ಬೆಂಗಳೂರು ಮೆಟ್ರೋದಲ್ಲಿ ಯುವತಿಯ ವಿಡಿಯೋ ಚಿತ್ರೀಕರಣ ಆರೋಪ: ದೂರು ಆಧರಿಸಿ ಎಫ್‌ಐಆರ್ ದಾಖಲು

ಬೆಂಗಳೂರು ಮೆಟ್ರೋದಲ್ಲಿ ಯುವತಿಯನ್ನು ಯುವಕನೊಬ್ಬ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತೆಯು ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಆಕೆ ನೀಡಿದ ದೂರಿನ ಮೇರೆಗೆ ಕಾಡುಗೋಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿಯ ಗುರುತು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು ಮೆಟ್ರೋದಲ್ಲಿ ಯುವತಿಯ ವಿಡಿಯೋ ಚಿತ್ರೀಕರಣ ಆರೋಪ: ದೂರು ಆಧರಿಸಿ ಎಫ್‌ಐಆರ್ ದಾಖಲು
ಯುವತಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಕಾಣಿಸಿದ ಯುವಕ

Updated on: Oct 28, 2026 | 9:44 AM

ಮುಖ್ಯಾಂಶಗಳು

  • ಬೆಂಗಳೂರು ಮೆಟ್ರೋದಲ್ಲಿ ಯುವತಿಯ ವಿಡಿಯೋ ಚಿತ್ರೀಕರಣ ಆರೋಪ
  • ಯುವತಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲು
  • ಆರೋಪಿಯ ಪತ್ತೆಗೆ ಪೊಲೀಸರಿಂದ ಕ್ರಮ

ಬೆಂಗಳೂರು, ಅಕ್ಟೋಬರ್ 28: ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರನ್ನು ಸಹಪ್ರಯಾಣಿಕನೊಬ್ಬ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಸೌಪಿಕಾ ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಗುರುತಿಸಿಕೊಂಡಿರುವ ಮಹಿಳೆ, ಈ ಘಟನೆ ಮಂಗಳವಾರ ಸಂಜೆ ಸುಮಾರು 4.30ರ ವೇಳೆಗೆ ವೈಟ್‌ಫೀಲ್ಡ್‌ನ ಮೆಟ್ರೋ ರೈಲಿನಲ್ಲಿ ನಡೆದಿದೆ ಎಂದು ಆರೋಪಿಸಿದ್ದಾರೆ. ಘಟನೆ ಬಳಿಕ ತಾವು ಎದುರಿಸಿದ ಅನುಭವವನ್ನು ವಿವರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೆಟ್ರೋದಲ್ಲೇ ವ್ಯಕ್ತಿಯನ್ನು ಪ್ರಶ್ನಿಸಿದ ಮಹಿಳೆ

ಯುವತಿ ಹಂಚಿಕೊಂಡಿರುವ ವಿಡಿಯೋದಲ್ಲಿ, ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾದ ವ್ಯಕ್ತಿಯನ್ನು ಆಕೆ ಪ್ರಶ್ನಿಸುತ್ತಿರುವ ದೃಶ್ಯಗಳಿವೆ. ಆತನ ಮೊಬೈಲ್ ಫೋನ್ ಹಿಡಿದುಕೊಂಡ ಯುವತಿ, ‘ನನ್ನನ್ನು ಯಾಕೆ ವಿಡಿಯೋ ಮಾಡುತ್ತಿದ್ದೆ?’ ಎಂದು ಪದೇಪದೆ ಪ್ರಶ್ನಿಸಿದ್ದಾರೆ. ಅಲ್ಲದೆ, ಮೊಬೈಲ್ ಅನ್‌ಲಾಕ್ ಮಾಡುವಂತೆಯೂ ಕೇಳಿದ್ದಾರೆ.

