ಲಾಲ್ ಬಾಗ್ ಮಾತ್ರವಲ್ಲ, ಸ್ಯಾಂಕಿ ಟ್ಯಾಂಕ್ ಕೆರೆಗೂ ಸುರಂಗ ರಸ್ತೆಯಿಂದ ಹಾನಿ ಎಂದ ತಜ್ಞರು
ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಸುರಂಗ ರಸ್ತೆ ಲಾಲ್ ಬಾಗ್ ಒಳಗೆ ಬರುವುದಕ್ಕೆ ಈಗಾಗಲೇ ದೊಡ್ಡ ಮಟ್ಟದಲ್ಲಿ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಟನಲ್ ರೋಡ್ ಎಕ್ಸಿಟ್ ರ್ಯಾಂಪ್ ಸ್ಯಾಂಕಿ ಕೆರೆಯ ಪಕ್ಕದಲ್ಲೇ ಹಾದು ಹೋಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಯೋಜನೆಯ ಕಾಮಗಾರಿಯಿಂದ ಕೆರೆಯ ಜಲಮೂಲಕ್ಕೆ ಹಾನಿ ಆಗಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ನವೆಂಬರ್ 4: ಬೆಂಗಳೂರು (Bengaluru) ಸುರಂಗ ರಸ್ತೆ (Tunnel Road) ಯೋಜನೆ ಲಾಲ್ ಬಾಗ್ ಅಡಿಯಲ್ಲಿ ಹಾದುಹೋಗುವ ಸಂಬಂಧ ವಿರೋಧ ವ್ಯಕ್ತವಾಗಿರುವುದರ ಮಧ್ಯೆ ಇದೀಗ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದವರಿಗೂ ಸಮಸ್ಯೆ ಎದುರಾಗಲಿದೆ ಎಂಬ ವಿಚಾರ ಬಹಿರಂಗವಾಗಿದೆ. ಮಲ್ಲೇಶ್ವರಂನ ಸ್ಯಾಂಕಿ ಕೆರೆ (Sankey Tank) ಕಡೆಯಲ್ಲಿ ಟನಲ್ ರೋಡ್ ಎಕ್ಸಿಟ್ ರ್ಯಾಂಪ್ ಪಥದ ಅಲೈನ್ಮೆಂಟ್ ಬದಲಾವಣೆ ಮಾಡಲಾಗುತ್ತಿದೆಯಂತೆ. ಆದರೆ ಡಿಪಿಆರ್ನಲ್ಲಿ ಸ್ಯಾಂಕಿ ಕೆರೆ ಪಕ್ಕದಲ್ಲೇ ಎಕ್ಸಿಟ್ ರ್ಯಾಂಪ್ ನಿರ್ಮಾಣ ಆಗುವ ಬಗ್ಗೆ ಮಾಹಿತಿಯೇ ಇಲ್ಲ ಎನ್ನಲಾಗಿದೆ. ಈಗ ಹೊಸದಾಗಿ ಸ್ಯಾಂಕಿ ಟ್ಯಾಂಕ್ ಪಕ್ಕದಲ್ಲೇ ಎಕ್ಸಿಟ್ ರ್ಯಾಂಪ್ ಮಾಡಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಿ.ವಿ.ರಾಮನ್ ರಸ್ತೆಯಲ್ಲಿ ಎಂಟ್ರಿ ಮತ್ತು ಎಕ್ಸಿಟ್ ರ್ಯಾಂಪ್ ಯೋಜನೆ ಕೈಬಿಟ್ಟು, ಸ್ಯಾಂಕಿ ರಸ್ತೆಯಲ್ಲಿ ಹೆಚ್ಚುವರಿಯಾಗಿ ರ್ಯಾಂಪ್ 6ಎ ಸೇರಿಸಲು ತೀರ್ಮಾನಿಸಲಾಗಿದೆ. ರ್ಯಾಂಪ್ 6 ಸರಾಸರಿ 2,450 ಕಿ.ಮೀ ಉದ್ದ ಇರಲಿದೆ. ಇದರಿಂದ ಕೆರೆಯ ಪಕ್ಕದ ಬಂಡೆ ಕೆಳಗೆ ಟನಲ್ ಕೊರೆಯಬೇಕಿರುವುದರಿದ ಕೆರೆಯ ಜಲಮೂಲಕ್ಕೆ ಹಾನಿ ಆಗಬಹುದು, ಇದರಿಂದ ಕೆರೆ ಬತ್ತಿ ಹೋಗಬಹುದು ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸ್ಥಾಪಕ ರಾಜ್ ದುಗಾರ್ ಅಭಿಪ್ರಾಯಪಟ್ಟಿದ್ದಾರೆ.
