Bengaluru Metro: ಬೆಂಗಳೂರು ಟು ಹೊಸೂರು ಮೆಟ್ರೋ ವಿಸ್ತರಣೆಗೆ ಕನ್ನಡಿಗರ ವಿರೋಧ; ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ಕರವೇ ಪ್ರವೀಣ್ ಶೆಟ್ಟಿ ಬಣ
ನಮ್ಮ ಮೆಟ್ರೋ 2ನೇ ಹಂತದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗವನ್ನು ಹೊಸೂರು ತನಕ ವಿಸ್ತರಣೆ ಸಂಬಂಧ ನೂತನ ಮಾರ್ಗದ ಅಧ್ಯಯನಕ್ಕೆ ಕೇಂದ್ರ ಸರ್ಕಾರಕ್ಕೆ ಚೆನ್ನೈ ಮೆಟ್ರೋ ನಿಗಮ ಪ್ರಸ್ತಾವ ಸಲ್ಲಿಸಿತ್ತು. ಸದ್ಯ ತಮಿಳುನಾಡು ಮನವಿಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ಸೂಚಿಸದೆ. ಆದರೆ ಇದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು: ನಮ್ಮ ಮೆಟ್ರೋ (Bengaluru Namma Metro) 2ನೇ ಹಂತದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗವನ್ನು ಹೊಸೂರು ತನಕ ವಿಸ್ತರಣೆ (Bengaluru to Hosur Metro expansion) ಸಂಬಂಧ ನೂತನ ಮಾರ್ಗದ ಅಧ್ಯಯನಕ್ಕೆ ಕೇಂದ್ರ ಸರ್ಕಾರಕ್ಕೆ ಚೆನ್ನೈ ಮೆಟ್ರೋ ನಿಗಮ (Chennai Metro Corporation) ಪ್ರಸ್ತಾಪಿಸಿದ್ದು, ಕೇಂದ್ರದಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಆದರೆ ಇದಕ್ಕೆ ಕರವೇ ಪ್ರವೀಣ್ ಶೆಟ್ಟಿ ಬಣ ವಿರೋಧ ವ್ಯಕ್ತಪಡಿಸುತ್ತಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K.Stalin) ಮಾಡಿದ ಮನವಿಗೆ ಕೇಂದ್ರ ಅನುಮೋದನೆ ನೀಡಿದೆ. ಯಾವುದೇ ಕಾರಣಕ್ಕೂ ಹೊಸೂರುವರೆಗೆ ಮೆಟ್ರೋ ವಿಸ್ತರಿಸಬೇಡಿ. ವಿಸ್ತರಣೆಗೆ ನಮ್ಮ ವಿರೋಧ ಇದೆ. ಒಂದೊಮ್ಮೆ ವಿಸ್ತರಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ನಮ್ಮ ನೀರಾವರಿ ಯೋಜನೆಗಳಿಗೆ ತಮಿಳುನಾಡು ವಿರೋಧ ಮಾಡುತ್ತದೆ. ಬೆಂಗಳೂರು ನಗರ, ಗ್ರಾಮಾಂತರಕ್ಕೆ ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ಅಡ್ಡಿಪಡಿಸುತ್ತಿದೆ. ಹೊಗೆನಕಲ್ ಯೋಜನೆಗೆ ಬಹಳಷ್ಟು ಅಡ್ಡಿಪಡಿಸಿದ್ದಾರೆ. ಹೊಸೂರಿಗೆ ಮೆಟ್ರೋ ವಿಸ್ತರಣೆ ಮಾಡಿದರೆ ನಮ್ಮ ಕನ್ನಡಿಗರಿಗೆ ಸಮಸ್ಯೆಯಾಗಲಿದೆ. ಮೆಟ್ರೋ ಸಂಪರ್ಕದಿಂದ ಬೆಂಗಳೂರಿಗೆ ಹೆಚ್ಚು ತಮಿಳಿಗರು ಬರುತ್ತಾರೆ. ಬೆಂಗಳೂರಿನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರಿಗೆ ಸಂಕಷ್ಟ ಎದುರಾಗಲಿದೆ. ಇಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಉದ್ಯೋಗ ಕಸಿಯುತ್ತಾರೆ. ಹೀಗಾಗಿ ಕೂಡಲೇ ಮೆಟ್ರೋ ವಿಸ್ತರಣೆಗೆ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಬೆಂಗಳೂರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.
