ನಕಲಿ ಎಲೆಕ್ಟ್ರಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ರಾಯಚೂರಿನ ಪ್ರಸಿದ್ಧ ಮಳಿಗೆಗಳ ಮೇಲೆ ದಾಳಿ
ರಾಯಚೂರಿನ ಸದರ್ ಬಜಾರ್ ಪೊಲೀಸರು ಮತ್ತು ಖಾಸಗಿ ಕಂಪನಿಯ ವಿಜಿಲೆನ್ಸ್ ತಂಡವು ಹರಿಹರ ರಸ್ತೆ ಮತ್ತು ಗಂಜ್ ರಸ್ತೆಯಲ್ಲಿರುವ ಭಗವತಿ ಮತ್ತು ಆಶಾ ಎಲೆಕ್ಟ್ರಿಕಲ್ಸ್ ಮಳಿಗೆಗಳ ಮೇಲೆ ದಾಳಿ ನಡೆಸಿ ನಕಲಿ ವಿದ್ಯುತ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ. ನಕಲಿ ವೈರ್, ರೆಗ್ಯುಲೇಟರ್, ಸ್ವಿಚ್‌ಗಳು ಪತ್ತೆಯಾಗಿವೆ. ಈ ಮಳಿಗೆಗಳು ಕಡಿಮೆ ಬೆಲೆಯಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವು ಎಂದು ತಿಳಿದುಬಂದಿದೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.

ರಾಯಚೂರು, ಜುಲೈ 06: ನಕಲಿ ಎಲೆಕ್ಟ್ರಿಕ್ ವಸ್ತುಗಳನ್ನು (Fake Electric Items) ಮಾರಾಟ ಮಾಡುವ ಮಳಿಗೆಗಳ ಮೇಲೆ ರಾಯಚೂರಿನ ಸದರ ಬಜಾರ್ ಠಾಣೆ ಪೊಲೀಸರ ಸಹಕಾರದೊಂದಿಗೆ ಖಾಸಗಿ ಕಂಪನಿಯೊಂದರ ವಿಜಲನ್ಸ್ ತಂಡ ದಾಳಿ ಮಾಡಿದೆ. ರಾಯಚೂರು (Raichur) ನಗರದ ಹರಿಹರ ರಸ್ತೆಯಲ್ಲಿರುವ ಭಗವತಿ ಇಲೆಕ್ಟ್ರಿಕಲ್ಸ್, ಗಂಜ್ ರಸ್ತೆಯಲ್ಲಿರುವ ಆಶಾ ಇಲೆಕ್ಟ್ರಿಕಲ್ಸ್ ಮಳಿಗೆಗಳು ಹಾಗೂ ಗೊಡೌನ್ಗಳ ಮೇಲೆ ದಾಳಿ ನಡೆಸಿದಾಗ ಹಲವು ನಕಲಿ ವಸ್ತುಗಳು ಪತ್ತೆಯಾಗಿವೆ.
ಭಗವತಿ ಇಲೆಕ್ಟ್ರಿಕಲ್ಸ್ ಹಾಗೂ ಆಶಾ ಇಲೆಕ್ಟ್ರಿಕಲ್ಸ್ ಮಳಿಗೆಗಳು ರಾಯಚೂರಿನಲ್ಲಿ ತುಂಬಾ ಪ್ರಸಿದ್ಧಿ ಪಡೆದಿವೆ. ಈ ಅಂಗಡಿಗಳಲ್ಲಿ ಎಲ್ಲ ಬಗೆಯ ವಿದ್ಯುತ್ ಉತ್ಪನ್ನಗಳು ಸಿಗುತ್ತವೆ. ಆದರೆ, ಈ ಅಂಗಡಿಗಳಲ್ಲಿ ನಕಲಿ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮನೆಗಳಲ್ಲಿ ಬಳಸುವ ವಿದ್ಯುತ್ ವೈರ್, ರೆಗ್ಯುಲೇಟರ್, ಸ್ವಿಚ್ ಬೋರ್ಡ್ ಸೇರಿದಂತೆ ವಿವಿಧ ನಕಲಿ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.
ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ವಿಜಲನ್ಸ್ ತಂಡ ಸದರ ಬಜಾರ್ ಪೊಲೀಸರ ಸಹಕಾರದೊಂದಿಗೆ ರವಿವಾರ ದಾಳಿ ನಡೆಸಿತು. 1 ಲಕ್ಷ ರೂಪಾಯಿಗೆ ಮಾರಾಟವಾಗುವ ಅಸಲಿ ಉತ್ಪನ್ನಗಳು, ಈ ಮಳಿಗೆಗಳಲ್ಲಿ ಕೇವಲ 40-50 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಅನುಮಾನಗೊಂಡು ವಿಜಲನ್ಸ್ ದಾಳಿ ನಡೆಸಿದಾಗ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಉತ್ಪನ್ನಗಳು ನಕಲಿ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗಂಡೆಂದು ಹೆಣ್ಣು ಮಗು ಕೊಟ್ಟ ಸಿಬ್ಬಂದಿ: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲು
ಆಶಾ ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಖಾಸಗಿ ಕಂಪನಿಯ ರ್ಯಾಪರ್ಗಳು, ನಕಲಿ ಉತ್ಪನ್ನಗಳು ಪತ್ತೆಯಾಗಿವೆ. ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲೂ ನಕಲಿ ಉತ್ಪನ್ನಗಳು ಪತ್ತೆಯಾಗಿವೆ. ಈ ಮಳಿಗೆಯ ಮಾಲೀಕರು ಇಲೆಕ್ಟ್ರಿಶಿಯನ್ಗಳಿಗೆ ಹೆಚ್ಚಿನ ಕಮಿಷನ್ ಕೊಟ್ಟು, ಗ್ರಾಹಕರಿಗೆ ನಕಲಿ ಉತ್ಪನ್ನಗಳನ್ನೇ ಖರೀದಿಸುವಂತೆ ಪ್ರಚೋದಿಸುತ್ತಿದ್ದರಂತೆ. ಈ ದಂಧೆಗೆ ಆಂಧ್ರ ಪ್ರದೇಶ, ತೆಲಂಗಾಣ ಗಡಿಯ ಜನ, ರೈತರು, ಬಡವರೇ ಟಾರ್ಗೆಟ್ ಆಗಿದ್ದರು ಎಂದು ವಿಜಲನ್ಸ್ ತಂಡದ ಅಧಿಕಾರಿ ನಾಗೇಶ್ವರ್ ರಾವ್ ಹೇಳಿದ್ದಾರೆ. ಸದರ ಬಜಾರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಈ ಹಿಂದೆ 2022 ರಲ್ಲಿ ರಾಯಚೂರು ಜಿಲ್ಲಾ ಪೊಲೀಸರು ನಕಲಿ ಟೀ, ಸಾಬೂನು, ಕೊಬ್ಬರಿ ಎಣ್ಣೆ, ಫೆವಿಕ್ವಿಕ್ ತಯಾರಿಸಿ ಮಾರಾಟ ಮಾಡುತ್ತಿದ್ದ ದಂಧೆಕೋರರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.