ಕೆಆರ್ ಸರ್ಕಲ್ ಅಂಡರ್‌ಪಾಸ್‌ ದುರ್ಘಟನೆ: 1 ಜೀವ ಬಲಿಯಾಗಿ 5 ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ ನವೀಕರಣ ಕಾಮಗಾರಿ

|

Updated on: Oct 17, 2023 | 8:10 AM

ಬೆಂಗಳೂರಿನ ಕೆಆರ್ ಸರ್ಕಲ್ ಅಂಡರ್‌ಪಾಸ್‌ ದುರ್ಘಟನೆಯಲ್ಲಿ 1 ಜೀವ ಬಲಿಯಾಗಿ 5 ತಿಂಗಳು ಕಳೆದರೂ ಇನ್ನೂ ಕೂಡ ನವೀಕರಣ ಕಾಮಗಾರಿ ಪೂರ್ಣಗೊಂಡಿಲ್ಲ. ದಿನಗಳು, ತಿಂಗಳುಗಳು ಕಳೆದರೂ ಕೆಲಸ ನಿಧಾನವಾಗಿ ಸಾಗುತ್ತಿದೆ.

ಕೆಆರ್ ಸರ್ಕಲ್ ಅಂಡರ್‌ಪಾಸ್‌ ದುರ್ಘಟನೆ: 1 ಜೀವ ಬಲಿಯಾಗಿ 5 ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ ನವೀಕರಣ ಕಾಮಗಾರಿ
ಕೆಆರ್ ಸರ್ಕಲ್ ಅಂಡರ್‌ಪಾಸ್‌ ದುರ್ಘಟನೆ
Follow us on

ಬೆಂಗಳೂರು, ಅ.17: ಐದು ತಿಂಗಳ ಹಿಂದೆ, ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ (KR Circle Underpass) ಮಳೆ ನೀರು ತುಂಬಿಕೊಂಡ ಹಿನ್ನೆಲೆ ಕಾರ್​ನಲ್ಲಿ ಸಿಲುಕಿ 22 ವರ್ಷದ ಯುವತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದರು (Bengaluru Rain). ಈ ಘಟನೆಯಿಂದ ಕಳಪೆ ಕಾಮಗಾರಿ ಬಹಿರಂಗವಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯ, ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಭಾರಿ ಚರ್ಚೆಯಾಗಿತ್ತು. ಆದರೆ ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಈಗಲೂ ಸ್ಥಿತಿ ಹಾಗೇ ಇದೆ. ಏನು ಬದಲಾಗಿಲ್ಲ. ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ.

ಈ ಘಟನೆ ನಂತರ, ಎಚ್ಚೆತ್ತ ಅಧಿಕಾರಿಗಳು 71 ಅಂಡರ್‌ಪಾಸ್‌ಗಳನ್ನು ಪರಿಶೋಧನೆ ಮಾಡಿದರು. ಅವುಗಳಲ್ಲಿ ಮೂರು ಅಂಡರ್ ಪಾಸ್​ಗಳು ಮಳೆಯ ಸಮಯದಲ್ಲಿ ಜನರಿಗೆ ಸಾವಿನ ದಾರಿ ತೋರಿಸುವಂತಿದ್ದವು. ಅವಘಡ ತಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾದರು. ಕೆಆರ್ ಸರ್ಕಲ್ ಮತ್ತು ಲೆ ಮೆರಿಡಿಯನ್ ಬಳಿ BBMP ಎರಡು ಕೆಳಸೇತುವೆಗಳ ಕೆಲಸವನ್ನು ಪ್ರಾರಂಭಿಸಿತು. ಇದಕ್ಕೆ ಒಂದು ತಿಂಗಳ ಗಡುವು ನೀಡಲಾಗಿತ್ತು. ಆದರೆ ಈ ಕೆಲಸ ಅಪೂರ್ಣವಾಗಿಯೇ ಉಳಿದಿದೆ. ದಿನಗಳು, ತಿಂಗಳುಗಳು ಕಳೆದರೂ ಕೆಲಸ ನಿಧಾನವಾಗಿ ಸಾಗುತ್ತಿದೆ.

ಕನ್ನಿಂಗ್‌ಹ್ಯಾಮ್ ರಸ್ತೆಯಿಂದ ಸ್ಯಾಂಕಿ ರಸ್ತೆಗೆ ಸಂಪರ್ಕ ಕಲ್ಪಿಸುವ ಲೆ ಮೆರಿಡಿಯನ್ ಅಂಡರ್‌ಪಾಸ್​ನಲ್ಲಿ ಮಳೆ ಸಮಯದಲ್ಲಿ ಪ್ರವಾಹದ ಪರಿಸ್ಥಿತಿ ಬರದಂತೆ ನೋಡಿಕೊಳ್ಳಲು ಸೇತುವೆಗೆ ಮೇಲ್ಛಾವಣಿಯ ಹೊದಿಕೆಯನ್ನು ಹಾಕಬೇಕಿತ್ತು. ಸದ್ಯ ಕನ್ನಿಂಗ್‌ಹ್ಯಾಮ್ ರಸ್ತೆ ಬದಿಯಲ್ಲಿ ಮೇಲ್ಛಾವಣಿಯ ಕವರ್ ಶೀಟ್‌ಗಳನ್ನು ಸರಿಪಡಿಸಲಾಗಿದೆ ಮತ್ತು ಸ್ಯಾಂಕಿ ರಸ್ತೆ ಬದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವೀಕರಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿಯ ಮತ್ತೊಂದು ಕಳಪೆ ಕಾಮಗಾರಿ ಬಟಾಬಯಲು ಮಾಡಿದ ಮಳೆ: ಲೀ ಮೆರಿಡಿಯನ್ ಅಂಡರ್ ಪಾಸ್ ಬಂದ್

