ಬೆಂಗಳೂರು: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಜನವರಿ 5ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಪರಿಶೀಲನೆ ನಡೆಸಲಿದ್ದಾರೆ ಎಂದು ಕರ್ನಾಟಕ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ (CC Patil) ಮಾಹಿತಿ ನೀಡಿದ್ದಾರೆ. ಬುಧವಾರ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಸಚಿವ ಸಿಸಿ ಪಾಟೀಲ್, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿನ ಅತಿಯಾದ ಪ್ರವಾಹದ ಬಗ್ಗೆಯೂ ಮಾತನಾಡಿದರು.
ಜೆಡಿಎಸ್ ಎಂಎಲ್ಸಿ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಸಿ ಪಾಟೀಲ್, ಕರ್ನಾಟಕದಲ್ಲಿ ಈ ವರ್ಷ ಹಿಂದಿನ ವರ್ಷಕ್ಕಿಂತ ಹೆಚ್ಚು ಮಳೆಯಾಗಿದ್ದು, ನೀರಿನ ಹರಿವು ಹೆಚ್ಚಾಗಿದೆ. ಎಕ್ಸ್‌ಪ್ರೆಸ್‌ವೇಯ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಜನವರಿ 5ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪರಿಶೀಲನೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಸಂಚಾರ ಅಪಾಯಗಳು! ಮೃತ್ಯುಕೂಪವಾಗುತ್ತಿದೆ ಬೆಂಗಳೂರು-ಮೈಸೂರು ನೂತನ ಹೆದ್ದಾರಿ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 10 ಲೇನ್ ಎಕ್ಸ್‌ಪ್ರೆಸ್‌ವೇ ಈ ಮಾರ್ಗದಲ್ಲಿ ಅಪಘಾತಗಳ ಸಂಖ್ಯೆಗೆ ಸುದ್ದಿಯಾಗಿದೆ. ಪೊಲೀಸ್ ಇಲಾಖೆಯ ಪ್ರಕಾರ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಳೆದ 6 ತಿಂಗಳಲ್ಲಿ 77 ಅಪಘಾತಗಳು ಉಂಟಾಗಿವೆ. ಈ ಅಪಘಾತಗಳಲ್ಲಿ ಒಟ್ಟು 28 ಜನರು ಪ್ರಾಣ ಕಳೆದುಕೊಂಡಿದ್ದು, 67 ಜನರು ಗಾಯಗೊಂಡಿದ್ದಾರೆ.
ಕೆಂಗೇರಿಯಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇ ಪ್ರಸ್ತುತ 3.5 ಗಂಟೆಗಳ ಪ್ರಯಾಣವನ್ನು ಕೇವಲ 1.5 ಗಂಟೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. 8,453 ಕೋಟಿ ರೂ. ವೆಚ್ಚದ ಈ ಯೋಜನೆಯು ಮುಂದಿನ ವರ್ಷ ಮಾರ್ಚ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಆದರೆ, NHAI (ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಬೆಂಗಳೂರಿನಿಂದ ಮಂಡ್ಯಕ್ಕೆ ವಾಹನಗಳನ್ನು ಚಲಾಯಿಸಲು ಅನುಮತಿ ನೀಡಿದ್ದು, ಉಳಿದ ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ. ಈ ರಸ್ತೆಯು 118 ಕಿಲೋಮೀಟರ್ ಉದ್ದವನ್ನು ಹೊಂದಿದೆ ಮತ್ತು ಉದ್ಘಾಟನೆಗೂ ಮುಂಚೆಯೇ ವಾಹನಗಳ ಭಾರೀ ಸಂಚಾರಕ್ಕೆ ಸಾಕ್ಷಿಯಾಗಿದೆ.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್‌ನ ಬಹುತೇಕ ರಸ್ತೆಗಳು ಜನವರಿಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದ್ದು, ಮುಂದಿನ ವರ್ಷ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಾಧ್ಯತೆ ಇದೆ. ಎನ್‌ಎಚ್‌ಎಐ ಅಧಿಕಾರಿಗಗಳು ಹೇಳುವಂತೆ ಎಕ್ಸ್‌ಪ್ರೆಸ್‌ವೇಯಲ್ಲಿ 16 ಅಪಘಾತ ವಲಯಗಳಿದೆ. ಆದರೆ, ಅಧಿಕಾರಿಗಳು ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ.