ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ. ನ.18ರಿಂದ ಬೆಳಿಗ್ಗೆ 6ರಿಂದ ರಾತ್ರಿ 11 ಗಂಟೆಯವರೆಗೆ ನಮ್ಮ ಮೆಟ್ರೋ ರೈಲುಗಳು ಸಂಚರಿಸಲಿವೆ. ಮೆಜೆಸ್ಟಿಕ್ನಿಂದ 11:30ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಭಾನುವಾರ ಬೆಳಿಗ್ಗೆ ಒಂದು ತಾಸು ತಡವಾಗಿ, ಎಂದರೆ 7 ಗಂಟೆಯಿಂದ ಸೇವೆ ಆರಂಭವಾಗಲಿದೆ. ಕೊರೊನಾ ಪಿಡುಗು ಹರಡುವ ಮೊದಲು ಇದ್ದ ವೇಳಾಪಟ್ಟಿಯ ಮಾದರಿಯಲ್ಲಿಯೇ ನವೆಂಬರ್ 18ರಿಂದ ನಮ್ಮ ಮೆಟ್ರೋ ರೈಲುಗಳು ಸಂಚರಿಸಲಿವೆ. ಕೊರೋನಾ ಅನ್ಲಾಕ್ ಆದ ಬಳಿಕ ಹಂತಹಂತವಾಗಿ ನಮ್ಮ ಮೆಟ್ರೋ ಸೇವೆಯ ಅವಧಿ ವಿಸ್ತರಣೆಯಾಗಿತ್ತು. ಈವರೆಗೆ ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ನಮ್ಮ ಮೆಟ್ರೋ ರೈಲುಗಳು ಸಂಚರಿಸುತ್ತಿದ್ದವು.
ನಮ್ಮ ಮೆಟ್ರೋ ರೈಲು ಸಂಚಾರಕ್ಕೆ 10 ವರ್ಷ ಪೂರ್ಣ
ನಮ್ಮ ಮೆಟ್ರೋ (Namma Metro) ಸಂಚಾರಕ್ಕೆ 10 ವರ್ಷ ಪೂರ್ಣವಾಗಿದೆ. 2011 ರ ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾರ್ಯಾರಂಭವಾಗಿತ್ತು. ಅಂದು ಹಳಿಗೆ ಇಳಿದಿದ್ದ ನಮ್ಮ ಮೆಟ್ರೋ ರೈಲು ಇಂದಿಗೆ 10 ವರ್ಷಗಳನ್ನು ಪೂರೈಸಿಕೊಂಡಿದೆ. ಎಂ.ಜಿ. ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಮೊದಲಿಗೆ ಮೆಟ್ರೋ ಸಂಚಾರ ಆರಂಭ ಆಗಿತ್ತು. 6 ಕಿ.ಮೀ. ಮಾರ್ಗದಲ್ಲಿ ಮೊದಲ ಬಾರಿಗೆ ಮೆಟ್ರೋ ಸಂಚರಿಸಿತ್ತು.
ನಮ್ಮ ಮೆಟ್ರೋಗೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರು, ಮೆಟ್ರೋಗೆ ಭೂಮಿ ನೀಡಿದವರಿಗೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಕೃತಜ್ಞತೆ ಸಮರ್ಪಣೆ ಮಾಡಿದ್ದಾರೆ. ಪ್ರಸ್ತುತ 56 ಕಿ.ಮೀ. ನಮ್ಮ ಮೆಟ್ರೋ ಸಂಚಾರ ನಡೆಸುತ್ತಿದೆ. ಇದನ್ನು 175 ಕಿ.ಮೀ.ಗೆ ವಿಸ್ತರಿಸಬೇಕೆಂಬುದು ನಮ್ಮ ಉದ್ದೇಶ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ 2024ರ ಡಿಸೆಂಬರ್ ವೇಳೆಗೆ ಈ ಮೆಟ್ರೋ ಕಾಮಗಾರಿ ಪೂರ್ಣ ಆಗಲಿದೆ. 175 ಕಿ.ಮೀ. ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಬಿಎಂಆರ್ಸಿಎಲ್ ಎಂಡಿ ಅಂಜುಂ ಪರ್ವೇಜ್ ಹೇಳಿದ್ದಾರೆ.
855 ಮೀಟರ್ ಸುರಂಗ ಕೊರೆದ ವಿಂದ್ಯಾ ಯಂತ್ರ
ಅಕ್ಟೋಬರ್ 13 ರಂದು ನಮ್ಮ ಮೆಟ್ರೋ ಮತ್ತೊಂದು ಟಿಬಿಎಂ ಬ್ರೇಕ್ ಥ್ರೂ ಪಡೆದುಕೊಂಡಿದೆ. ‘ವಿಂದ್ಯಾ’ ಯಂತ್ರ ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದಿದೆ. ಕಳೆದ ತಿಂಗಳು ಹೊರಬಂದಿದ್ದ ಟಿಬಿಎಂ ‘ಊರ್ಜಾ’ ಯಂತ್ರ, ಸುರಂಗ ಕೊರೆಯಲು ಯಶಸ್ವಿಯಾಗಿತ್ತು. ಅಕ್ಟೋಬರ್ 13 ರಂದು 2ನೇ ಯಂತ್ರ ವಿಂದ್ಯಾ ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದಿದೆ. ಕಂಟೋನ್ಮೆಂಟ್ನಿಂದ ಶಿವಾಜಿನಗರದವರೆಗೆ ಸುರಂಗ ಮಾರ್ಗ ಕೊರೆಯಲಾಗಿದೆ. 855 ಮೀಟರ್ ಸುರಂಗ ಕೊರೆದು ವಿಂದ್ಯಾ ಯಂತ್ರ ಹೊರಬಂದಿದೆ.
ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ 2025ರ ಗಡುವನ್ನು ಮಾರ್ಪಡಿಸಿ, 2024 ಕ್ಕೆ ನಿಗದಿ ಪಡಿಸುವಂತೆ ಹಾಗೂ ಇದಕ್ಕೆ ತಕ್ಕ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲು ಸೂಚನೆ ನೀಡಿದ್ದರು. ಇದು ಪೂರ್ಣಗೊಳ್ಳುತ್ತಿದ್ದಂತೆಯೇ ಮೂರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.
ಇದನ್ನೂ ಓದಿ: ನಮ್ಮ ಮೆಟ್ರೋ ಕಾಮಗಾರಿ ವೇಳೆ ಎಡವಟ್ಟು; 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್ ಕಟ್
ಇದನ್ನೂ ಓದಿ: ನಾಯಂಡಹಳ್ಳಿ-ಕೆಂಗೇರಿ ನಡುವೆ ನಮ್ಮ ಮೆಟ್ರೋ ಮಾರ್ಗದಲ್ಲಿ ಕಳಪೆ ರಸ್ತೆಗಳ ನಿರ್ಮಾಣ: ಬಿಬಿಎಂಪಿಗೆ ಆತಂಕ
Published On - 8:05 pm, Tue, 16 November 21