
ಬೆಂಗಳೂರು, ಮೇ 29: ರಾಜ್ಯದಲ್ಲಿ ಮಳೆಯ (rain) ಆರ್ಭಟ ಮುಂದುವರಿದೆ. ಇತ್ತ ಸಿಲಿಕಾನ್ ಸಿಟಿಯಲ್ಲಿ ಕೂಡ ಮೋಡ ಕವಿದ ವಾತಾವರಣವಿದ್ದು, ಆಗಾಗ ವರುಣ ದೇವ ಎಂಟ್ರಿ ಕೊಡುತ್ತಿದ್ದಾನೆ. ಮಳೆಯಿಂದಾಗಿ ಕೆಲ ರಸ್ತೆಗಳು ಕೆರೆಯಂತಾಗಿವೆ. ವಾಹನಗಳ ಸಂಚಾರದಿಂದ ಇತರೆ ಸವಾರರ ಮೇಲೆ ನೀರು ಹಾರುತ್ತೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಾರಿಗೆ ಮಳೆ ನೀರು ಹಾರಿದ್ದಕ್ಕೆ ಚಾಲಕನ ಬೆರಳು ಕಚ್ಚಿ (finger Bite) ವಿಕೃತಿ ಮೆರೆದಿರುವಂತಹ ಘಟನೆ ಮೇ 25ರ ರಾತ್ರಿ ಲುಲು ಮಾಲ್ ಅಂಡರ್ ಪಾಸ್ ಬಳಿ ನಡೆದಿದೆ.
ಮೆಜೆಸ್ಟಿಕ್ನಿಂದ ಲುಲು ಮಾಲ್ ಕಡೆ ಜಯಂತ್ ದಂಪತಿಗಳು ತೆರಳುತ್ತಿದ್ದರು. ಈ ವೇಳೆ ಓಕುಳಿಪುರಂ ಅಂಡರ್ ಪಾಸ್ನಲ್ಲಿ ನಿಂತಿದ್ದ ನೀರು ಪಕ್ಕದ ಕಾರಿಗೆ ಹಾರಿದೆ. ಕೂಡಲೇ ಕಾರು ನಿಲ್ಲಿಸಿದ ಚಾಲಕ ಅವಾಚ್ಯ ಪದಗಳಿಂದ ಜಯಂತ್ರನ್ನು ನಿಂದಿಸಿದ್ದಾನೆ. ಈ ಬಗ್ಗೆ ವ್ಯಕ್ತಿ ಕ್ಷಮೆ ಕೇಳಿದ್ದರೂ ಬಿಟ್ಟಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ಯಾನ್ಸ್ ಮಾಸ್ಟರ್ನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
KA02 MT0512 I20 ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ, ಮೆಜೆಸ್ಟಿಕ್ ಅಂಡರ್ ಪಾಸ್ ಬಳಿಯಿಂದ ಲುಲು ಮಾಲ್ ಅಂಡರ್ ಪಾಸ್ವರೆಗೂ ಜಯಂತ್ ಕಾರು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿದ್ದಾನೆ. ಬಳಿಕ ಕಾರ್ ನಲ್ಲಿದ್ದ ಜಯಂತ್ರನ್ನು ಎಳೆದಾಡಿ ಮುಖಕ್ಕೆ ಗುದ್ದಿ ಹಲ್ಲೆ ಮಾಡುವ ಮೂಲಕ ರೌಡಿಸಂ ಮಾಡಿದ್ದಾನೆ. ಅಷ್ಟೇ ಅಲ್ಲದೆ ಬಲಗೈನ ಉಂಗುರದ ಬೆರಳನ್ನ ಕಚ್ಚಿ ಮಾಂಸ ಕಾಣುವಂತೆ ಗಾಯ ಮಾಡಿದ್ದಾನೆ.