ಗಾಲ್ಫ್ ಮೈದಾನದ ಕೆಳಭಾಗದಿಂದ ನಿರ್ಗಮನ ರ್ಯಾಂಪ್ ಆರಂಭವಾಗಿ, ಸ್ಯಾಂಕಿ ರಸ್ತೆಯಲ್ಲಿ ಕೆರೆಯ ದಡದಲ್ಲಿ ಮುಕ್ತಾಯವಾಗಲಿದೆ. ಸ್ಯಾಂಕಿ ರಸ್ತೆ ಪಕ್ಕದಲ್ಲಿ ಸುರಂಗ ರಸ್ತೆ ನಿರ್ಮಿಸಿದರೆ ಕೆರೆಯ ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ಕಟ್ಟಡಗಳಿಗೂ ಧಕ್ಕೆ: ತಜ್ಞರ ಕಳವಳ
ಒಂದೊಂದು ರಾಂಪ್ಗೂ ಸಾಕಷ್ಟು ಜಾಗದ ಅಗತ್ಯವಿದೆ. ಸ್ಯಾಂಕಿ ಕೆರೆಯಲ್ಲಿ ರ್ಯಾಂಪ್ ನಿರ್ಮಾಣ ಮಾಡಿದ್ರೆ ಸಾಕಷ್ಟು ಹಾನಿ ಆಗುವ ಸಾಧ್ಯತೆ ಇದೆ. ಐಕಾನಿಕ್ ಕೆರೆಗೆ ಧಕ್ಕೆ ತರುವುದು ಸೂಕ್ತವಲ್ಲ. ಸ್ಯಾಂಕಿ ಕೆರೆಯ ಭಾಗದಲ್ಲಿ ರ್ಯಾಂಪ್ ಬಂದರೆ ಸುತ್ತಲಿನ ಪ್ರದೇಶಗಳಿಗೂ ಧಕ್ಕೆ ಉಂಟಾಗಲಿದ್ದು, ಗಂಧದ ಮರದ ಕೋಟೆವನ, ವುಡ್ ಇನ್ಸ್ಟಿಟ್ಯೂಟ್, ರಿಸರ್ಚ್ ಸೆಂಟರ್ ಇಂತಹ ಐತಿಹಾಸಿಕ ಕಟ್ಟಡಗಳಿಗೂ ಧಕ್ಕೆ ಉಂಟಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಲ್ಲೇಶ್ವರಂ ನಿವಾಸಿ ಸುಬ್ರಹ್ಮಣ್ಯ, ಟನಲ್ ರೋಡ್ ಟ್ರಾಫಿಕ್ ಕಂಟ್ರೋಲ್ ಮಾಡುವ ದೃಷ್ಟಿಯಿಂದ ಒಳ್ಳೆಯದು. ಆದರೆ ಮರಗಳು, ಲಾಲ್ ಬಾಗ್, ಸ್ಯಾಂಕಿ ಕೆರೆಗಳಿಗೆ ಯಾವುದೇ ಹಾನಿ ಆಗದಂತೆ ಮಾಡುವುದಾದರೆ ಮಾಡಲಿ. ಇಲ್ಲವಾದರೆ ಬೇಡ ಎಂದಿದ್ದಾರೆ.
ಇದನ್ನೂ ಓದಿ: ಲಾಲ್ಬಾಗ್ ಬಂಡೆಯಿಂದಲೇ ಬೆಂಗಳೂರು ರಕ್ಷಣೆ! ಸುರಂಗ ರಸ್ತೆ ನಿರ್ಮಾಣಕ್ಕೆ ಅಸಮಾಧಾನ, ತಜ್ಞರು ಹೇಳಿದ್ದೇನು ನೋಡಿ
ಒಟ್ಟಿನಲ್ಲಿ, ಸ್ಯಾಂಕಿ ಕೆರೆಯ ಬಳಿ ಟನಲ್ ರೋಡ್ ಎಕ್ಸಿಟ್ ರ್ಯಾಂಪ್ ನಿರ್ಮಿಸುವ ಬಗ್ಗೆ ಡಿಪಿಆರ್ನಲ್ಲಿ ಮಾಹಿತಿಯೇ ನೀಡಿಲ್ಲ ಎನ್ನಲಾಗುತ್ತಿದೆ. ಕೆರೆಯ ಬಳಿ ಎಕ್ಸಿಟ್ ರ್ಯಾಂಪ್ ಬರಲಿದೆಯೇ? ಇಲ್ಲವೇ? ಎಂಬುದನ್ನು ಸರ್ಕಾರವೇ ಸ್ಪಷ್ಟಪಡಿಸಬೇಕಿದೆ.



