕೆ ಪರಿಣಾಮ
  • ಟೀ-ಕಾಫಿ ದರಕ್ಕೂ 3-5 ರೂಪಾಯಿ ಏರಿಕೆ

ಗಳೂರು, ನವೆಂಬರ್ 5: ಹಾಲು, ಅಕ್ಕಿ ಸೇರಿದಂತೆ ವಿವಿಧ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮದ ಹೊಡೆತ ಇದೀಗ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೂ ಬಿದ್ದಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಕಾರಣ ನಗರದ ಹಲವು ಹೋಟೆಲ್‌ಗಳು ಮೆನು ದರವನ್ನು ಶೇಕಡಾ 10ರಿಂದ 15ರಷ್ಟು ಹೆಚ್ಚಿಸಿವೆ. ಟೀ-ಕಾಫಿ ಮಾತ್ರವಲ್ಲದೆ ಇಡ್ಲಿ, ದೋಸೆಯಂತಹ ಜನಪ್ರಿಯ ತಿಂಡಿ ತಿನಿಸುಗಳ ದರವೂ ಕೆಲವು ಕಡೆ ಹೆಚ್ಚಳವಾಗಿದೆ. ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ನಷ್ಟ ತಪ್ಪಿಸಿಕೊಳ್ಳಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಅಕ್ಕಿ ಬೆಲೆ ಕೆಜಿಗೆ 95-100 ರೂಪಾಯಿವರೆಗೆ ಏರಿಕೆ

ಕಳೆದ ಒಂದು ತಿಂಗಳಲ್ಲಿ ಅಕ್ಕಿಯ ಬೆಲೆ ಕೆಜಿಗೆ 65 ರೂಪಾಯಿಯಿಂದ ಕೆಲವು ಕಡೆ 95 ರೂಪಾಯಿವರೆಗೆ ಏರಿಕೆಯಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲಿಯರ್ಸ್ ಅಸೋಸಿಯೇಷನ್ (BBHA) ಪ್ರತಿನಿಧಿ ಪಿ.ಸಿ. ರಾವ್ ತಿಳಿಸಿದ್ದಾರೆ. ಬೇಳೆಕಾಳುಗಳ ಬೆಲೆಯೂ ಹೆಚ್ಚಳವಾಗಿದ್ದು, ಹಾಲು ಮತ್ತು ಮೊಸರಿನ ದರ ಏರಿಕೆಯು ಹೋಟೆಲ್ ಉದ್ಯಮಕ್ಕೆ ಮತ್ತಷ್ಟು ಹೊರೆ ತಂದಿದೆ ಎಂದು ಅವರು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಈಗಾಗಲೇ ಹಲವು ಹೋಟೆಲ್‌ಗಳು ಮೆನು ದರವನ್ನು ಶೇಕಡ 10ರಿಂದ 15ರಷ್ಟು ಹೆಚ್ಚಿಸಿವೆ.

Loading...

ಹೋಟೆಲ್ ಉದ್ಯಮಕ್ಕೆ ಹಾಲು, ಅಕ್ಕಿ ಬೆಲೆ ಏರಿಕೆಯ ಹೊರೆ

ಎಲ್ಲಾ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾದಾಗ ಆಹಾರ ಪದಾರ್ಥಗಳ ದರ ಏರಿಸುವುದು ಅನಿವಾರ್ಯವಾಗುತ್ತದೆ ಎಂದು ಉತ್ತರ ಬೆಂಗಳೂರಿನ ಹೋಟೆಲ್ ಉದ್ಯಮಿ ಮಹೇಶ್ ಕೆ. ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ. ಮಧ್ಯಪ್ರಾಚ್ಯದಲ್ಲಿ ಅಶಾಂತಿ ಆರಂಭವಾದ ಬಳಿಕ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಕ್ಕಿ ಮತ್ತು ಹಾಲು ಹೋಟೆಲ್ ಉದ್ಯಮದಲ್ಲಿ ಹೆಚ್ಚಾಗಿ ಬಳಕೆಯಾಗುವ ಪ್ರಮುಖ ವಸ್ತುಗಳಾಗಿದ್ದು, ಅವುಗಳ ಬೆಲೆ ಏರಿಕೆಯ ಹೊರೆಯನ್ನು ಸಂಪೂರ್ಣವಾಗಿ ಹೋಟೆಲ್ ಮಾಲೀಕರೇ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೋಟೆಲ್ ಉದ್ಯಮಿಗಳು ತಿಳಿಸಿದ್ದಾರೆ.

