
ಬೆಂಗಳೂರು, ನವೆಂಬರ್ 15: ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ (Fake Nandini Ghee) ಮಾರಾಟ ಬೃಹತ್ ಜಾಲವೊಂದು ನಗರದಲ್ಲಿ ಪತ್ತೆ ಆಗಿದೆ. ಸಿಸಿಬಿ ಪೊಲೀಸರು (CCB Police) ಮತ್ತು ಕೆಎಂಎಫ್ ಜಾಗೃತ ದಳ ಜಂಟಿ ಕಾರ್ಯಾಚರಣೆ ನಡೆಸಿ ಬೃಹತ್ ಜಾಲ ಪತ್ತೆ ಮಾಡಿದ್ದು, ಕೆಎಂಎಫ್ ವಿತರಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮಹೇಂದ್ರ, ದೀಪಕ್, ಮುನಿರಾಜು, ಅಭಿ ಅರಸು ಬಂಧಿತರು. ಒಟ್ಟು 1.26 ಕೋಟಿ ರೂ. ಮೌಲ್ಯದ ವಸ್ತುವನ್ನು ಬಂಧಿತರಿಂದ ಜಪ್ತಿ ಮಾಡಲಾಗಿದೆ.
ಬೆಂಗಳೂರಿನಿಂದ ತಮಿಳುನಾಡಿಗೆ ಶುದ್ಧ ನಂದಿನಿ ತುಪ್ಪ ಪೂರೈಕೆ ಮಾಡುತ್ತಿದ್ದರು. ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ ಒರಿಜಿನಲ್ ತುಪ್ಪ ಖರೀದಿಸುತ್ತಿದ್ದರು. ಇಲ್ಲಿ ಖರೀದಿಸಿದ ಒರಿಜಿನಲ್ ತುಪ್ಪ ತಮಿಳುನಾಡಿಗೆ ಕಳುಹಿಸುತ್ತಿದ್ದರು. ಅದನ್ನ ತಮಿಳುನಾಡಿನಲ್ಲಿ ಕಲಬೆರಕೆ ಮಾಡುತ್ತಿದ್ದರು. ಒಂದು ಲೀಟರ್ ತುಪ್ಪಕ್ಕೆ 4 ಲೀಟರ್ ನಕಲಿ ತುಪ್ಪ ಬೆರೆಸುತ್ತಿದ್ದರು. ಫಾರ್ಮ್ ಆಯಿಲ್, ತೆಂಗಿನ ಎಣ್ಣೆ ಮತ್ತು ಡಾಲ್ಡಾ ಬೆರೆಸುತ್ತಿದ್ದರು. ಅದನ್ನ ಮತ್ತೆ ಕರ್ನಾಟಕಕ್ಕೆ ತಂದು ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ: ಭಕ್ತರೇ ಎಚ್ಚರ: ಕೊಲ್ಲೂರು ಮೂಕಾಂಬಿಕಾ ದೇಗುಲದ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ವಂಚಿಸ್ತಿದ್ದಾರೆ ಸೈಬರ್ ವಂಚಕರು
ನಿನ್ನೆ ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್ಪ್ರೈಸಸ್ ಮಾಲೀಕರಿಗೆ ಸೇರಿದ ಗೋಡೌನ್ ಹಾಗೂ ಅಂಗಡಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಒಟ್ಟು 8,136 ಲೀಟರ್ ಕಲಬೆರಕೆ ತುಪ್ಪ, 4 ವಾಹನ, ತೆಂಗು ಹಾಗೂ ಫಾಮ್ ಆಯಿಲ್, ನಕಲಿ ತುಪ್ಪ ತಯಾರು ಮಾಡುವ ಯಂತ್ರಗಳು ಸೇರಿ 1 ಕೋಟಿ 26 ಲಕ್ಷದ 95 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ಕೆಎಂಎಫ್ ಜಾಗೃತ ದಳ ಕಡೆಯಿಂದ ನಮಗೆ ಮಾಹಿತಿ ಬಂದಿತ್ತು. ಜಂಟಿಯಾಗಿ ಈ ಪ್ರಕರಣ ಪತ್ತೆ ಮಾಡಿದ್ದೇವೆ. ಮೂರು ಜನರನ್ನು ನಾವು ಅರೆಸ್ಟ್ ಮಾಡಿದ್ದೇವೆ. ಒಬ್ಬನಿಗೆ ಪ್ರಶ್ನೆ ಮಾಡಿದ್ದೇವೆ. ನಂದಿನಿ ತುಪ್ಪ, ಹಾಲಿನ ಉತ್ಪನ್ನಗಳನ್ನ ನಕಲಿ ಮಾಡುತ್ತಿರುವುದು ಗೊತ್ತಾಗಿದೆ ಎಂದರು.
