ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರು ಬಳಸಿ ಅಮೆರಿಕಾ ಸಂಸ್ಥೆಗಳಿಗೆ ವಂಚನೆ; ಪೂಜಾರಿ ಅರೆಸ್ಟ್

| Updated By: ಆಯೇಷಾ ಬಾನು

Updated on: Oct 16, 2023 | 12:01 PM

ಆರೋಪಿ ಅರುಣ್ ಕುಮಾರ್, ತಾನು ಸುಧಾ ಮೂರ್ತಿ ಅವರ ಸಂಸ್ಥೆಯ ಸಿಬ್ಬಂದಿ ಎಂದು ಸುಳ್ಳು ಹೇಳಿ USA ನಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ ಹಣವನ್ನು ಸಂಗ್ರಹಿಸಿದ್ದರು.

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರು ಬಳಸಿ ಅಮೆರಿಕಾ ಸಂಸ್ಥೆಗಳಿಗೆ ವಂಚನೆ; ಪೂಜಾರಿ ಅರೆಸ್ಟ್
ಸುಧಾ ಮೂರ್ತಿ
Follow us on

ಬೆಂಗಳೂರು, ಅ.16: ಪರೋಪಕಾರಿ ಗುಣವನ್ನು ಹೊಂದಿರುವ ಇನ್ಫೋಸಿಸ್ ಮುಖ್ಯಸ್ಥೆ ಡಾ ಸುಧಾಮೂರ್ತಿಯವರ (Infosys Sudha Murty) ಹೆಸರು ಬಳಸಿಕೊಂಡು ವಂಚನೆ ಮಾಡಲಾದ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿತ್ತು. ಈಗ ಇದೇ ರೀತಿಯ ಮತ್ತೊಂದು ವಂಚನೆ ಬಯಲಾಗಿದೆ. ಸುಧಾ ಮೂರ್ತಿ ಅವರ ಹೆಸರಿನಲ್ಲಿ ಸುಳ್ಳು ಭರವಸೆ ನೀಡಿ ವಂಚನೆ (Cheating) ಮಾಡಿದ ಆರೋಪದಲ್ಲಿ 34 ವರ್ಷದ ಅರುಣ್ ಕುಮಾರ್ ಎಂಬ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿ ಎಂದರೆ ಈ ಎರಡೂ ಪ್ರಕರಣದ ಹೀಂದೆ ಆರೋಪಿ ಅರುಣ್ ಮಾಸ್ಟರ್ ಮೈಂಡ್ ಇದೆ ಎಂಬುವುದು ಬಯಲಾಗಿದೆ.

ಆರೋಪಿ ಅರುಣ್ ಕುಮಾರ್, ತಾನು ಸುಧಾ ಮೂರ್ತಿ ಅವರ ಸಂಸ್ಥೆಯ ಸಿಬ್ಬಂದಿ ಎಂದು ಸುಳ್ಳು ಹೇಳಿ USA ನಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ ಹಣವನ್ನು ಸಂಗ್ರಹಿಸಿದ್ದರು. ಆರೋಪಿ ಅರುಣ್ ಕುಮಾರ್ ಜನರಿಂದ 5 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಸುಧಾ ಮೂರ್ತಿ ಅವರ ಕಾರ್ಯನಿರ್ವಾಹಕ ಸಹಾಯಕಿ ಮಮತಾ ಸಂಜಯ್ ಅವರು ಸೆಪ್ಟೆಂಬರ್‌ನಲ್ಲಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ರಾಜಾಜಿನಗರದ ನಿವಾಸಿ ಅರುಣ್ ಕುಮಾರ್ ಅವರನ್ನು ಬಂಧಿಸಲಾಗಿದೆ.

