ಬೆಂಗಳೂರು: ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ವಿದ್ಯಾರ್ಥಿ
ವಿಮಾನ ನಿಲ್ದಾಣದಲ್ಲಿ ಆತಂಖದ ಸನ್ನಿವೇಶ ಸೃಷ್ಟಿಸುವುದು, ಹುಸಿ ಬೆದರಿಕೆಗಳನ್ನು ಹಾಕುವುದು, ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸುವಂಥ ಘಟನೆಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇವೆ. ಇದೀಗ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ವಿದ್ಯಾರ್ಥಿಯೊಬ್ಬ ಯತ್ನಿಸಿದ ಬಗ್ಗೆ ವರದಿಯಾಗಿದೆ.
ಬೆಂಗಳೂರು, ಮೇ 2: ಪ್ರಯಾಣದ ವೇಳೆ ವಿಮಾನದ ತುರ್ತು ನಿರ್ಗಮನ (Emergency Door) ಬಾಗಿಲು ತೆರೆಯಲು ಯತ್ನಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ (Engineering Student) ಮೇಲೆ ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರು (Bengaluru Airport Police) ಪ್ರಕರಣ ದಾಖಲಿಸಿ ಬಂಧಿಸಿದ್ದು, ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಏಪ್ರಿಲ್ 29ರಂದು ಸೋಮವಾರ ರಾತ್ರಿ ನಡೆದಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ (IndiGo Frlight) ಬಾಗಿಲು ತೆರೆಯಲು ಯತ್ನಿಸಿದ್ದ 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ, ಪಶ್ಚಿಮ ಬಂಗಾಳದ ಬಂಕುರಾ ಮೂಲದ ಕೌಶಿಕ್ ಕರಣ್ ವಿರುದ್ಧ ಇಂಡಿಗೋ ಏರ್ಲೈನ್ಸ್ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ನಂತರ ಆತನನ್ನು ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದರು.
ಇಂಡಿಗೋದ ವಿಮಾನ ಸಂಖ್ಯೆ 6E-6314 ಏಪ್ರಿಲ್ 29 ರಂದು ಕೋಲ್ಕತ್ತಾದಿಂದ ರಾತ್ರಿ 8.15 ಕ್ಕೆ ಟೇಕ್ ಆಫ್ ಆಗಿತ್ತು. ರಾತ್ರಿ 10.30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ತಲುಪಬೇಕಿತ್ತು. ಆರೋಪಿ ಕರಣ್ಗೆ ಆಸನ ಸಂಖ್ಯೆ 18E ಅನ್ನು ನಿಗದಿಪಡಿಸಲಾಗಿತ್ತು. ಆದರೆ ಆತ ತುರ್ತು ನಿರ್ಗಮನ ಬಾಗಿಲು ಇರುವ ಸೀಟ್ ಸಂಖ್ಯೆ 18F ಅನ್ನು ವಿನಂತಿ ಮಾಡಿ ಪಡೆದುಕೊಂಡಿದ್ದ. ವಿಮಾನವು ಬೆಂಗಳೂರು ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಾಗ ತುರ್ತು ನಿರ್ಗಮನ ಬಾಗಿಲಿನ ಸ್ಟಾರ್ಬೋರ್ಡ್ ಬದಿಯಿಂದ (ಬಲಭಾಗ) ಹ್ಯಾಂಡಲ್ನಲ್ಲಿದ್ದ ಫ್ಲಾಪ್ ಕವರ್ ಅನ್ನು ತೆಗೆದುಹಾಕಿದ್ದಾನೆ. ಆದರೆ, ಕರಣ್ ಬಾಗಿಲು ತೆರೆಯದಂತೆ ಸಿಬ್ಬಂದಿ ತಡೆದಿದ್ದಾರೆ ಎಂದು ಸಿಐಎಸ್ಎಫ್ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ವಿಮಾನದ ಸಿಬ್ಬಂದಿ ಆತನನ್ನು ಇಂಡಿಗೋ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್ಎಫ್ಗೆ ಹಸ್ತಾಂತರಿಸಿದನು. ಏರ್ಲೈನ್ಸ್ ಸಿಬ್ಬಂದಿ ಮಂಗಳವಾರ (ಏಪ್ರಿಲ್ 30) 12.33ಕ್ಕೆ ಆರೋಪಿಯನ್ನು ಕೆಐಎ ಪೊಲೀಸರಿಗೆ ಹಸ್ತಾಂತರಿಸಿದರು. ಈ ವಿಚಾರವಾಗಿ ಇಂಡಿಗೋ ಸಿಬ್ಬಂದಿ ಮೊಹಮ್ಮದ್ ಉಮರ್ ಮಂಗಳವಾರ ಕೆಐಎಗೆ ದೂರು ಸಲ್ಲಿಸಿದ್ದರು.
ಇಂಡಿಗೋ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ‘ಐಪಿಸಿ 1860’ ರ ಸೆಕ್ಷನ್ 336 ರ (ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯಗಳ ಮೂಲಕ ಇತರರ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದಕ್ಕೆ ಸಂಬಂಧಿಸಿದ್ದು) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಪಿಹೆಚ್ಡಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು
ಈ ಹಿಂದೆ ಸಂಸದ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದು ದೇಶ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ, ಪ್ರಮಾದವಶಾತ್ ಆ ರೀತಿ ಆಗಿದೆ ಎಂದು ನಂತರ ಅವರು ಸ್ಪಷ್ಟನೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