ರಾಯರ ಭಕ್ತರಿಗೂ ತಪ್ಪಲಿಲ್ಲ ವಂಚಕರ ಕಾಟ: ಆನ್‌ಲೈನ್ ಬುಕ್ಕಿಂಗ್ ಹೆಸರಲ್ಲಿ ಸಾವಿರಾರು ರೂ ವಂಚನೆ
ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಓರ್ವ ಭಕ್ತರಿಗೆ ಕಿಡಿಗೇಡಿಗಳು ವಂಚಿಸಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಮಂತ್ರಾಲಯ ಮಠದ ವಿಜಯೇಂದ್ರ ವಸತಿ ಗೃಹದ ಹೆಸರಿನಲ್ಲಿ ಆನ್‌ಲೈನ್ ಬುಕಿಂಗ್ ಮೂಲಕ ಮುಂಗಡವಾಗಿ ಎರಡು ಸಾವಿರ ರೂ ಪಡೆದು ವಂಚಿಸಲಾಗಿದೆ. ಈ ಬಗ್ಗೆ ಎಚ್ಚರ ವಹಿಸುವಂತೆ ಮಂತ್ರಾಲಯ ಮಠದಿಂದ ಭಕ್ತರಿಗೆ ಸಲಹೆ ನೀಡಲಾಗಿದೆ.

ರಾಯಚೂರು, ಜೂನ್ 30: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ (Mantralaya Mutt) ಭಕ್ತರನ್ನು ವಂಚಿಸುತ್ತಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಮಂತ್ರಾಲಯ ಮಠಕ್ಕೆ ಸೇರಿದ ವಿಜಯೇಂದ್ರ ವಸತಿ ಗೃಹದ ಆನ್‌ಲೈನ್ ಹೆಸರಿನಲ್ಲಿ (online booking scam) ಓರ್ವ ಭಕ್ತರಿಗೆ ವಂಚನೆ ಮಾಡಿರುವಂತಹ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಅಕ್ಷಿತಾ ಎಂಬುವರಿಗೆ ಆನ್‌ಲೈನ್ ಬುಕ್ಕಿಂಗ್ ಹೆಸರಲ್ಲಿ ಮುಂಗಡವಾಗಿ 2000 ರೂ. ಜಮೆ ಮಾಡಿಸಿಕೊಂಡು ಬಳಿಕ ಪ್ರತಿಕ್ರಿಯೆ ನೀಡದೆ ವಂಚಿಸಲಾಗಿದೆ. ಈ ಬಗ್ಗೆ ಎಚ್ಚರವಹಿಸುವಂತೆ ಮಂತ್ರಾಲಯ ಮಠದಿಂದ ಭಕ್ತರಿಗೆ ಸಲಹೆ ನೀಡಲಾಗಿದೆ.
ಇನ್ನು ಈ ಬಗ್ಗೆ ಮಂತ್ರಾಲಯ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯಕ್ಕೆ ಕೊಠಡಿಗಳು ಅಥವಾ ಸೇವೆಗಳನ್ನು ಕಾಯ್ದಿರಿಸಲು ಮತ್ತು ದೇಣಿಗೆ ಸಂಗ್ರಹಿಸಲು ಯಾವುದೇ ವ್ಯಕ್ತಿ, ಏಜೆನ್ಸಿಗೆ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಶ್ರೀ ಮಠದ ಪ್ರತಿ ವಸತಿ ಗೃಹಗಳ ಬುಕ್ಕಿಂಗ್ಗೆ www.srsmatha.org. ಮೂಲಕ ಮಾತ್ರ ಬುಕ್ಕಿಂಗ್ ಮಾಡಿಕೊಳ್ಳುವಂತೆ ಭಕ್ತರಿಗೆ ಸಲಹೆ ನೀಡಿದೆ.
ಇದನ್ನೂ ಓದಿ: ಮಂತ್ರಾಲಯ: ರಾಯರ ದರ್ಶನ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಭಕ್ತರಿಗೆ ವಂಚನೆ ಬೆಳಕಿಗೆ ಬೆನ್ನಲ್ಲೇ ಶ್ರೀ ಮಠದಿಂದ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ಆಂದ್ರದ ಕರ್ನೂಲ್ ಸೈಬರ್ ಠಾಣೆಗೆ ವರ್ಗಾವಣೆ ಕೂಡ ಮಾಡಲಾಗಿದೆ.
ಗುರುರಾಯರ ಸನ್ನಿಧಿ ಹೀಗೆ ಆಗುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ ಕೂಡ ಮಠದ ಹೆಸರನ್ನು ಬಳಸಿಕೊಂಡು ಭಕ್ತರನ್ನು ವಂಚಿಸಿ ಕೊಠಡಿಗಳು, ಪ್ರಸಾದ ಸೇರಿದಂತೆ ಇತ್ಯಾದಿ ಸೇವೆಗಳ ಬುಕಿಂಗ್‌ಗೆ ಅವರಿಂದ ಹಣವನ್ನು ಪಡೆದು ವಂಚಿಸಲಾಗಿದೆ. ಈ ಕುರಿತಾಗಿ ಕೂಡ ಪೊಲೀಸರಿಗೆ ದೂರು ನೀಡಲಾಗಿದೆ. ಇಂತಹ ಘಟನೆಗಳು ಮತ್ತೆ ಜರುಗದಂತೆ ಮತ್ತು ಭಕ್ತರು ಮೋಸ ಹೋಗದಂತೆ ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಆಗ್ರಹಿಸಲಾಗಿದೆ.
ಇದನ್ನೂ ಓದಿ: ಡೆಪಾಸಿಟ್ ಮಷಿನ್ಗೆ ಕಂತೆ ಕಂತೆ ಖೋಟಾ ನೋಟು ಹಾಕಲು ಯತ್ನ: ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಆದ್ದರಿಂದ, ಈ ಬಗ್ಗೆ ಮಂತ್ರಾಲಯ ಮಠದಿಂದ ಭಕ್ತರಿಗೆ ಎಚ್ಚರವಹಿಸುವಂತೆ ಸಲಹೆ ನೀಡಲಾಗಿದ್ದು, ಇಂತಹ ಯಾವುದೇ ಘಟನೆಗಳನ್ನು ಅನುಭವಿಸಿದ್ದರೆ, ದಯವಿಟ್ಟು ಅವರ ವಿರುದ್ಧ ಪೊಲೀಸ್ ದೂರು ದಾಖಲಿಸುವಂತೆ ತಿಳಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:57 am, Mon, 30 June 25