ಸುಧಾ ಮೂರ್ತಿಯವರ ಹೆಸರು ಹೇಳಿಕೊಂಡು ವಂಚನೆ ಮಾಡಲಾಗಿರುವ ಎರಡು ಪ್ರಕರಣಗಳು ಬಯಲಾಗಿವೆ. ಮೊದಲು, ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ (ಕೆಕೆಎನ್‌ಸಿ) ತನ್ನ 50 ನೇ ವಾರ್ಷಿಕೋತ್ಸವವನ್ನು ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಿತ್ತು. ಹೀಗಾಗಿ ಏಪ್ರಿಲ್ 25 ರಂದು ಸುಧಾ ಮೂರ್ತಿ ಅವರಿಗೆ ಪತ್ರ ಬರೆದು ಕಾರ್ಯಕ್ರಮಕ್ಕೆ ಹಾಜರಾಗುವಂತೆ ಕೋರಿತ್ತು. ಆದರೆ, ಏಪ್ರಿಲ್ 26 ರಂದು ಸುಧಾ ಮೂರ್ತಿ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲ ವೆಂದು ಉತ್ತರಿಸಿದ್ದರು. ನಂತರ, ಸುಧಾ ಮೂರ್ತಿ ಅವರ ಸಿಬ್ಬಂದಿ ಎಂದು ಹೇಳಿಕೊಳ್ಳುವ ಮಹಿಳೆಯೊಬ್ಬರು ಕೆಕೆಎನ್‌ಸಿ ತಂಡವನ್ನು ಸಂಪರ್ಕಿಸಿ ಸುಧಾ ಮೂರ್ತಿಯವರು ಕಾರ್ಯಕ್ರಮಕ್ಕೆ ಬರುತ್ತಾರೆಂದು ಹೇಳಿ 5 ಲಕ್ಷ ರೂ. ಪಡೆದಿದ್ದರು.

ಇದನ್ನೂ ಓದಿ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರು ಬಳಸಿ ವಂಚನೆ; ಇಬ್ಬರ ವಿರುದ್ಧ ದೂರು ದಾಖಲು

ಎರಡನೇ ಪ್ರಕರಣದಲ್ಲಿ, ಆರೋಪಿ ಅರುಣ್, ಸುಧಾ ಮೂರ್ತಿಯ ಸಿಬ್ಬಂದಿ ಎಂದು ಹೇಳಿ ಅಮೆರಿಕಾದ ಮಿಲ್ಪಿಟಾಸ್‌ನಲ್ಲಿನ ಸಂಸ್ಥೆಯೊಂದು ಆಯೋಜನೆ ಮಾಡಿದ್ದ ಸಮಾರಂಭಕ್ಕೆ ಸುಧಾ ಮೂರ್ತಿಯವರು ಬರುತ್ತಾರೆಂದು ಕೇಳಿ ಹಣ ವಸೂಲಿ ಮಾಡಿದ್ದಾನೆ. ಮೀಟ್ ಆ್ಯಂಡ್ ಗ್ರೀಟ್ ವಿಥ್ ಸುಧಾ ಮೂರ್ತಿ ಎಂಬ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ ಪ್ರತಿ ಟಿಕೆಟ್ ಅನ್ನು 40 ಡಾಲರ್​ಗೆ ಮಾರಾಟ ಮಾಡಿದ್ದಾನೆ. ಜಾಹೀರಾತಿನ ಆಧಾರದ ಮೇಲೆ ಸುಧಾ ಮೂರ್ತಿ ಅವರ ಸಿಬ್ಬಂದಿ ಈ ಬಗ್ಗೆ ತನಿಖೆ ನಡೆಸುವಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನಿಖೆ ವೇಳೆ ಅರುಣ್ ಕುಮಾರ್ ತನ್ನ ಧ್ವನಿಯನ್ನು ಮಹಿಳೆಯಂತೆ ಬದಲಾಯಿಸಿ ಸಂಪರ್ಕಿಸಿ ಹಣ ವಂಚಿಸಿದ್ದಾನೆ ಎಂದು ಬಯಲಾಗಿದ್ದು ಸುಧಾ ಮೂರ್ತಿಯವರ ಹೆಸರು ಬಳಸಿ ಮಾಡಲಾಗಿದ್ದ ಎರಡೂ ವಂಚನೆಗಳ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಅರುಣ್ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ವಂಚನೆ ಪ್ರಕರಣದಲ್ಲಿ ಇನ್ನೆಷ್ಟು ಮಂದಿ ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಅರುಣ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