
ಬೆಂಗಳೂರು, ಮೇ 4: ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದಲ್ಲಿರುವ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು (Cubbon Park Metro Station) ಸೋಮವಾರ ಬೆಳಿಗ್ಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿತ್ತು ವಿದ್ಯುತ್ ವ್ಯತ್ಯಯದಿಂದಾಗಿ ಮೆಟ್ರೋ ನಿಲ್ದಾಣದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿತ್ತು. ಇದೀಗ ಬೆಳಗ್ಗೆ 11 ಗಂಟೆಯಿಂದ ಮೆಟ್ರೋ ಸೇವೆಗಳು ಪುರರಾರಂಭಗೊಂಡಿವೆ ಎಂದು ಸಂಸ್ಥೆ ತಿಳಿಸಿದೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ, ರೈಲುಗಳು ಸದ್ಯಕ್ಕೆ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಹೀಗಾಗಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ತಕ್ಕಂತೆ ಯೋಜಿಸಿಕೊಳ್ಳಬೇಕು ಎಂದು ಬಿಎಂಆರ್‌ಸಿಎಲ್ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಮಾಹಿತಿ ನೀಡಿತ್ತು.
ವಿದ್ಯುತ್ ವ್ಯತ್ಯಯದ ಕಾರಣ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ನಿಲ್ದಾಣದಲ್ಲಿ ರೈಲುಗಳು ನಿಲ್ಲುವುದಿಲ್ಲ. ವಿದ್ಯುತ್ ಪೂರೈಕೆ ನಂತರ ಸಾಮಾನ್ಯ ನಿಲುಗಡೆ ಮರುಾರಂಭವಾಗುತ್ತದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ತಕ್ಕಂತೆ ಯೋಜಿಸಿಕೊಳ್ಳುವಂತೆ ವಿನಂತಿಸಲಾಗಿದೆ.ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ .
— ನಮ್ಮ ಮೆಟ್ರೋ (@OfficialBMRCL) May 4, 2026
ವಾರದ ಮೊದಲ ದಿನವೇ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲು ನಿಲುಗಡೆ ಸ್ಥಗಿತಗೊಂಡಿರುವುದು ಕಚೇರಿಗೆ ತೆರಳುವ ಉದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ಅನಾನುಕೂಲತೆಯನ್ನುಂಟು ಮಾಡಿದೆ. ಈ ಅನಿವಾರ್ಯ ತೊಂದರೆಗೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ: ಕಣ್ಣೀರು ತರಿಸುತ್ತೆ ಈ ಮೌನ ಹೋರಾಟಗಾರನ ಕಥೆ!
ಸಾರ್ವಜನಿಕ ಮಾಹಿತಿ
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಾಮಾನ್ಯ ಸೇವೆಗಳು ಬೆಳಿಗ್ಗೆ 11.00ಗಂಟೆಯಿಂದ ಪುನಃ ಪ್ರಾರಂಭಗೊಂಡಿವೆ ಮತ್ತು ನಿಲ್ದಾಣವನ್ನು ಸಾರ್ವಜನಿಕರ ಓಡಾಟಕ್ಕೆ ತೆರೆಯಲಾಗಿದೆ. @srivasrbmrccoi1— ನಮ್ಮ ಮೆಟ್ರೋ (@OfficialBMRCL) May 4, 2026
ಬೆಳಗ್ಗೆಯಿಂದಲೂ ಬಂದಾಗಿದ್ದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಾಮಾನ್ಯ ಸೇವೆಗಳು ಬೆಳಿಗ್ಗೆ 11.00ಗಂಟೆಯಿಂದ ಪುನಃ ಪ್ರಾರಂಭಗೊಂಡಿವೆ ಮತ್ತು ನಿಲ್ದಾಣವನ್ನು ಸಾರ್ವಜನಿಕರ ಓಡಾಟಕ್ಕೆ ತೆರೆಯಲಾಗಿದೆ ಎಂದು ಸಂಸ್ಥೆ ಈಗ ಟ್ವೀಟ್ ಮಾಡಿದ್ದು, ಸಾರ್ವಜನಿಕರ ಗಮನಕ್ಕೆ ತಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 am, Mon, 4 May 26