
ಬೆಂಗಳೂರು, ಜನವರಿ 05: ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಹುಡುಕಿ ಹುಡುಕಿ ದಂಡ ವಿಧಿಸಲಾಗುತ್ತಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತ್ಯಾಜ್ಯ ಎಸೆಯುವವರ ಮನೆ ಮುಂದೆಯೇ ಲೋಡ್ಗಟ್ಟಲೆ ಕಸ ಸುರಿದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಅವರಿಗೆ ನಾಚಿಕೆ ಉಂಟು ಮಾಡುವ ಕೆಲಸವನ್ನೂ ಮಾಡಿದೆ. ಹೀಗಿದ್ದರೂ ಬೆಂಗಳೂರು ಮಂದಿ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ನೀವೇನಾದ್ರೂ ಮಾಡ್ಕೊಳ್ಳಿ, ನಾವು ಮಾತ್ರ ಹೀಗೆ ಇರೋದು ಎಂಬ ರೀತಿ ಕೆಲವರು ವರ್ತಿಸುತ್ತಿದ್ದಾರೆ. ಈ ನಡುವೆ ಜನವಸತಿ ಪ್ರದೇಶದಲ್ಲಿ ಕಸ ಎಸೆದು ಹೋಗುತ್ತಿದ್ದ ಯುವತಿಗೆ ಸ್ಥಳೀಯರೇ ಕ್ಲಾಸ್ ತೆಗೆದುಕೊಂಡ ವಿಡಿಯೋವೊಂದು ವೈರಲ್ ಆಗಿದೆ.
ಜಯನಗರದ 8ನೇ ಅಡ್ಡ ರಸ್ತೆಯ ಮಾರುತಿ ಲೇಔಟ್ನಲ್ಲಿ ಓರ್ವ ಯುವತಿ ತನ್ನ ಸ್ಕೂಟರ್ನಲ್ಲಿ ರಾಶಿ ರಾಶಿ ಕಸ ತೆಗೆದುಕೊಂಡು ಬಂದು ಪಕ್ಕದ ಏರಿಯಾದ ಜನವಸತಿ ಪ್ರದೇಶದ ಬಳಿ ಸುರಿದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಇಲ್ಲಿ ಕಸ ಹಾಕಬೇಡಿ ಎಂದು ಮನವರಿಕೆ ಮಾಡಿದ್ದಾರೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ಈ ರೀತಿ ಕಸ ಹಾಕಿ ಹೋದ್ರೆ ಇಲ್ಲಿನ ನಿವಾಸಿಗಳಿಗೆ ಬಹಳ ಸಮಸ್ಯೆ ಆಗುತ್ತೆ ಎಂದು ಹೇಳಿದರೂ ಯುವತಿ ಮಾತ್ರ ಯಾವುದನ್ನೂ ಲೆಕ್ಕಿಸಿಲ್ಲ. ಬದಲಾಗಿ ತನಗೆ ಬುದ್ಧಿ ಹೇಳಿದವರ ಜೊತೆಗೇ ವಾಗ್ವಾದಕ್ಕೆ ಇಳಿದಿದ್ದಾಳೆ.
ಇದನ್ನೂ ಓದಿ: ಕಸ ಎಸೆದಿದ್ದಲ್ಲದೆ ನಗರ ಸಭೆ ಸಿಬ್ಬಂದಿಗೇ ಆವಾಜ್; ಯುವಕನ ದ್ವಿಚಕ್ರ ವಾಹನ ವಶಕ್ಕೆ
ಸ್ಥಳೀಯರ ಮಾತಿಗೆ ಕೋಪಗೊಂಡ ಯುವತಿ ನಾನು ಇಲ್ಲೇ ಕಸವನ್ನು ಹಾಕೋದು, ಯಾರು ಏನು ಬೇಕಾದರೂ ಮಾಡಿಕೊಳ್ಲಿ ಎಂದು ಆವಾಜ್ ಹಾಕಿದ್ದಾಳೆ. ಈ ವೇಳೆ ನೀವು ಓದಿದ್ದೀರಲ್ವಾ? ನಿಮಗೆ ಇಷ್ಟೂ ಬುದ್ಧಿ ಇಲ್ವಾ ಎಂದು ಸ್ಥಳಿಯರು ಆಕೆಯನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತೀವಿ ಅಂತಲೂ ಹೇಳಿದ್ದಾರೆ. ಹೀಗಿದ್ದರೂ ತಲೆ ಕೆಡಿಸಿಕೊಳ್ಳದ ಆಕೆ ಕಸವನ್ನ ರಸ್ತೆ ಮಧ್ಯದಲ್ಲೇ ಚೆಲ್ಲಿ ತೆರಳಿದ್ದಾಳೆ. ಬಳಿಕ ಸ್ಥಳೀಯ ನಿವಾಸಿಗಳು ಮೊದಲೇ ಹೇಳಿದಂತೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಯುವತಿಯ ಕೆಲಸಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:57 pm, Mon, 5 January 26