ಕೆಲವು ಹೋಟೆಲ್‌ಗಳಲ್ಲಿ ಟೀ-ಕಾಫಿ ದರ ಮಾತ್ರ ಏರಿಕೆ

ಎಲ್ಲಾ ಹೋಟೆಲ್‌ಗಳು ಒಂದೇ ರೀತಿಯಲ್ಲಿ ದರ ಏರಿಕೆ ಮಾಡಿಲ್ಲ. ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಕೆಲವು ಹೋಟೆಲ್‌ಗಳು ಸದ್ಯಕ್ಕೆ ಟೀ ಮತ್ತು ಕಾಫಿ ದರವನ್ನು ಮಾತ್ರ ಹೆಚ್ಚಿಸಿವೆ. ಮುಂದಿನ ಕೆಲ ದಿನಗಳ ಪರಿಸ್ಥಿತಿಯನ್ನು ಗಮನಿಸಿ ಇತರ ಆಹಾರ ಪದಾರ್ಥಗಳ ದರ ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಮಧ್ಯ ಬೆಂಗಳೂರಿನ ಹೋಟೆಲ್ ಉದ್ಯಮಿ ಕೃಷ್ಣ ರಾಜ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಇನ್ನೂ ಕೆಲ ಹೋಟೆಲ್ ಮಾಲೀಕರು ಕೆಎಂಎಫ್​​ನಿಂದ ಮೊಸರಿನ ಅಂತಿಮ ದರದ ಬಗ್ಗೆ ಸ್ಪಷ್ಟತೆ ಸಿಗುವವರೆಗೆ ಕಾಯುತ್ತಿದ್ದಾರೆ. ಅಕ್ಕಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಮಧ್ಯಪ್ರವೇಶಿಸುತ್ತದೆಯೇ ಎಂಬುದನ್ನೂ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೋಟೆಲ್ ಉದ್ಯಮಿಗಳು ತಿಳಿಸಿದ್ದಾರೆ.

ಟೀ-ಕಾಫಿಗೆ 3-5 ರೂ. ಹೆಚ್ಚಳ

ನಗರದ ಹಲವು ಹೋಟೆಲ್‌ಗಳಲ್ಲಿ ಟೀ ಮತ್ತು ಕಾಫಿ ದರ ಸರಾಸರಿ 3ರಿಂದ 5 ರೂಪಾಯಿವರೆಗೆ ಹೆಚ್ಚಳವಾಗಿದೆ. ಇತರ ಆಹಾರ ಪದಾರ್ಥಗಳ ದರ ಏರಿಕೆಯ ಪ್ರಮಾಣ ಹೋಟೆಲ್‌ನಿಂದ ಹೋಟೆಲ್‌ಗೆ ಭಿನ್ನವಾಗಿದೆ. ಉದಾಹರಣೆಗೆ, ಈ ಹಿಂದೆ ಸುಮಾರು 100 ರೂಪಾಯಿಗೆ ದೊರೆಯುತ್ತಿದ್ದ ದೋಸೆಯ ಬೆಲೆ ಕೆಲವು ಕಡೆ ಈಗ 110ರಿಂದ 115 ರೂಪಾಯಿಗೆ ಏರಿಕೆಯಾಗಿದೆ.

ದರ ಏರಿಕೆಗೆ ಗ್ರಾಹಕರ ಆಕ್ರೋಶ

ದರ ಏರಿಕೆಯನ್ನು ಕೆಲವು ಗ್ರಾಹಕರು ಅತಿಯಾದ ಕ್ರಮ ಎಂದು ಟೀಕಿಸಿದ್ದಾರೆ. ಒಂದು ಲೀಟರ್ ಹಾಲಿನ ಬೆಲೆ 8 ರೂಪಾಯಿ ಹೆಚ್ಚಾದರೆ, ಪ್ರತಿಯೊಂದು ಟೀ ಅಥವಾ ಕಾಫಿಯ ದರವನ್ನು 5 ರೂಪಾಯಿ ಹೆಚ್ಚಿಸುವುದು ಸರಿಯಲ್ಲ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ. ಹಾಲಿನ ಬೆಲೆ ಏರಿಕೆಯನ್ನು ನೆಪವಾಗಿಟ್ಟುಕೊಂಡು ಎಲ್ಲಾ ಮೆನು ಪದಾರ್ಥಗಳ ದರ ಹೆಚ್ಚಿಸಬಾರದು ಹಾಗೂ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವಂತೆ ಅವರು ಹೋಟೆಲ್ ಮಾಲೀಕರಿಗೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us