ಅಂತ್ಯಕ್ರಿಯೆ ಸ್ಥಳದಿಂದ ಶವ ವಶಕ್ಕೆ ಪಡೆದ ಪೊಲೀಸರು: ಮಂಚದಿಂದ ಬಿದ್ದು ಸತ್ತಿದ್ಳು ಅಂದಿದ್ದ ಮಗ; ರಿಪೋರ್ಟ್ನಿಂದ ಕೊಲೆ ರಹಸ್ಯ ರಿವೀಲ್
ಬೆಂಗಳೂರಿನ ಕಾಡುಗೋಡಿಯಲ್ಲಿ ಮಗನೇ ತಾಯಿಯನ್ನು ಕೊಲೆ ಮಾಡಿ, ಮಂಚದಿಂದ ಬಿದ್ದು ಸಾವನ್ನಪ್ಪಿದ್ದಾಳೆಂದು ನಂಬಿಸಲು ಯತ್ನಿಸಿದ್ದ. ಆದರೆ ಪೊಲೀಸರು ಶವ ಸಂಸ್ಕಾರ ತಡೆದು, ಮರಣೋತ್ತರ ಪರೀಕ್ಷೆ ಮಾಡಿಸಿದಾಗ ಸತ್ಯ ಬಯಲಾಗಿದೆ. ತಾಯಿ ಮದ್ಯಪಾನ, ಆಭರಣದ ವಿಷಯಕ್ಕೆ ಜಗಳ ಮಾಡುತ್ತಿದ್ದಳು ಎಂಬುದು ಕೊಲೆಗೆ ಕಾರಣವೆಂದು ಆರೋಪಿ ಮಗ ಒಪ್ಪಿಕೊಂಡಿದ್ದಾನೆ. ಕಾಡುಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮುಖ್ಯಾಂಶಗಳು
- ಮಂಚದಿಂದ ಬಿದ್ದು ತಾಯಿ ಅಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ನಂಬಿಸಿದ್ದ ಮಗ
- ಗುಟ್ಟಾಗಿ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ
- ಮರಣೋತ್ತರ ಪರೀಕ್ಷೆ ರಿಪೋರ್ಟ್ನಲ್ಲಿ ಬಿಚ್ಚಿಕೊಂಡ ರಹಸ್ಯ
ಬೆಂಗಳೂರು. ಅ.8: ಮಂಚದಿಂದ ಬಿದ್ದು ತಾಯಿ ಅಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ನಂಬಿಸಿ, ಗುಟ್ಟಾಗಿ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿದ್ದ ಮಗನ ಕಳ್ಳಾಟವನ್ನು ಕಾಡುಗೋಡಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿ, ಸ್ವಾಭಾವಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಮೂರನೇ ಪುತ್ರ ಬಾಲಾಜಿಯನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿಯ ಬೇವಿನಮರ ಕಾಲೋನಿಯ ನಿವಾಸಿ ಭಾಗ್ಯಮ್ಮ (60) ಕೊಲೆಯಾದ ದುರದೃಷ್ಟಕರ ತಾಯಿ.
ಕಳೆದ ಸೆಪ್ಟೆಂಬರ್ 24 ರಂದು ರಾತ್ರಿ ಭಾಗ್ಯಮ್ಮ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಸೆಪ್ಟೆಂಬರ್ 25 ರಂದು ಆಕೆಯ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ಬೇವಿನಮರ ಕಾಲೋನಿಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಶವಸಂಸ್ಕಾರ ಮುಗಿಯುವ ಹಂತದಲ್ಲಿದ್ದಾಗ, ಘಟನೆಯ ಸುಳಿವು ತಿಳಿದ ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿದರು.
“ಸಾವು ಅನುಮಾನಾಸ್ಪದವಾಗಿದೆ, ಮರಣೋತ್ತರ ಪರೀಕ್ಷೆ ಮಾಡಬೇಕು” ಎಂದು ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆಯಲು ಮುಂದಾದರು. ಆದರೆ, ಕುಟುಂಬಸ್ಥರು ಇದನ್ನು ತೀವ್ರವಾಗಿ ವಿರೋಧಿಸಿ, ತಾಯಿ ಮಂಚದ ಮೇಲಿಂದ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾಳೆ, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನಂಬಿಸಲು ಯತ್ನಿಸಿದರು. ಆದರೆ, ಸಾರ್ವಜನಿಕರನ್ನು ಸಮಾಧಾನಪಡಿಸಿ ಮನವೊಲಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಅಂದೇ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು.
