ಮೂರೇ ದಿನಕ್ಕೆ 9 ಅಡಿ ಭರ್ತಿಯಾದ ಕೆಆರ್ಎಸ್ ಡ್ಯಾಂ: ಆಲಮಟ್ಟಿ ಸೇರಿ ಉಳಿದ ಜಲಾಶಯಗಳಿಗೂ ಭಾರಿ ಒಳಹರಿವು
Karnataka Dams Water Level Today: ಕರ್ನಾಟಕದಾದ್ಯಂತ ಅವಧಿಗೂ ಮುನ್ನವೇ ಮುಂಗಾರು ಮಳೆ ಬಿರುಸುಗೊಂಡಿದ್ದು, ಕೇವಲ ಮೂರೇ ದಿನಗಳಲ್ಲಿ ಕೆಆರ್ಎಸ್ ಜಲಾಶಯ 9 ಅಡಿಯಷ್ಟು ತುಂಬಿದೆ. ಆಲಮಟ್ಟಿ ಸೇರಿದಂತೆ ರಾಜ್ಯದ ಇತರ ಅಣೆಕಟ್ಟೆಗಳಲ್ಲಿಯೂ ಒಳಹರಿವು ಬಹಳ ಉತ್ತಮವಾಗಿದೆ. ಮೇ 29 ರಂದು ಡ್ಯಾಂ ನೀರಿನ ಮಟ್ಟದ ಬಗ್ಗೆ ಇಲ್ಲಿದೆ ವಿವರ.

ಬೆಂಗಳೂರು, ಮೇ 29: ಅವಧಿಗೂ ಮುನ್ನವೇ ಕರ್ನಾಟಕಕ್ಕೆ ಕಾಲಿಟ್ಟಿರುವ ಮುಂಗಾರು ಮಳೆ (Monsoon Rain)ರಾಜ್ಯದ ಅನೇಕ ಕಡೆಗಳಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ. ಪಶ್ಚಿಮ ಘಟ್ಟ ಪ್ರದೇಶಗಳು ಸೇರಿದಂತೆ ಅನೇಕ ಕಡೆಗಳಲ್ಲಿ ವರ್ಷಧಾರೆ ಸುರಿಯುತ್ತಿದ್ದು, ನದಿಗಳ ಹರಿವಿನ ಮಟ್ಟ ಹೆಚ್ಚಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ ಜಲಾಶಯ (KRS Dam) ಮೂರೇ ದಿನಗಳಲ್ಲಿ 9 ಅಡಿ ಭರ್ತಿಯಾಗಿದೆ. ಸದ್ಯ ಜಲಾಶಯದ ನೀರಿನ ಮಟ್ಟ 98 ಅಡಿ ತಲುಪಿದೆ. ಇದು 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಜಲಾಶಯವಾಗಿದೆ.
ಕೆಆರ್ಎಸ್ ಜಲಾಶಯಕ್ಕೆ ಸದ್ಯ 22 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಡ್ಯಾಂನಿಂದ 630 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಇದೇ ರೀತಿ ಮಳೆ ಮುಂದುವರಿದರೆ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನೀರಿನ ಮಟ್ಟ 100 ಅಡಿ ದಾಟುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಒಂದು ತಿಂಗಳು ಮೊದಲೇ ಡ್ಯಾಂನಲ್ಲಿ ಹೆಚ್ಚಾದ ಸಂಗ್ರಹ
ಸಾಮಾನ್ಯವಾಗಿ ಜೂನ್ ಅಂತ್ಯ ಅಥವಾ ಜುಲೈನಲ್ಲಿ ಮಾತ್ರ ನೀರಿನ ಮಟ್ಟ 100 ಅಡಿ ದಾಟುತ್ತದೆ. ಕಳೆದ ಮೂರು ದಿನಗಳಲ್ಲಿ ಕೊಡಗು ಮತ್ತು ಮೈಸೂರಿನಲ್ಲಿ ಭಾರಿ ಮಳೆಯಾದ ಕಾರಣ ಅಣೆಕಟ್ಟೆಗೆ ಉತ್ತಮ ಪ್ರಮಾಣದ ನೀರು ಬಂದಿದ್ದು, ಒಟ್ಟಾರೆಯಾಗಿ 6 ಅಡಿಗಳಿಗಿಂತ ಹೆಚ್ಚು ಏರಿಕೆಯಾಗಿದೆ. ಶನಿವಾರ 150 ಕ್ಯೂಸೆಕ್ ಇದ್ದ ಒಳಹರಿವು ಬುಧವಾರ ಬೆಳಿಗ್ಗೆ 8 ಗಂಟೆಗೆ 26,424 ಕ್ಯೂಸೆಕ್‌ಗೆ ಏರಿತು ಎಂದು ಮೂಲಗಳು ತಿಳಿಸಿವೆ.
ಆಲಮಟ್ಟಿ ಡ್ಯಾಂಗೆ ಒಳ ಹರಿವು ಹೆಚ್ಚಳ
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಡ್ಯಾಂಗೆ 60,379 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಸದ್ಯ ಡ್ಯಾಂನಿಂದ 530 ಕ್ಯೂಸೆಕ್ ನೀರಿನ ಹೊರ ಹರಿವು ಇದೆ. 519.60 ಮೀಟರ್ ಎತ್ತರದ ಡ್ಯಾಂನಲ್ಲಿ 512.78 ಮೀಟರ್ ನೀರು ಸಂಗ್ರಹವಾಗಿದೆ. ವಾಡಿಕೆಗಿಂತ ಮೊದಲೇ ಹೆಚ್ಚಿನ ಒಳ ಹರಿವು ಕಂಡುಬಂದಿರುವುದು ಡ್ಯಾಂ ಬೇಗನೆ ಗರಿಷ್ಠ ಮಟ್ಟ ತಲುಪುವ ಭರವಸೆ ನೀಡಿದೆ. ಇದರಿಂದ ರೈತರೂ ಖುಷಿಯಾಗಿದ್ದಾರೆ.
ಉಳಿದ ಡ್ಯಾಂಗಳಲ್ಲಿ ಹೇಗಿದೆ ನೀರಿನ ಮಟ್ಟ?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಹಂಚಿಕೊಂಡ ಮಾಹಿತಿಯ ಪ್ರಕಾರ, ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು ಮಂಗಳವಾರವೇ 33.39 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಇದು ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 22 ಆಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 15.63 ಟಿಎಂಸಿ ನೀರು ಸಂಗ್ರಹವಾಗಿತ್ತು.
ಇದನ್ನೂ ಓದಿ: ಭಾರಿ ಮಳೆ ಕಾರಣ ಮೇ ತಿಂಗಳಲ್ಲೇ ಆಲಮಟ್ಟಿ ಡ್ಯಾಂಗೆ 52,650 ಕ್ಯೂಸೆಕ್ ಒಳ ಹರಿವು: ಸಂಭ್ರಮದಲ್ಲಿ ರೈತರು
ಭದ್ರಾ ಜಲಾಶಯವು ಗರಿಷ್ಠ ಸಾಮರ್ಥ್ಯದ ಶೇ 35, ಅಂದರೆ 71.54 ಟಿಎಂಸಿಗಿಂತಲೂ ಹೆಚ್ಚಿನ ಮಟ್ಟವನ್ನು ತಲುಪಿದೆ. ತುಂಗಭದ್ರಾ ಜಲಾಶಯದ ಗರಿಷ್ಠ ಸಾಮರ್ಥ್ಯ 105.79 ಟಿಎಂಸಿ ಆಗಿದ್ದು, ಶೇ 11 ರಷ್ಟು ಅಂದರೆ 11.24 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.