ಮೂಲಗಳ ಪ್ರಕಾರ, ಲೆ ಮೆರಿಡಿಯನ್ ಅಂಡರ್‌ಪಾಸ್‌ನಲ್ಲಿನಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಲು ಸೇತುವೆಯ ಮೇಲ್ಭಾಗ ಮತ್ತು ಕೆಳಕ್ಕೆ ಎರಡೂ ರಾಂಪ್‌ಗಳಲ್ಲಿ ಕಲಾಯಿ ಬಣ್ಣದ ಶೀಟ್​ಗಳನ್ನು ಬಳಸಿ ಶೀಟ್​ಗಳನ್ನು ಅಳವಡಿಸಲು ಪಾಲಿಕೆ ಮುಂದಾಗಿದೆ. ಪ್ರವೇಶ ಮತ್ತು ನಿರ್ಗಮನ ಎರಡೂ ಸ್ಥಳಗಳಲ್ಲಿ ಹಂಪ್‌ಗಳನ್ನು ಸ್ಥಾಪಿಸಲು ಬಿಬಿಎಂಪಿ ಯೋಜಿಸುತ್ತಿದೆ .ಸಿಸಿಟಿವಿ ಕ್ಯಾಮೆರಾ, ವಿದ್ಯುತ್ ದೀಪ ಹಾಗೂ ಮಳೆ ನೀರಿನ ಪ್ರಮಾಣ ತಿಳಿಯಲು ಮೀಟರ್ ಗೇಜ್ ಗಳ ಅಳವಡಿಸಲು ಮುಂದಾಗಿದೆ.

ಪಾಲಿಕೆಯ ಎಂಜಿನಿಯರಿಂಗ್ ವಿಭಾಗವು ಸಿದ್ಧಪಡಿಸಿದ ವರದಿಯ ಪ್ರಕಾರ, ಈ ಅಂಡರ್‌ಪಾಸ್‌ನಲ್ಲಿ ಎರಡು ಡ್ರೈನೇಜ್​ಗಳಿದ್ದು ಅವು ಮಳೆ ನೀರು ಹೋಗಲು ಯಾವುದೇ ಸಂಪರ್ಕ ಹೊಂದಿಲ್ಲ ಎಂದು ತಿಳಿದುಬಂದಿದೆ. ಕೆಲವು ವರ್ಷಗಳ ಹಿಂದೆ ಎರಡೂ ಚರಂಡಿಗಳನ್ನು ಮುಚ್ಚಲಾಗಿದೆ. ಕಳೆದ ಮೂರು ವರ್ಷಗಳಿಂದ, ಅಂಡರ್‌ಪಾಸ್‌ನಿಂದ ನೀರನ್ನು ಪಂಪ್ ಮಾಡುವ ತಾತ್ಕಾಲಿಕ ವ್ಯವಸ್ಥೆ ಜಾರಿಯಲ್ಲಿತ್ತು ಮತ್ತು ಪ್ರತಿ ಮಳೆಯ ನಂತರ ಕೆಲವು ದಿನಗಳವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತಿತ್ತು. ಸದ್ಯ ಈಗ ನಡೆಯುತ್ತಿರುವ ಪುನರಾಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರ ಈ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.

ಕೆ.ಆರ್.ವೃತ್ತದಲ್ಲಿ ಬಿಬಿಎಂಪಿಯು ಅಂಡರ್‌ಪಾಸ್‌ನ ಅಪ್‌ ಅಂಡ್‌ ಡೌನ್‌ ರ್ಯಾಂಪ್‌ಗಳಲ್ಲಿ ಹೊಸ ಡ್ರೈನೇಜ್ ನಿರ್ಮಿಸಿದೆ. ಅಂಡರ್‌ಪಾಸ್‌ಗೆ ನೀರು ನುಗ್ಗುವುದನ್ನು ತಡೆಯಲು ಮಳೆ ನೀರನ್ನು ಹೀರಿಕೊಳ್ಳಲು ಮತ್ತು ಹತ್ತಿರದ ಚರಂಡಿಗೆ ಮಳೆ ನೀರು ಹರಿಸಲು ಎರಡು ಚೇಂಬರ್‌ಗಳನ್ನು ನಿರ್ಮಿಸಲಾಗಿದೆ. ಈ ಹೊಸ ಡ್ರೈನ್‌ಗಳು ಹತ್ತಿರದ SWD ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿವೆ. ಬೂಮ್ ಬ್ಯಾರಿಯರ್ ಅಳವಡಿಕೆ ಇನ್ನೂ ಬಾಕಿ ಇದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:09 am, Tue, 17 October 23