ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಅವಘಡ, 10 ಸಿಬ್ಬಂದಿಗೆ ತೀವ್ರ ಗಾಯ
ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಹಲವು ಸಿಬ್ಬಂದಿಗೆ ಗಾಯಗಳಾಗಿವೆ. ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡದಲ್ಲಿ ಈ ದುರ್ಘಟನೆ ನಡೆದಿದೆ.
ಬೆಂಗಳೂರು, ಆಗಸ್ಟ್ 11: ಬಿಬಿಎಂಪಿ (BBMP) ಕೇಂದ್ರ ಕಚೇರಿಯ ಆವರಣದಲ್ಲಿರುವ ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಘಟನೆಯಲ್ಲಿ 8 ರಿಂದ 10 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ.
ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡದಲ್ಲಿ ಆಕಸ್ಮಿಕವಾಗಿ ಈ ಬೆಂಕಿ ಅವಘಡ ಸಂಭವಿಸಿದೆ. ಘಟನೆ ಸಂಭವಿಸಿ ಅರ್ಧ ಗಂಟೆಯಾದರೂ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಆಗಮಿಸಿಲ್ಲ. ನಂತರ ತಡವಾಗಿ ಬಂದ ಸಿಬ್ಬಂದಿ, ಬೆಂಕಿಯನ್ನು ಸಂಪೂರ್ಣ ನಂದಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ.
ಇದನ್ನೂ ಓದಿ: ಬಿಬಿಎಂಪಿ ಗುತ್ತಿಗೆದಾರರ ಜತೆ ಶಾಸಕ ಆರ್ ಅಶೋಕ್ ಚರ್ಚೆ: ಕಾಂಗ್ರೆಸ್ಗೆ ಸಾಲು ಸಾಲು ಪ್ರಶ್ನೆ
ಬೆಂಕಿ ದುರ್ಘಟನೆಯನ್ನು ಗಾಯಗೊಂಡ ಹತ್ತು ಮಂದಿಯನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಗಂಭೀರವಾಗಿ ಸುಟ್ಟ ಬಿಬಿಎಂಪಿ ನೌಕರನಿಗೆ ಸೆಂಟ್ ಮಾರ್ಥಾಸ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವಿಕ್ಟೋರಿಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಘಟನಾ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಬೆಂಕಿ ಹತ್ತಿಕೊಂಡ ಮಾಹಿತಿ ತಿಳಿದ ತಕ್ಷಣ ಬಿಬಿಎಂಪಿ ನೌಕರರು ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ.
ರಸಾಯನಿಕ ಸ್ಫೋಟದಿಂದ ಘಟನೆ
ಘಟನೆ ಸಂಬಂಧ ಟಿವಿ9 ಜೊತೆ ಮಾತನಾಡಿದ ಪ್ರತ್ಯಕ್ಷದರ್ಶಿಯೊಬ್ಬರು, ಲ್ಯಾಬ್‌ನಲ್ಲಿ ಬೆಂಜೀನ್ ರಸಾಯನಿಕ ಸ್ಫೋಟದಿಂದ ಘಟನೆ ನಡೆದಿದೆ ಎಂದಿದ್ದಾರೆ. ಅಗ್ನಿ ಅವಘಡದಲ್ಲಿ ಏಳು ಜನ ಇಂಜಿನಿಯರ್ಸ್ಗೆ ಬೆಂಕಿ ಹೊತ್ತಿಕೊಂಡಿದೆ. ಈ ಪೈಕಿ 5 ಜನ ಪುರುಷರು ಇಬ್ಬರು ಮಹಿಳಾ ಇಂಜಿನಿಯರ್ಸ್ ಆಗಿದ್ದಾರೆ. ಇಟ್ಟಿಗೆ, ಟಾರ್, ಸೇರಿದಂತೆ ಪ್ರತಿಯೊಂದು ವಸ್ತುಗಳ ಕ್ವಾಲಿಟಿ ಚೆಕ್ ಮಾಡುವ ಗುಣನಿಯಂತ್ರಣ ಪ್ರಯೋಗಾಲಯ ಮತ್ತು ಕಚೇರಿ ಇದಾಗಿದೆ ಎಂದು ಪ್ರತ್ಯಕ್ಷದರ್ಶಿ ಪಕ್ಕದ ರೆಕಾರ್ಡ್ ಸೆಕ್ಷನ್ ಎಆರ್‌ಟಿಓ ಪ್ರೇಮಾಚಾರ ಹೇಳಿದ್ದಾರೆ.
ಬೆಂಗಳೂರಿಗೆ ಹೋದ ನಂತರ ಪರಿಶೀಲನೆ
ಬಿಬಿಎಂಪಿ ಕಚೇರಿಯ ದಾಖಲೆಯ ಕೊಠಡಿಗೆ ಬೆಂಕಿ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾರ್ಟ್ ಸರ್ಕ್ಯೂಟ್ ಬೆಂಕಿ ಬಿದ್ದಿದೆ ಎಂದು ಹೇಳುತ್ತಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಾಯ ಹಿನ್ನೆಲೆ ಬೆಂಗಳೂರಿಗೆ ಹೋಗಿ ಪರಿಶೀಲನೆ ಮಾಡುತ್ತೇನೆ. ನಾವು ಅಲ್ಲಿ ಹೋಗಿ ನೋಡಿದ ಮೇಲೆ ಎಲ್ಲಾ ಗೊತ್ತಾಗುತ್ತದೆ ಎಂದರು.
ಕಟ್ಟಡದಲ್ಲಿ ಮಹತ್ವದ ದಾಖಲೆ ಇದ್ದವು
ಘಟನೆ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾಕೆ, ಏನು ಎಂಬುದು ಈ ಬಗ್ಗೆ ತನಿಖೆ ಮಾಡಬೇಕು. ಯಾವುದೇ ದಾಖಲೆ ಇಲ್ಲದೇ ಏನನ್ನೂ ಹೇಳಲ್ಲ. ಬೆಂಗಳೂರಿಗೆ ಹೋದ ಮೇಲೆ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುತ್ತೇನೆ. ಬಿಬಿಎಂಪಿ ನೌಕರರಿಗೆ ಏನಾಗಿದೆ ಎಂದು ನೋಡುತ್ತೇನೆ. ಸಚಿವ ಭೈರತಿ ಸುರೇಶ್‌ಗೆ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದೇನೆ. ಕಟ್ಟಡದಲ್ಲಿ ಮಹತ್ವದ ದಾಖಲೆ ಇದ್ದವು, ನಾನು ನೋಡಿ ಎಲ್ಲವೂ ಹೇಳುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Fri, 11 August 23