ಬೆಂಗಳೂರಿನ ಈ ಭಾಗದ ಜನರಿಗೆ ಸಿಹಿಸುದ್ದಿ: 6 ವರ್ಷಗಳ ನಂತರ ಸಂಚಾರಕ್ಕೆ ಮುಕ್ತವಾಗಲಿದೆ ಈ ರಸ್ತೆ

ಬೆಂಗಳೂರಿನ ಕಾಮರಾಜ್ ರಸ್ತೆಯು 2026ರ ಜನವರಿ ಮೊದಲ ವಾರದಲ್ಲಿ ದ್ವಿಮುಖ ಸಂಚಾರಕ್ಕಾಗಿ ಸಂಪೂರ್ಣವಾಗಿ ತೆರೆಯಲಿದೆ. ಮೆಟ್ರೋ ಕಾಮಗಾರಿಗಾಗಿ 2019ರಲ್ಲಿ ಮುಚ್ಚಲಾಗಿದ್ದ ಈ ಪ್ರಮುಖ ರಸ್ತೆಯ ಪುನರಾರಂಭದಿಂದ ಕಬ್ಬನ್ ರಸ್ತೆ ಮತ್ತು ಎಂಜಿ ರಸ್ತೆಗಳ ನಡುವಿನ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದ್ದು, ವಾಣಿಜ್ಯ ಪ್ರದೇಶಕ್ಕೆ ಸುಲಭ ಸಂಚಾರ ಸಾಧ್ಯವಾಗಲಿದೆ.

ಬೆಂಗಳೂರಿನ ಈ ಭಾಗದ ಜನರಿಗೆ ಸಿಹಿಸುದ್ದಿ: 6 ವರ್ಷಗಳ ನಂತರ ಸಂಚಾರಕ್ಕೆ ಮುಕ್ತವಾಗಲಿದೆ ಈ ರಸ್ತೆ
ಸಾಂದರ್ಭಿಕ ಚಿತ್ರ

Updated on: Dec 22, 2025 | 10:06 AM

ಬೆಂಗಳೂರು, ಡಿ.22: ಬಿಎಂಆರ್‌ಸಿಎಲ್ ಬೆಂಗಳೂರಿನ ಈ ಭಾಗದ ಜನರಿಗೆ ಒಂದು ಸಿಹಿಸುದ್ದಿ ನೀಡಿದೆ. ಬಹಳ ವರ್ಷಗಳ ನಂತರ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ. ಇದು ಈ ನಗರದಲ್ಲಾಗುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಕಬ್ಬನ್ ರಸ್ತೆ ಮತ್ತು ಎಂಜಿ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್ ನಡುವಿನ ಜನನಿಬಿಡ ಸಂಪರ್ಕವಾದ ಕಾಮರಾಜ್ ರಸ್ತೆಯು (Kamaraj Road) ಜನವರಿ 2026 ರ ಮೊದಲ ವಾರದಲ್ಲಿ ದ್ವಿಮುಖ ಸಂಚಾರಕ್ಕಾಗಿ ಸಂಪೂರ್ಣವಾಗಿ ಮತ್ತೆ ತೆರೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಈ ರಸ್ತೆಯಲ್ಲಿ ದೊಡ್ಡ ಮಟ್ಟದ ಜನ ದಟ್ಟಣೆಗಳು ಆಗುತ್ತಿತ್ತು. ವ್ಯವಹಾರಿಕ ಕೇಂದ್ರವಾಗಿರುವ ಈ ರಸ್ತೆಯಲ್ಲಿ ಇನ್ನು ಮುಂದೆ ಈ ಜನ ದಟ್ಟಣೆ ಕಡಿಮೆ ಆಗಲಿದೆ ಎಂದು ಹೇಳಲಾಗಿದೆ.