ಮಷಿನ್ ಯೂನಿಟ್ ತಮಿಳುನಾಡಿನ ತಿರುಪೂರು ಜಿಲ್ಲೆಯಲ್ಲಿತ್ತು. ಅಲ್ಲಿಯೂ ರೈಡ್ ಆಗಿದೆ, ಬೆಂಗಳೂರಿನಲ್ಲಿ ಕೂಡ ರೈಡ್ ಆಗಿದೆ. ಒಂದು ಕೋಟಿಗೂ ಅಧಿಕ ಬೆಲೆಬಾಳುವ ವಸುಗಳು ಸೀಜ್ ಆಗಿದೆ. ಮುಖ್ಯ ಆರೋಪಿ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ಪ್ರಾಥಮಿಕ ಹಂತದ ತನಿಖೆಯಲ್ಲಿ 2018ರಲ್ಲೂ ಇದನ್ನ ಮಾಡಿದ್ದಾರೆ. ಇಲ್ಲಿಂದ ಅಸಲಿ ತುಪ್ಪ ಖರೀದಿ ಮಾಡಿ ಅಲ್ಲಿಂದ ಕಲಬೆರಕೆ ಮಾಡಿ ಕುಳುಹಿಸುತ್ತಿದ್ದರು. ಎರೆಡು ವರ್ಷಗಳಿಂದ ಈ ಕೃತ್ಯ ಮಾಡುತ್ತಿದ್ದರು ಎಂಬುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಇನ್ನು ಕೆಎಂಎಫ್ ಎಂ.ಡಿ ಶಿವಸ್ವಾಮಿ ಪ್ರತಿಕ್ರಿಯಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಆರೋಪಿ ಕೆಎಂಎಫ್ ಡೀಲರ್ ಅಂತ ಗೊತ್ತಾಗಿದೆ. ಅಧಿಕೃತವಾಗಿ ಕೊಡುತ್ತಿದ್ದ ತುಪ್ಪ ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಫಾರ್ಮ್ ಆಯಿಲ್ ಹಾಗೂ ತೆಂಗಿನ ಎಣ್ಣೆ ಮಿಕ್ಸ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಕಲಿ ಎಲೆಕ್ಟ್ರಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ರಾಯಚೂರಿನ ಪ್ರಸಿದ್ಧ ಮಳಿಗೆಗಳ ಮೇಲೆ ದಾಳಿ
ಅಧಿಕೃತ ಔಟ್ಲೆಟ್ನಲ್ಲಿ ಮಾರಾಟದ ಬಗ್ಗೆ ತನಿಖೆ ಮಾಡುತ್ತೇವೆ. ಇದು ಫೇಕ್ ನಂದಿನಿ ತುಪ್ಪ ಅಂತ ವಿಜಿಲೆನ್ಸ್ ತಂಡದ ಮೂಲಕ ಗೊತ್ತಾಗಿತ್ತು. ಗ್ರಾಹಕರಿಗೆ ತೊಂದರೆ ಆಗಬಾರದು ಅಂತ ಸಿಸಿಬಿ ಜೊತೆ ಸೇರಿ ದಾಳಿ ಮಾಡಿದ್ದೇವೆ. ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ. ನಂದಿನಿ ನಿಜವಾಗಲೂ ಶುದ್ಧವಾದ ತುಪ್ಪವನ್ನು ಸಪ್ಲೈ ಮಾಡುತ್ತೆ. ನಂದಿನ ದೇಶದಲ್ಲೇ ಎರಡನೇ ಅತಿ ದೊಡ್ಡ ಬ್ರಾಂಡ್. ಇದನ್ನ ನಕಲು ಮಾಡಿದರೆ ಲಾಭ ಮಾಡಬಹುದೆಂದು ಹೀಗೆ ಮಾಡುತ್ತಾರೆ. ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:29 pm, Sat, 15 November 25