ಮರಣೋತ್ತರ ಪರೀಕ್ಷೆ ರಿಪೋರ್ಟ್ನಲ್ಲಿ ಬಿಚ್ಚಿಕೊಂಡ ರಹಸ್ಯ
ಇತ್ತೀಚೆಗೆ ಪೊಲೀಸರ ಕೈಸೇರಿದ ಮರಣೋತ್ತರ ಪರೀಕ್ಷೆಯ ವರದಿ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ. ಡೆತ್ ಡ್ಯೂ ಟು ಹೆಡ್ ಇಂಜುರಿ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಮಹಿಳೆಯ ದೇಹದ ಬರೋಬ್ಬರಿ 12 ಕಡೆಗಳಲ್ಲಿ ಗಂಭೀರ ಗಾಯಗಳಾಗಿದ್ದವು. ಸಾಮಾನ್ಯವಾಗಿ ಮಂಚದ ಮೇಲಿಂದ ಬಿದ್ದರೆ ದೇಹದ 12 ಕಡೆ ಗಾಯಗಳಾಗಲು ಹೇಗೆ ಸಾಧ್ಯ? ಎಂದು ತಕ್ಷಣವೇ ಯೋಚಿಸಿದ ಕಾಡುಗೋಡಿ ಪೊಲೀಸರು, ಸ್ಥಳೀಯರು ಹಾಗೂ ಅಕ್ಕಪಕ್ಕದವರನ್ನು ಖಾಸಗಿಯಾಗಿ ವಿಚಾರಣೆ ನಡೆಸಿದರು. ಈ ವೇಳೆ ಸೆಪ್ಟೆಂಬರ್ 24 ರಂದು ರಾತ್ರಿ ಭಾಗ್ಯಮ್ಮನ ಮನೆಯಲ್ಲಿ ಭಾರಿ ಗಲಾಟೆ ನಡೆದಿತ್ತು ಎಂಬ ಸ್ಫೋಟಕ ಮಾಹಿತಿ ಸಿಕ್ಕಿತು.
ಇದನ್ನೂ ಓದಿ: ಒಂದು ಬಳೆಯಿಂದ ಜೋಗತಿ ಕೊಲೆ ಕೇಸ್ ರಹಸ್ಯ ಭೇದಿಸಿದ ಪೊಲೀಸರು: ಸ್ಫೋಟಕ ಹೇಳಿಕೆ ನೀಡಿದ ಪ್ರಿಯಕರ
ಪೊಲೀಸರ ಮುಂದೆ ಮಗ ಬಾಯ್ಬಿಟ್ಟ 3 ಕೊಲೆ ಕಾರಣಗಳು:
ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಭಾಗ್ಯಮ್ಮನ ಮೂರನೇ ಪುತ್ರ ಬಾಲಾಜಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತಾಯಿಯನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರ ಎದುರು ಆತ ನೀಡಿದ ಮೂರು ಪ್ರಮುಖ ಕಾರಣಗಳೇನು? ಮೊದಲ ಕಾರಣ, ವ್ಯಕ್ತಿಯೊಬ್ಬ ಮನೆ ಬಳಿ ಬಂದು ಕುಳಿತುಕೊಳ್ಳುತ್ತಿದ್ದ ಹಾಗೂ ತಾಯಿಯ ಬಗ್ಗೆ ಏರಿಯಾ ಜನರು ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಆತ ತೀವ್ರ ಕೋಪಗೊಂಡಿದ್ದ. ಎರಡನೇ ಕಾರಣ ಗಂಡನ ಸಾವಿನ ಬಳಿಕ ತಾಯಿಗೆ ಮದ್ಯಪಾನದ ಚಟವಿತ್ತು. ಬೆಳಿಗ್ಗೆಯಿಂದಲೇ ಕುಡಿದು ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದಳು ಎಂದು ಆರೋಪಿಸಿದ್ದಾನೆ. ಮೂರುನೇ ಕಾರಣ, ತಾಯಿಯ 32 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಪುತ್ರ ಬಾಲಾಜಿ ಅಡಮಾನ ಇಟ್ಟಿದ್ದ. ಅದನ್ನು ಬಿಡಿಸಿಕೊಡುವಂತೆ ತಾಯಿ ಪದೇ ಪದೇ ಜಗಳ ತೆಗೆಯುತ್ತಿದ್ದಳು. ಈ ಮೂರೂ ಕಾರಣಗಳಿಂದ ಆಕ್ರೋಶಗೊಂಡಿದ್ದ ಬಾಲಾಜಿ, ರಾತ್ರಿ ಗಲಾಟೆ ಮಾಡಿ ತಾಯಿಯನ್ನು ಹೊಡೆದು ಕೊಲೆ ಮಾಡಿದ್ದ. ಪ್ರಸ್ತುತ ಕಾಡುಗೋಡಿ ಠಾಣೆ ಪೊಲೀಸರು ಆರೋಪಿ ಬಾಲಾಜಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ರಾಜ್ಯ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ




