AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದೇಪದೇ ಕೈಕೊಡುತ್ತಿರುವ ನಮ್ಮ ಮೆಟ್ರೋ ರೈಲುಗಳು: ಹಳೆಯ ರೈಲುಗಳ ಸರ್ವಿಸ್‌ಗೆ ಬಿಎಂಆರ್‌ಸಿಎಲ್ ಸಿದ್ಧತೆ

ನಮ್ಮ ಮೆಟ್ರೋ ಹಳೆಯ ರೈಲುಗಳ ಸಮಗ್ರ ಸರ್ವಿಸ್ ಮತ್ತು ಬಿಡಿಭಾಗಗಳ ಬದಲಾವಣೆಗೆ ಬಿಎಂಆರ್‌ಸಿಎಲ್ ಮುಂದಾಗಿದೆ. ಪರ್ಪಲ್ ಮತ್ತು ಗ್ರೀನ್ ಲೈನ್‌ಗಳ 57 ರೈಲುಗಳು ತಲಾ 10 ಲಕ್ಷ ಕಿಲೋಮೀಟರ್ ಸಂಚರಿಸಿವೆ. ಹೊಸ ರೈಲಿಗೆ ಸುಮಾರು ₹50 ಕೋಟಿ ವೆಚ್ಚವಾಗಲಿದ್ದು, ಹಳೆಯ ರೈಲನ್ನು ₹15 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡುವ ಮೂಲಕ ಉಳಿತಾಯ ಮಾಡುವ ಗುರಿ ಹೊಂದಲಾಗಿದೆ.

ಪದೇಪದೇ ಕೈಕೊಡುತ್ತಿರುವ ನಮ್ಮ ಮೆಟ್ರೋ ರೈಲುಗಳು: ಹಳೆಯ ರೈಲುಗಳ ಸರ್ವಿಸ್‌ಗೆ ಬಿಎಂಆರ್‌ಸಿಎಲ್ ಸಿದ್ಧತೆ
ಸಾಂದರ್ಭಿಕ ಚಿತ್ರImage Credit source: BMRCL
ಕಿರಣ್​ ಸೂರ್ಯ
| Edited By: |

Updated on:Oct 28, 2026 | 8:13 AM

Share

ಮುಖ್ಯಾಂಶಗಳು

  • 57 ಮೆಟ್ರೋ ರೈಲುಗಳು 10 ಲಕ್ಷ ಕಿಲೋಮೀಟರ್ ಸಂಚಾರ
  • ಹಳೆಯ ರೈಲುಗಳ ದುರಸ್ತಿಗೆ ₹15 ಕೋಟಿ ವೆಚ್ಚ
  • ಹೊಸ ರೈಲು ಖರೀದಿಗಿಂತ ₹35 ಕೋಟಿ ಉಳಿತಾಯದ ಗುರಿ

ಬೆಂಗಳೂರು, ಅಕ್ಟೋಬರ್ 28: ನಮ್ಮ ಮೆಟ್ರೋ ರೈಲುಗಳಲ್ಲಿ ಪದೇಪದೇ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಹಳೆಯ ರೈಲುಗಳ ಸರ್ವಿಸ್ ಮತ್ತು ಬಿಡಿಭಾಗಗಳ ಬದಲಾವಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ. ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಸಂಚರಿಸುತ್ತಿರುವ 57 ರೈಲುಗಳು ತಲಾ 10 ಲಕ್ಷ ಕಿಲೋಮೀಟರ್ ಸಂಚಾರ ಪೂರ್ಣಗೊಳಿಸಿವೆ. ಹೀಗಾಗಿ ರೈಲುಗಳ ಪ್ರಮುಖ ಉಪಕರಣಗಳನ್ನು ಪರಿಶೀಲಿಸಿ, ದುರಸ್ತಿ ಮಾಡುವುದು ಹಾಗೂ ಅಗತ್ಯ ಬಿಡಿಭಾಗಗಳನ್ನು ಬದಲಾಯಿಸುವ ಯೋಜನೆ ರೂಪಿಸಲಾಗಿದೆ.

10 ಲಕ್ಷ ಕಿಲೋಮೀಟರ್ ಸಂಚರಿಸಿದ 57 ಮೆಟ್ರೋ ರೈಲುಗಳು

ನಮ್ಮ ಮೆಟ್ರೋ ಸೇವೆ ಆರಂಭವಾದ ಆರಂಭಿಕ ಹಂತದಲ್ಲಿ 2011ರಲ್ಲಿ ಪರ್ಪಲ್ ಲೈನ್‌ನ ಎಂಜಿ ರಸ್ತೆ–ಬೈಯಪ್ಪನಹಳ್ಳಿ ಮಾರ್ಗದಲ್ಲಿ ಐದು ರೈಲುಗಳು ಸಂಚಾರ ಆರಂಭಿಸಿದ್ದವು. ಬಳಿಕ ಹಂತ ಹಂತವಾಗಿ ರೈಲುಗಳ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಒಟ್ಟು 57 ರೈಲುಗಳು ಕಾರ್ಯನಿರ್ವಹಿಸುತ್ತಿವೆ.