ಬಲಗೈ ಬೆರಳಿನ ಮಾಂಸ ಹೊರಬಂದಿದ್ದರಿಂದ ಜಯಂತ್ ಸರ್ಜರಿಗೊಳಗಾಗಿದ್ದು, ವೈದ್ಯರು ಐದು ಸ್ಟಿಚ್ ಹಾಕಿದ್ದಾರೆ. ಜೊತೆಗೆ 6 ತಿಂಗಳು ವಿಶ್ರಾಂತಿ ಮಾಡುವಂತೆ ಸಲಹೆ ನೀಡಿದ್ದಾರೆ. ಆದರೆ ತನ್ನದಲ್ಲದ ತಪ್ಪಿಗೆ ಜಯಂತ್ 2 ಲಕ್ಷ ರೂ ಆಸ್ಪತ್ರೆ ಬಿಲ್ ಕಟ್ಟಿದ್ದಾರೆ.
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ
ಸದ್ಯ ಘಟನೆ ಸಂಬಂಧ ಮಾಗಡಿ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರಿನಲ್ಲಿದ್ದ ಚಾಲಕ ಮತ್ತು ಮಹಿಳೆ ವಿರುದ್ದ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರತಿದೂರು ದಾಖಲಾಗಿಲ್ಲ. ಕಾರ್ ನಂಬರ್ ಮೂಲಕ ಆರೋಪಿ ಹುಡುಕಾಟ ನಡೆಸಿದ್ದಾರೆ.
ಹಲ್ಲೆ ಸಂಬಂಧ ಗಾಯಾಳು ಜಯಂತ್ ಪ್ರತಿಕ್ರಿಯಿಸಿದ್ದು, ಮೊನ್ನೆ ಶೇಷಾದ್ರಿಪುರಂನಲ್ಲಿ ತಿಂಡಿ ತಿನ್ನೋಣ ಅಂತ ಹೋಗಿದ್ದೇವು. ಮಳೆ ಬರುವಾಗ ಮಳೆ ನೀರು ಕಾರಿನಲ್ಲಿದ್ದ ಮೇಡಂ ಮುಖಕ್ಕೆ ಹಾರಿದೆ. ಅವರ ಗಂಡ ಸ್ಟೀಡ್ ಆಗಿ ಯಾಕೆ ಹೋಗುತ್ತೀರಾ ಅಂದರು. ಆ ವೇಳೆ ನಾನು ಸ್ವಾರಿ ಮೇಡಂ, ಕಾರು ಗ್ಲಾಸ್ ಹಾಕಿಕೊಳ್ಳಿ ಅಂದೆ. ಆದರೆ ಅವರು ಹಿಂಭಾಲಿಸಿಕೊಂಡು ಬಂದು ಗಾಡಿ ಸೈಡಿಗೆ ಹಾಕಿ ಅಂದರು. ಈ ವೇಳೆ ನಾನು ನೀವು ಗ್ಲಾಸ್ ಹಾಕಿಕೊಂಡು ಹೋಗಿ ಅಂದೆ. ಇಬ್ಬರು ಇಳಿದು ಬಂದು ಬೈಯೋದಕ್ಕೆ ಶುರು ಮಾಡಿದರು ಎಂದರು.
ಗಂಡ ಬಂದು ನನ್ನ ಹೆಂಡತಿ ಹತ್ತಿರ ಏನು ಮಾತನಾಡುತ್ತೀಯಾ ಅಂತ ಕೆನ್ನೆಗೆ ಹೊಡೆದರು. ಅದಕ್ಕೆ ನಾನು ಒಂದೇಟು ಕೆನ್ನೆಗೆ ಹೊಡೆದೆ. ಕಾಲರ್ ಪಟ್ಟಿ ಹಿಡಿದಿದ್ದೆ, ಆಗ ಆತ ನನ್ನ ಕೈ ಕಚ್ಚಿದ್ದ. ಅವರು ಜೋರಾಗಿ ಎಳೆದಾಗ ಬೆರಳು ಕಟ್ ಆಯಿತು ಎಂದಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:29 am, Thu, 29 May 25