ಕರ್ನಾಟಕ ಕಾಂಗ್ರೆಸ್ ಗೊಂದಲ, ಬಿಕ್ಕಟ್ಟು ಶಮನಕ್ಕೆ ಇಂದು ಬೆಂಗಳೂರಿಗೆ ಸುರ್ಜೇವಾಲ
ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನದ ಅಲೆ ಹೆಚ್ಚುತ್ತಿರುವುದರ ಮಧ್ಯೆ ಪಕ್ಷದ ರಾಜ್ಯ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಗೊಂದಲ, ಬಿಕ್ಕಟ್ಟು ಶಮನಕ್ಕೆ ಅವರು ಶಾಸಕರೊಂದಿಗೆ ವೈಯಕ್ತಿಕ ಸಮಾಲೋಚನೆ ನಡೆಸಲಿದ್ದಾರೆ. ಸುರ್ಜೇವಾಲ ಸುಮಾರು 100 ಶಾಸಕರೊಂದಿಗೆ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದು, ರಾಜಣ್ಣ ಅವರ ‘ಸೆಪ್ಟೆಂಬರ್ ಕ್ರಾಂತಿ’ ಹೇಳಿಕೆಗೂ ಇದಕ್ಕೂ ಸಂಬಂಧ ಇರಬಹುದಾ ಎಂಬ ಕುತೂಹಲ ಮೂಡಿದೆ.

ಬೆಂಗಳೂರು, ಜೂನ್ 30: ಕಳೆದ ಎರಡು ವಾರಗಳಿಂದ ಕರ್ನಾಟಕ ಕಾಂಗ್ರೆಸ್ (Congress) ಅಲ್ಲೋಲ ಕಲ್ಲೋಲಗೊಂಡಿದೆ. ಶಾಸಕ ಬಿಆರ್ ಪಾಟೀಲ್, ರಾಜೂ ಕಾಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರಿಂದ ಕಾಂಗ್ರೆಸ್ ಇಷ್ಟು ದಿನ ಬಳಿದುಕೊಂಡಿದ್ದ ಬಣ್ಣ ಮಾಸಿದಂತಾಗಿದೆ. ಶಾಸಕರ ಅಸಮಾಧಾನದ ಹೊಗೆ ಮನೆಯನ್ನೇ ಕೆಡಿಸುತ್ತಿದೆ ಎಂಬುದು ರಾಜ್ಯ ನಾಯಕರಿಗಿಂತ ಹೆಚ್ಚು ಬೇಗ ಅರ್ಥವಾಗಿದ್ದೇ ಹೈಕಮಾಂಡ್ ನಾಯಕರಿಗೆ. ಶಾಸಕರ ಬೇಸರ ಹತ್ತರಲ್ಲಿ ಹನ್ನೊಂದು ಅಂತ ರಾಜ್ಯ ನಾಯಕರು ಸ್ವಲ್ಪ ಮಟ್ಟಿಗೆ ಮೈಮರೆತು ಕಡೆಗಣಿಸಿದ್ದರು. ಆದರೆ, ಪ್ರಾರಂಭದಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್ ಮದ್ದು ಅರೆಯಲು ಮುಂದಾದ ಪರಿಣಾಮವೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ (Randeep Surjewala) ಹಾಗೂ ಶಾಸಕರ ಒನ್ ಟು ಒನ್ ಮೀಟಿಂಗ್.
ಬಹಿರಂಗ ಅಸಮಾಧಾನ ಹೊರಹಾಕಿದ್ದ ಬಿಆರ್ ಪಾಟೀಲ್ ಹಾಗೂ ರಾಜೂ ಕಾಗೆಗೆ ಸುರ್ಜೆವಾಲಾ ಬುಲಾವ್ ಹೊರಡಿಸಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುತ್ತಿರುವ ಸುರ್ಜೆವಾಲ ಮಾಡಲಿರುವ ಮೊದಲನೇ ಕೆಲಸವೇ ಬಿಆರ್ ಪಾಟೀಲ್ ಹಾಗೂ ರಾಜೂ ಕಾಗೆ ಜೊತೆಗೆ ಸಮಾಲೋಚನೆ. ಮಧ್ಯಾಹ್ನ 1.30 ಕ್ಕೆ ಬಿಆರ್ ಪಾಟೀಲ್, 2 ಕ್ಕೆ ರಾಜೂ ಕಾಗೆ ಜೊತೆಗ ಸುರ್ಜೆವಾಲಾ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಬಹಿರಂಗ ಅಸಮಾಧಾನಕ್ಕೆ ಕಾರಣಗಳನ್ನು ಚರ್ಚೆ ಮಾಡಲಿರುವ ಸುರ್ಜೆವಾಲ, ಬಳಿಕ ಎಚ್ಚರಿಕೆ ನೀಡುವ ಸಾಧ್ಯತೆಯೂ ಇದೆ.
ಇಷ್ಟಕ್ಕೇ ಸುರ್ಜೆವಾಲ ಕೆಲಸ ಮುಗಿಯುವುದಿಲ್ಲ. ಮತ್ತೆರಡು ದಿನ ರಾಜ್ಯದಲ್ಲೇ ಠಿಖಾಣಿ ಹೂಡಲಿರುವ ಅವರು, ಬೆಂಗಳೂರು ಭಾಗದ 40 ಶಾಸಕರ ಜೊತೆಗೆ 20 ನಿಮಿಷಗಳ ಕಾಲ ಮಾತುಕತೆ ನಡೆಸಲಿದ್ದಾರೆ. ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಎಎಸ್ ಪೊನ್ನಣ್ಣ, ಕುಣಿಗಲ್ ರಂಗನಾಥ್ ಅವರಂತಹ ಕೆಲವು ಶಾಸಕರು ಬಿಜೆಪಿಯನ್ನು ಎದುರಿಸುವುದರಲ್ಲಿ ಮುಂಚೂಣಿಯಲ್ಲಿದ್ದರೆ, ಕೆಲವು ಶಾಸಕರು ತಮ್ಮ ತಮ್ಮದೇ ಲೋಕದಲ್ಲಿ ಮೈಮರೆತು ಹೋಗಿರುವ ಉದಾಹರಣೆಗಳೂ ಹೈಕಮಾಂಡ್ ಮುಂದಿದೆ. ಇದನ್ನೇ ಪರಶೀಲಸಿರುವ ಸುರ್ಜೆವಾಲ, ಶಾಸಕರ ಅಹವಾಲು ಆಲಿಸಲಿದ್ದಾರೆ.
ಇದನ್ನೂ ಓದಿ: ಪಾಟೀಲ್, ರಾಜು ಕಾಗೆ ಬೆನ್ನಲ್ಲೇ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ಶಾಸಕರ ಜೊತೆಗಿನ ಸುರ್ಜೆವಾಲ ಒನ್ ಟು ಒನ್ ಮೀಟಿಂಗ್ ಹಿಂದೆ ಇಷ್ಟೇ ಅಜೆಂಡಾ ಇದೆ ಎನ್ನುವುದಕ್ಕಾಗುವುದಿಲ್ಲ. ಕೆಎನ್ ರಾಜಣ್ಣ ಸಿಡಿಸಿರುವ ಸೆಪ್ಟೆಂಬರ್ ಕ್ರಾಂತಿಯ ಸ್ಫೋಟಕ್ಕೆ ಸುರ್ಜೆವಾಲ ಮೀಟಿಂಗ್ ನಾಂದಿ ಹಾಡುತ್ತದೆಯಾ ಎಂಬ ಅನುಮಾನಗಳೂ ಈಗ ಬಲವಾಗಿವೆ.