ಈ ರೈಲುಗಳು ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದು, ಕೆಲವು ರೈಲುಗಳು ತಾಂತ್ರಿಕ ಸಮಸ್ಯೆಗಳಿಂದ ಸಂಚಾರದ ವೇಳೆ ತೊಂದರೆ ಅನುಭವಿಸುತ್ತಿವೆ. ರೈಲುಗಳು ಹಳಿಗಳ ಮೇಲೆ ಕೆಟ್ಟು ನಿಲ್ಲುವುದರಿಂದ ಪ್ರಯಾಣಿಕರ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆಯ ರೈಲುಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯ ನಿರ್ವಹಣೆ ಕೈಗೊಳ್ಳಲು ಬಿಎಂಆರ್‌ಸಿಎಲ್ ಯೋಜಿಸಿದೆ.

21 ಹೊಸ ರೈಲುಗಳಿಗೆ ಈಗಾಗಲೇ ಆರ್ಡರ್

ಮೆಟ್ರೋ ಪ್ರಯಾಣಿಕರ ಸಂಚಾರದ ಒತ್ತಡ ನಿರ್ವಹಿಸಲು ಬಿಎಂಆರ್‌ಸಿಎಲ್ ಈಗಾಗಲೇ 21 ಹೊಸ ರೈಲುಗಳಿಗೆ ಆರ್ಡರ್ ನೀಡಿದೆ. ಈ ಪೈಕಿ ನಾಲ್ಕು ರೈಲುಗಳು ಆಗಮಿಸಿದ್ದು, ಉಳಿದ 17 ರೈಲುಗಳು ಬಂದ ಬಳಿಕ ಹಳೆಯ ರೈಲುಗಳ ಸರ್ವಿಸ್ ಮತ್ತು ದುರಸ್ತಿ ಕಾರ್ಯ ಆರಂಭಿಸುವ ಯೋಜನೆ ಇದೆ.

ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ವಹಣಾ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಪದೇಪದೇ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಂದ ಪ್ರಯಾಣಿಕರು ಎದುರಿಸುತ್ತಿರುವ ತೊಂದರೆ ಕಡಿಮೆಯಾಗಬಹುದೇ ಎಂಬ ನಿರೀಕ್ಷೆಯಿದೆ.

ಹೊಸ ರೈಲು ಖರೀದಿಗಿಂತ ದುರಸ್ತಿಗೆ ಒತ್ತು: ₹35 ಕೋಟಿ ಉಳಿತಾಯದ ಗುರಿ

ಹೊಸ ಮೆಟ್ರೋ ರೈಲೊಂದಕ್ಕೆ ಸುಮಾರು ₹50 ಕೋಟಿ ವೆಚ್ಚವಾಗಲಿದೆ. ಆದರೆ, ಹಳೆಯ ರೈಲನ್ನು ದುರಸ್ತಿ ಮಾಡಿ ಪುನಃ ಸೇವೆಗೆ ಅಣಿಗೊಳಿಸಲು ಸುಮಾರು ₹15 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಮೂಲಕ ಪ್ರತಿ ರೈಲಿಗೆ ಸುಮಾರು ₹35 ಕೋಟಿ ಉಳಿತಾಯ ಮಾಡುವ ಉದ್ದೇಶ ಬಿಎಂಆರ್‌ಸಿಎಲ್ ಹೊಂದಿದೆ.

ದುರಸ್ತಿ ಪ್ರಕ್ರಿಯೆಯಲ್ಲಿ ರೈಲಿನ ಮೋಟಾರ್, ಚಾಲನಾ ವ್ಯವಸ್ಥೆ, ವಿದ್ಯುತ್ ಉಪಕರಣಗಳು, ಕೇಬಲ್‌ಗಳು, ಬ್ಯಾಟರಿ, ಚಕ್ರಗಳು, ಆಕ್ಸಲ್‌ಗಳು, ಬ್ರೇಕ್‌ಗಳು ಮತ್ತು ಬಾಗಿಲುಗಳನ್ನು ಪರಿಶೀಲಿಸಲಾಗುತ್ತದೆ. ಇದರ ಜತೆಗೆ ಪ್ರಯಾಣಿಕರ ಸುರಕ್ಷತಾ ವ್ಯವಸ್ಥೆಗಳು, ಹವಾನಿಯಂತ್ರಣ, ಗಾಳಿಯಾಡುವ ವ್ಯವಸ್ಥೆ, ಸಿಗ್ನಲಿಂಗ್ ಮತ್ತು ನಿಯಂತ್ರಣ ವ್ಯವಸ್ಥೆ, ಎಲೆಕ್ಟ್ರಾನಿಕ್ ಉಪಕರಣಗಳು, ಪ್ರಯಾಣಿಕರ ಆಸನಗಳು ಹಾಗೂ ಬೋಗಿಯ ಒಳಭಾಗದಲ್ಲಿರುವ ಇತರ ಉಪಕರಣಗಳ ಸ್ಥಿತಿಯನ್ನೂ ಪರಿಶೀಲಿಸಲಾಗುತ್ತದೆ.

LIVE TV

ದುರಸ್ತಿ ಮಾಡಲು ಸಾಧ್ಯವಿರುವ ಉಪಕರಣಗಳನ್ನು ಸರಿಪಡಿಸಲಾಗುತ್ತದೆ. ದುರಸ್ತಿಗೆ ಸಾಧ್ಯವಾಗದ ಅಥವಾ ಬದಲಾವಣೆ ಅಗತ್ಯವಿರುವ ಬಿಡಿಭಾಗಗಳನ್ನು ಹೊಸದಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 am, Wed, 28 October 26

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More