ಈ ವೇಳೆ ಮೆಟ್ರೋ ಭದ್ರತಾ ಸಿಬ್ಬಂದಿಯೂ ಸ್ಥಳದಲ್ಲಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಯುವತಿಯ ಪ್ರಕಾರ, ಮೆಟ್ರೋ ನಿಲ್ದಾಣದಲ್ಲಿ ರೈಲು ನಿಂತಾಗ ಆ ವ್ಯಕ್ತಿ ಅಲ್ಲಿಂದ ತೆರಳಲು ಯತ್ನಿಸಿದ್ದಾನೆ. ಆತನ ಫೋನ್‌ ಅನ್ನು ಭದ್ರತಾ ಸಿಬ್ಬಂದಿಗೆ ನೀಡಿದ್ದರೂ, ಆತ ಮತ್ತೆ ಫೋನ್‌ ಪಡೆದು ಓಡಿಹೋದ ಎಂದು ಆಕೆ ಆರೋಪಿಸಿದ್ದಾರೆ. ತಾವು ಧರಿಸಿದ್ದ ಬಟ್ಟೆಯನ್ನೂ ವಿಡಿಯೋದಲ್ಲಿ ತೋರಿಸಿರುವ ಮಹಿಳೆ, ದೇಹ ಕಾಣಿಸುವಂತೆ ಬಟ್ಟೆ ಧರಿಸಿರಲಿಲ್ಲ ಎಂದು ಹೇಳಿದ್ದಾರೆ. ತಮ್ಮ ಉಡುಪು ಈ ಘಟನೆಗೆ ಕಾರಣವಲ್ಲ ಎಂಬುದನ್ನು ಒತ್ತಿಹೇಳಿದ್ದಾರೆ.

ಯುವತಿ ಪೋಸ್ಟ್ ಮಾಡಿರುವ ವಿಡಿಯೋ


‘‘ಕ್ಷಮೆ ಕೇಳುತ್ತೀಯಾ, ಹಾಗಾದರೆ ವಿಡಿಯೋ ಮಾಡಿದ್ದನ್ನು ಒಪ್ಪಿಕೊಳ್ಳುತ್ತೀಯಾ?’’ ಎಂದು ವಿಡಿಯೋದಲ್ಲಿನ ಮತ್ತೊಂದು ದೃಶ್ಯದಲ್ಲಿ, ಮೆಟ್ರೋ ಲಿಫ್ಟ್‌ನಲ್ಲಿ ಯುವತಿ ಆ ವ್ಯಕ್ತಿಯನ್ನು ಪ್ರಶ್ನಿಸುವುದು ಕಂಡುಬರುತ್ತದೆ. ‘‘ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ’’ ಎಂದು ಮಹಿಳೆ ಹೇಳಿದಾಗ, ಆತ ಕ್ಷಮೆ ಕೇಳುತ್ತಾನೆ. ಅದಕ್ಕೆ ಯುವತಿ, ‘‘ಕ್ಷಮೆ ಕೇಳುತ್ತಿದ್ದೀಯಾ? ಹಾಗಾದರೆ ನನ್ನನ್ನು ವಿಡಿಯೋ ಮಾಡಿದ್ದನ್ನು ಒಪ್ಪಿಕೊಳ್ಳುತ್ತೀಯಾ?’’ ಎಂದು ಪ್ರಶ್ನಿಸುತ್ತಾರೆ. ಆದರೆ ಆತ ಅದನ್ನು ನಿರಾಕರಿಸುತ್ತಾನೆ.

ನಂತರವೂ ಯುವತಿ ಮೊಬೈಲ್ ಅನ್‌ಲಾಕ್ ಮಾಡಿ ಪಾಸ್‌ವರ್ಡ್ ನೀಡುವಂತೆ ಕೇಳುತ್ತಾರೆ. ಆದರೆ ಆತ ಫೋನ್‌ ಅನ್ನು ಮರಳಿ ಪಡೆದು ಅಲ್ಲಿಂದ ತೆರಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಯುವತಿಯ ದೂರಿನ ಮೇರೆಗೆ ಎಫ್‌ಐಆರ್


ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಬೆಂಗಳೂರು ನಗರ ಪೊಲೀಸರು ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಘಟನೆಯ ನಿಖರ ಸ್ಥಳದ ಮಾಹಿತಿ ಮತ್ತು ಸಂಪರ್ಕ ಸಂಖ್ಯೆಯನ್ನು ಖಾಸಗಿ ಸಂದೇಶದ ಮೂಲಕ ನೀಡುವಂತೆ ಪೊಲೀಸರು ಕಾಮೆಂಟ್‌ನಲ್ಲಿ ಮನವಿ ಮಾಡಿದ್ದರು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪದೇಪದೇ ಕೈಕೊಡುತ್ತಿರುವ ನಮ್ಮ ಮೆಟ್ರೋ ರೈಲುಗಳು: ಹಳೆಯ ರೈಲುಗಳ ಸರ್ವಿಸ್‌ಗೆ ಬಿಎಂಆರ್‌ಸಿಎಲ್ ಸಿದ್ಧತೆ

ನಂತರ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಸೌಪಿಕಾ, ತಾವು ಕಾಡುಗೋಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಪೊಲೀಸರು ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣವನ್ನು ಶೀಘ್ರವಾಗಿ ತನಿಖೆ ನಡೆಸುವ ಭರವಸೆ ನೀಡಿರುವುದಾಗಿಯೂ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us