ಎಂಜಿ ರಸ್ತೆಯಲ್ಲಿ ಪರ್ಪಲ್ ಲೈನ್ ಹಾಗೂ ಇನ್ನು ಮುಂದೆ ಬರಲಿರುವ ಪಿಂಕ್ ಲೈನ್ ಮೆಟ್ರೋ ಭೂಗತ ಇಂಟರ್-ಚೇಂಜ್ ನಿಲ್ದಾಣವನ್ನು ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಈ ರಸ್ತೆಯಲ್ಲಿ ಕಾಮಗಾರಿಯನ್ನು 2019ರಲ್ಲಿ ಪ್ರಾರಂಭಿಸಿತ್ತು. 2023ರ ವೇಳೆ ಇದರ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಹೇಳಿತ್ತು. ಆದರೆ ಕೊರೊನಾದಿಂದ ಈ ಕಾರ್ಯ ಮುಂದುವರಿಸಲು ಆಗಲಿಲ್ಲ. ಇದರ ಜತೆಗೆ ಸಂಕೀರ್ಣ ಸುರಂಗ ಕೊರೆಯುವ ಕಾರ್ಯಾಚರಣೆಗಳು ಮತ್ತು ಇತರ ತಾಂತ್ರಿಕ ಅಡಚಣೆಗಳಿಂದ ಹೇಳಿದ ಸಮಯಕ್ಕೆ ಪೂರ್ಣಗೊಳಿಸಲು ಆಗಿಲ್ಲ. ಇದೀಗ ಇದರ ಕಾಮಾಗಾರಿ ಪೂರ್ಣಗೊಳ್ಳುತ್ತ ಬಂದಿದೆ ಎಂದು ಹೇಳಿದೆ.

ಇನ್ನು 2025ರ ಫೆಬ್ರವರಿಯಂದು ಬಿಎಂಆರ್‌ಸಿಎಲ್ ಒಂದು ಕ್ಯಾರೇಜ್‌ವೇ (ರಸ್ತೆಯ ಒಂದು ಭಾಗ)ನ್ನು ತೆರೆದು ಭಾಗಶಃ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ರಸ್ತೆ ಕಾವೇರಿ ಎಂಪೋರಿಯಂ ಕಡೆಯಿಂದ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ವಾಹನಗಳು ಚಲಿಸಲು ಅವಕಾಶ ಮಾಡಿಕೊಟ್ಟಿತು. ಉಳಿದ ಭಾಗದಲ್ಲಿ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದೆ. ಬಿಎಂಆರ್‌ಸಿಎಲ್ ಪ್ರಕಾರ, ಈ ಭಾಗದ ಎಲ್ಲಾ ಸಿವಿಲ್ ಕೆಲಸಗಳು ಈಗ ಪೂರ್ಣಗೊಂಡಿವೆ ಎಂದು ಹೇಳಿದೆ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ್ ಚವಾಣ್ ಹೇಳಿರುವ ಪ್ರಕಾರ, ಅಂತಿಮ ಹಂತದ ಕೆಲಸ ಮಾತ್ರ ಬಾಕಿ ಇದ್ದು, ಸಂಚಾರ ಪೊಲೀಸರು ಅನುಮತಿ ನೀಡಿದ ನಂತರ ರಸ್ತೆಯನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ. ಇದರ ಪುನರ್ನಿರ್ಮಾಣ ವೆಚ್ಚ ಸುಮಾರು 3 ಕೋಟಿ ರೂ. ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ: ಕಳಪೆ ಏರ್ ಕ್ವಾಲಿಟಿಯಲ್ಲಿ ಬೆಂಗಳೂರನ್ನೂ ಮೀರಿಸುತ್ತಿದೆ ಈ ಜಿಲ್ಲೆ!

ಜನವರಿ 2 ರಿಂದ ದ್ವಿಮುಖ ಸಂಚಾರ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ರಸ್ತೆ ಮತ್ತೆ ತೆರೆದ ನಂತರ, ಕಮರ್ಷಿಯಲ್ ಸ್ಟ್ರೀಟ್, ಡಿಕೆನ್ಸನ್ ರಸ್ತೆ ಮತ್ತು ಕಬ್ಬನ್ ರಸ್ತೆಯ ನಡುವೆ ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆಯ ಕಡೆಗೆ ಚಲಿಸುವ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