ಪಿಂಕ್ ಲೈನ್ ಮೆಟ್ರೋ ಆರಂಭ ಯಾವಾಗ? ಮಹತ್ವದ ಮಾಹಿತಿ ಹಂಚಿಕೊಂಡ ಬಿಎಂಆರ್​ಸಿಎಲ್

ನಮ್ಮ ಮೆಟ್ರೋ ಪಿಂಕ್ ಲೈನ್ ಕಾರ್ಯಾಚರಣೆ ಬಗ್ಗೆ BMRCL ಮಹತ್ವದ ಮಾಹಿತಿ ನೀಡಿದೆ. ಪಿಂಕ್ ಲೈನ್ ಮೆಟ್ರೋ ಎರಡು ಹಂತಗಳಲ್ಲಿ ಉದ್ಘಾಟನೆಯಾಗಲಿದೆ. ಕಾಳೇನ ಅಗ್ರಹಾರ-ತಾವರೆಕೆರೆ 7.5 ಕಿಮೀ ಎಲಿವೇಟೆಡ್ ವಿಭಾಗ 2026ರ ಮೇ ವೇಳೆಗೆ, ಉಳಿದ 13.76 ಕಿಮೀ ಸುರಂಗ ಮಾರ್ಗ ಡಿಸೆಂಬರ್ 2026ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪಿಂಕ್ ಲೈನ್ ಮೆಟ್ರೋ ಆರಂಭ ಯಾವಾಗ? ಮಹತ್ವದ ಮಾಹಿತಿ ಹಂಚಿಕೊಂಡ ಬಿಎಂಆರ್​ಸಿಎಲ್
ಮೆಟ್ರೋ ಸುರಂಗ ಮಾರ್ಗ (ಸಾಂದರ್ಭಿಕ ಚಿತ್ರ(

Updated on: Nov 04, 2025 | 10:32 AM

ಬೆಂಗಳೂರು, ನವೆಂಬರ್ 4: ನಮ್ಮ ಮೆಟ್ರೋದ (Namma Metro) ಪಿಂಕ್ ಲೈನ್​ನ ಒಟ್ಟು 21.26 ಕಿಮೀ ಉದ್ದದ ಮಾರ್ಗದಲ್ಲಿ 2026 ರ ಮೇ ವೇಳೆಗೆ ರೈಲು ಸಂಚಾರ ಶುರುವಾಗಲಿದೆಯೇ? ಇಂಥದ್ದೊಂದು ಪ್ರಶ್ನೆ ಜನರಲ್ಲಿ ಕಳೆದ ಕೆಲವು ದಿನಗಳಿಂದ ಉದ್ಭವಿಸಿತ್ತು. ಇದಕ್ಕೆ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಅವರು ಎಕ್ಸ್ ಮೂಲಕ ನೀಡಿದ್ದ ಮಾಹಿತಿ. ಆದರೆ, ಪಿಂಕ್ ಲೈನ್ ಮೆಟ್ರೋ ಕಾರ್ಯಾಚರಣೆ ಬಗ್ಗೆ ಇದೀಗ ಬಿಎಂಆರ್​ಸಿಎಲ್ (BMRCL) ಅಧಿಕೃತ ಮಾಹಿತಿ ನೀಡಿದೆ. ಅದರಂತೆ, ಪಿಂಕ್ ಲೈನ್​ನ ಸಂಪೂರ್ಣ ಮೆಟ್ರೋ ಮಾರ್ಗದಲ್ಲಿ 2026 ರ ಮೇ ವೇಳೆಗೆ ರೈಲು ಸಂಚಾರ ಶುರುವಾಗುವುದಿಲ್ಲ.

ನಮ್ಮ ಮೆಟ್ರೋ ಪಿಂಕ್ ಲೈನ್ ಎರಡು ಹಂತಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಡುವಿನ 7.5 ಕಿಮೀ ಎಲಿವೇಟೆಡ್ ಲೈನ್ ವಿಭಾಗವು 2026 ರ ಮೇ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಉಳಿದ 13.76 ಕಿಮೀ ಅಂಡರ್​ಗ್ರೌಂಡ್ ಮಾರ್ಗವು 2026 ರ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಪಿಂಕ್ ಲೈನ್​ನ ಎಲಿವೇಟೆಡ್ ವಿಭಾಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನೆಗೆ ಮೊದಲು ಸಣ್ಣಪುಟ್ಟ ಕೆಲಸಗಳು ಮಾತ್ರ ಉಳಿದಿವೆ. ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗುವ ಈ ವಿಭಾಗವು ಆರು ನಿಲ್ದಾಣಗಳನ್ನು (ತಾವರೆಕೆರೆ, ಜಯದೇವ ಆಸ್ಪತ್ರೆ, ಜೆಪಿ ನಗರ 4 ನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ) ಹೊಂದಿರುತ್ತದೆ ಎಂದು ಬಿಎಂಆರ್​​ಸಿಎಲ್ ಅಧಿಕಾರಿ ತಿಳಿಸಿದ್ದಾರೆ.

ದಕ್ಷಿಣ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಜಯದೇವ ಆಸ್ಪತ್ರೆ ನಿಲ್ದಾಣವು ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಲಾಲ್ ಬಾಗ್ ಮಾತ್ರವಲ್ಲ, ಸ್ಯಾಂಕಿ ಟ್ಯಾಂಕ್ ಕೆರೆಗೂ ಸುರಂಗ ರಸ್ತೆಯಿಂದ ಹಾನಿ ಎಂದ ತಜ್ಞರು

ಮತ್ತೊಂದೆಡೆ, 2024 ರ ಡಿಸೆಂಬರ್​​ನಲ್ಲೇ ಸುರಂಗ ಮಾರ್ಗ ಪೂರ್ಣಗೊಂಡಿದ್ದರೂ ಅಡರ್ ಗ್ರೌಡ್ ವಿಭಾಗದ ಕಾಮಗಾರಿ ಇನ್ನೂ ನಡೆಯುತ್ತಿದೆ. ಡೈರಿ ಸರ್ಕಲ್, ಎಂಜಿ ರಸ್ತೆ ಮತ್ತು ನಾಗವಾರ ಮೂಲಕ ಹಾದುಹೋಗುವ 13.76 ಕಿಮೀ ಕಾರಿಡಾರ್ 12 ನಿಲ್ದಾಣಗಳನ್ನು ಒಳಗೊಂಡಿರುತ್ತದೆ ಮತ್ತು ಎಂಜಿ ರಸ್ತೆಯಲ್ಲಿ ನಗರದ ನಾಲ್ಕನೇ ಇಂಟರ್‌ಚೇಂಜ್ ಅನ್ನು ಒಳಗೊಂಡಿರುತ್ತದೆ ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