
ಬೆಂಗಳೂರು, ಅಕ್ಟೋಬರ್ 03):ಬೆಂಗಳೂರು ಜಾತ್ರೆ ಬಂದಿದೆ. ಇದೇ ಡಿಸೆಂಬರ್ 4ರಿಂದ 13ರವರೆಗೆ ನಮ್ಮ ಬೆಂಗಳೂರು ಊರಹಬ್ಬ `ಬೆಂಗಳೂರು ಜಾತ್ರೆ’ ನಡೆಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಇಂದು (ಅ.03) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಫ್ರೀಡಂ ಹಬ್ಬ ಈಗಾಗಲೇ ಜನರ ಮನಸು ಗೆದ್ದಿತ್ತು. ಬೆಂಗಳೂರು ಜನರಿಗಾಗಿ ಊರ ಹಬ್ಬ ಮಾಡಬೇಕು ಎಂದು ಸಿಎಂ ಕೂಡ ಹೇಳಿದ್ದರು. ಬೆಂಗಳೂರು ಉತ್ಸವದ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ಡಿ.4ರಿಂದ 13ರವರೆಗೆ `ಬೆಂಗಳೂರು ಜಾತ್ರೆʼ ಆಯೋಜನೆ ಮಾಡುತ್ತಿದ್ದೇವೆ.ಸಂಸ್ಕೃತಿ, ಕಲೆ ಮತ್ತು ಸಾಹಿತ್ಯ ಉತ್ತೇಜಿಸಲು ‘ಬೆಂಗಳೂರು ಜಾತ್ರೆ’ ಆಯೋಜಿಸಲಾಗಿದ್ದು, ದಸರಾದಲ್ಲೂ ಸಾಹಿತ್ಯ, ಸಂಸ್ಕೃತಿ, ಕಲೆ ಪೋಷಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಬೆಂಗಳೂರು ಉತ್ಸವ ಮಾಡಲು ಸರ್ಕಾರ ತೀರ್ಮಾನಿಸಲಾಗಿದ್ದು, ಒಂದೇ ಸ್ಥಳಕ್ಕೆ ಸೀಮಿತವಾಗದೆ ನಗರದ ಹಲವೆಡೆ ಕಾರ್ಯಕ್ರಮಗಳು ನಡೆಯಲಿವೆ.
ಇನ್ನು 10 ದಿನಗಳ ಕಾಲ ನಡೆಯುವ ಈ ಬೆಂಗಳೂರು ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳು ಇರಲಿವೆ. ಬೆಂಗಳೂರು ಮೆಟ್ರೋ, ಪೊಲೀಸ್ ಇಲಾಖೆ, ಬೆಸ್ಕಾಂ ಸೇರಿದಂತೆ ಎಲ್ಲಾ ಅಂಗ ಸಂಸ್ಥೆಗಳು ಸೇರಿ ಈ ಬೆಂಗಳೂರು ಜಾತ್ರೆ ಮಾಡುತ್ತೇವೆ. ಎಲ್ಲಾ ಸಂಸ್ಥೆಗಳಿಗೂ ಪತ್ರ ಬರೆದಿದ್ದೇವೆ. ಐಟಿ ಹಬ್‌ಗಳಿದ್ದಾವೆ, ಖಾಸಗಿ ಶಿಕ್ಷಣ ಸಂಸ್ಥೆಗಳು, ಕೇಂದ್ರದಡಿ ಬರುವ ಇಲಾಖೆಗಳಿದ್ದಾವೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹೀಗಾಗಿ ಅವರಿಗೂ ಕಾರ್ಯಕ್ರಮ ಮಾಡುವಂತೆ ಆಹ್ವಾನ ನೀಡಲಿದ್ದೇವೆ. ಹೋಟೆಲ್, ರೆಸ್ಟೋರೆಂಟ್‌ಗಳಿಗೂ ಆಹ್ವಾನ ನೀಡಿದ್ದು, ಆಯೋಜಕರಾಗಿ ಭಾಗಿಯಾಗುವಂತೆ ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಈ ಹಬ್ಬದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮಕ್ಕೆ ನೋಂದಣಿ ಕಡ್ಡಾಯವಾಗಿದೆ. ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ನೋಂದಣಿ ಮಾಡಿಸುವ ಅಗತ್ಯವಿಲ್ಲ. 15 ದಿನದ ಮೊದಲೇ ಕಾರ್ಯಕ್ರಮದ ಬಗ್ಗೆ ನೋಂದಣಿಗೆ ಅವಕಾಶ ಕಲ್ಪಿಸುತ್ತೇವೆ. ಸೆಂಟ್ರಲ್ ಲೊಕೇಷನ್‌ನಲ್ಲೂ ಪ್ಲ್ಯಾನ್ ಮಾಡುತ್ತಿದ್ದೇವೆ. ವೀಕೆಂಡ್ನಲ್ಲಿ ದೊಡ್ಡ ಕಾರ್ಯಕ್ರಮ ಮಾಡುವ ಯೋಜನೆ ಇದೆ. ಕೊನೆಯ ದಿನ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಮಾಡುವ ಯೋಜನೆ ಇದೆ. ಅದು ಎಲ್ಲಿ ಅಂತ ಪೊಲೀಸ್ ಇಲಾಖೆ ಚರ್ಚಿಸಿ ತೀರ್ಮಾನಿಸುತ್ತೆ. ಸರ್ಕಾರದಿಂದ ಮಾಡುವ ಕಾರ್ಯಕ್ರಮಕ್ಕೆ ಶುಲ್ಕ ಇರೋದಿಲ್ಲ. ಖಾಸಗಿ ಕಂಪನಿಗಳು ಆಯೋಜಿಸಲು ಮನವಿ ಮಾಡುತ್ತಿದ್ದೇವೆ. ಶುಲ್ಕದ ವಿಚಾರ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.
ಬೆಂಗಳೂರಿನ 5 ಮಹಾನಗರ ಪಾಲಿಕೆಗಳಲ್ಲೂ ಕಾರ್ಯಕ್ರಮಗಳು ನಡೆಯಲಿವೆ. ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಉದ್ಯಾನ, ರಸ್ತೆಗಳಲ್ಲಿ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಾನಪದ ಕಲೆಗಳ ಪ್ರದರ್ಶನ, ನಮ್ಮ ರಸ್ತೆ, ನಮ್ಮ ಬಡಾವಣೆ, ನಮ್ಮ ಸಂಸ್ಥೆ, ನಮ್ಮ ಕಲೆ ಹೀಗೆ ಎಲ್ಲರ ಜಾತ್ರೆ. ಜಿಬಿಎ, ಬಿಡಿಎ, ಕನ್ನಡ-ಸಂಸ್ಕೃತಿ ಇಲಾಖೆ ಸೇರಿ ಹಣ ಹಾಕಿ ಮಾಡಲಾಗುತ್ತೆ. ಕನ್ನಡ-ಸಾಂಸ್ಕೃತಿಕ ಇಲಾಖೆಯಿಂದಲೇ 5 ಕೋಟಿ ಹಣ ಮೀಸಲಿದೆ. ಈ ರೀತಿ ಕಾರ್ಯಕ್ರಮದಿಂದ ಬೆಂಗಳೂರಿಗೆ ಹೆಚ್ಚು ಪ್ರವಾಸಿಗರು ಬರುತ್ತಾರೆ. ಇದು ಬೆಂಗಳೂರಿನ ಆರ್ಥಿಕ ಪ್ರಗತಿಗೂ ಸಹಕಾರವಾಗುತ್ತೆ. ಖಾಸಗಿ ಸಂಸ್ಥೆ ಬೆಂಗಳೂರು ಹಬ್ಬ ಆಯೋಜನೆ ಮಾಡುತ್ತಾ ಇತ್ತು. ಇದೀಗ ರಾಜ್ಯ ಸರ್ಕಾರವೇ ಕಾರ್ಯಕ್ರಮ ಮಾಡಲು ಮುಂದಾಗಿದೆ. 15 ರಿಂದ 20 ಕೋಟಿ ರೂ. ವೆಚ್ಚದಲ್ಲಿ ‘ಬೆಂಗಳೂರು ಜಾತ್ರೆ’ ಆಚರಣೆಗೆ ನಿರ್ಧರಿಸಲಾಗಿದೆ.
Published On - 3:07 pm, Sat, 3 October 26