ಈಗಾಗಲೇ ತಮಿಳು ಸಂಘಟನೆ ಬೆಂಗಳೂರು ನಗರವನ್ನ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮಾನವಿಯನ್ನ ಸಲ್ಲಿಸಿದೆ. ಅದು ಅಲ್ಲದೇ ಬೆಂಗಳೂರು, ಹೊಸಕೋಟೆ, ಅತ್ತಿಬೆಲೆ, ಕೋಲಾರ, ಬಿಡದಿ ಅನೇಕ ಕಾರ್ಖಾನೆಗಳಲ್ಲಿ ಕನ್ನಡದವರಿಗೆ ಕೆಲಸವಿಲ್ಲ. ಈಗ ಹೊಸೂರಿನಿಂದ ಮೆಟ್ರೋ ಬಂದಿದ್ದೆ ಆದರೆ ತಮಿಳುನಾಡಿನ ಎಲ್ಲ ಕಾರ್ಮಿಕರು ಬೆಂಗಳೂರಿನ ಸುತ್ತಮುತ್ತಲ ಕಾರ್ಖಾನೆಗಳಲ್ಲಿ ತುಂಬಿಕೊಂಡ ಕನ್ನಡಿಗರ ಉದ್ಯೋಗವನ್ನ ಕಿತ್ತುಕೊಳ್ಳುತ್ತಾರೆ. ಬೆಂಗಳೂರಲ್ಲಿ ಈಗಾಗಲೇ ಕನ್ನಡ ಮಾಯವಾಗಿದೆ. ಇನ್ನು ಮುಂದೆ ತಮಿಳುಮಯವಾಗುತ್ತದೆ. ಅಭಿವೃದ್ಧಿ ವಿಚಾರವಾಗಿ ನಾವು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಜೋಡಣೆ ಮಾಡುವುದನ್ನ ತೀವ್ರವಾಗಿ ವಿರೋಧಿಸುತ್ತೇವೆ. ನೀವು ತುಮಕೂರು ಅಥವಾ ರಾಮನಗರದವರೆಗೆ ಮೆಟ್ರೋ ವಿಸ್ತರಿಸಿ, ನಮ್ಮ ವಿರೋಧವಿಲ್ಲ. ಅದನ್ನು ಮೀರಿ ಹೊಸೂರಿಗೆ ಮೆಟ್ರೋ ಸಂಪರ್ಕಿಸಲು ಪ್ರಯತ್ನಿಸಿದರೆ ತೀವ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: BMRCL Recruitment 2023: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ವೇತನ 1.40 ಲಕ್ಷ ರೂ.
ನಮ್ಮ ಮೆಟ್ರೋ 2ನೇ ಹಂತದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗವನ್ನು ಹೊಸೂರು ತನಕ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಚೆನ್ನೈ ಮೆಟ್ರೋ ನಿಗಮ ಪ್ರಸ್ತಾವ ಸಲ್ಲಿಸಿತ್ತು. ಸದ್ಯ ತಮಿಳುನಾಡು ಮನವಿಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ಸೂಚಿಸಿದೆ. ಅದರಂತೆ ಶೀಘ್ರದಲ್ಲೇ ತಮಿಳುನಾಡು ಸರ್ಕಾರ ನೂತನ ಮಾರ್ಗದ ಅಧ್ಯಯನ ಆರಂಭಿಸುವ ಸಾಧ್ಯತೆ ಇದೆ. ಇತ್ತ, ಹೊಸೂರು ರಸ್ತೆಯಲ್ಲಿರುವ ಆರ್. ವಿ.ರಸ್ತೆಯಿಂದ ಬೊಮ್ಮಸಂದ್ರದ ಹಳದಿ ಮೆಟ್ರೊ ರೈಲು ಮಾರ್ಗ ಅಂತಿಮ ಹಂತ ತಲುಪಿದ್ದು, 2023ರಲ್ಲಿ ಕಾರ್ಯಾರಂಭ ಆಗಲಿರುವ ಮೆಟ್ರೊ ರೈಲು ಮಾರ್ಗಗಳಲ್ಲಿ ಇದೂ ಒಂದಾಗಿದೆ. ಹೀಗಾಗಿ ಹೊಸೂರು ತನಕ ವಿಸ್ತರಣೆ ಮಾಡಬೇಕು ಎಂಬ ತಮಿಳುನಾಡು ಸರ್ಕಾರದ ಪ್ರಸ್ತಾವಣೆವಾಗಿದೆ.
ಹೊಸೂರಿಗೆ ಮೆಟ್ರೋ ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ 2022 ಜೂನ್‌ನಲ್ಲಿ ಒಪ್ಪಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಚೆನ್ನೈ ಮೆಟ್ರೊ ರೈಲು ನಿಗಮದ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಕೆ ಮಾಡಿತ್ತು. ನಿಗಮದ ಮನವಿಯಂತೆ ಫೆ.21ರಂದು ಕೇಂದ್ರದಿಂದ ಒಪ್ಪಿಗೆ ದೊರೆತಿದ್ದು, ಅಧ್ಯಯನಕ್ಕೆ ತಮಿಳುನಾಡು ಸರ್ಕಾರದಿಂದ 75 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಬೊಮ್ಮಸಂದ್ರದಿಂದ ಹೊಸೂರಿಗೆ 20.5 ಕಿಲೋ ಮೀಟರ್ ಮೆಟ್ರೊ ರೈಲು ಮಾರ್ಗ ನಿರ್ಮಾಣ ಆಗಬೇಕಿದೆ. ಈ ಪೈಕಿ 11.7 ಕಿಲೋ ಮೀಟರ್ ಕರ್ನಾಟಕದ ವ್ಯಾಪ್ತಿಯಲ್ಲಿ ಇದೆ. ಉಳಿದ 8.8 ಕಿಲೋ ಮೀಟರ್ ಮಾರ್ಗ ರಾಜ್ಯದ ಗಡಿ ದಾಟಿ ನಿರ್ಮಾಣ ಆಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Mon, 27 February 23