Bengaluru NIA Raid: ಶಂಕಿತ ಉಗ್ರ ಅಲಿ ಅಬ್ಬಾಸ್ ಬಂಧನ ಪ್ರಕರಣ; ಮತ್ತೆ ಬೆಂಗಳೂರಿನಲ್ಲಿ ಎನ್​ಐಎ ದಾಳಿ

ಇತ್ತೀಚೆಗೆ ಬೆಂಗಳೂರಿನಲ್ಲಿ ಎನ್​ಐಎ ದಾಳಿ ನಡೆಸಿ ಶಂಕಿತ ಉಗ್ರ ಅಲಿ ಅಬ್ಬಾಸ್​ನನ್ನು ಬಂಧಿಸಿತ್ತು. ಇದರ ಬೆನ್ನಲ್ಲೇ ಮತ್ತೆ ಬೆಂಗಳೂರಿನಲ್ಲಿ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಾಜಿನಗರ, ಪುಲಿಕೇಶಿನಗರ, ಸುಲ್ತಾನ್ ಪಾಳ್ಯ ಸೇರಿದಂತೆ 20ಕ್ಕೂ ಹೆಚ್ಚು ಕಡೆಗಳಲ್ಲಿ ಎನ್​ಐಎ ದಾಳಿ ನಡೆಸಿದೆ.

Bengaluru NIA Raid: ಶಂಕಿತ ಉಗ್ರ ಅಲಿ ಅಬ್ಬಾಸ್ ಬಂಧನ ಪ್ರಕರಣ; ಮತ್ತೆ ಬೆಂಗಳೂರಿನಲ್ಲಿ ಎನ್​ಐಎ ದಾಳಿ
ಬೆಂಗಳೂರಿನ ಹಲವೆಡೆ ಎನ್​ಐಎ ದಾಳಿ (ಸಾಂದರ್ಭಿಕ ಚಿತ್ರ)
Edited By:

Updated on: Dec 18, 2023 | 11:17 AM

ಬೆಂಗಳೂರು, ಡಿ.18: ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru) ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿ ಶಂಕಿತ ಉಗ್ರ ಅಲಿ ಅಬ್ಬಾಸ್​ನನ್ನು ಬಂಧಿಸಿತ್ತು. ಇದೀಗ ಮತ್ತೆ ಎನ್​ಐಎ ಅಧಿಕಾರಿಗಳು ಶಿವಾಜಿನಗರ, ಪುಲಿಕೇಶಿನಗರ, ಸುಲ್ತಾನ್ ಪಾಳ್ಯ, ಆರ್​.ಟಿ.ನಗರ, ಜೆ.ಸಿ.ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ (NIA Raid) ನಡೆಸಿದ್ದಾರೆ.

ಉಗ್ರ ಸಂಘಟನೆ ಐಸಿಸ್ ಜೊತೆ ಸಂಪರ್ಕ ಶಂಕೆ ಹಿನ್ನೆಲೆ ಡಿಸೆಂಬರ್ 9 ರಂದು ಪುಲಿಕೇಶಿನಗರದಲ್ಲಿರುವ ಮೋರ್ ರಸ್ತೆಯ ಅಲಿ ಅಬ್ಬಾಸ್ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಎನ್​ಐಎ, 16 ಲಕ್ಷಕ್ಕೂ ಹೆಚ್ಚು ನಗದು ಹಾಗೂ ಲ್ಯಾಪ್ ಟಾಪ್, ಪೆನ್ ಡ್ರೈವ್ ಜಪ್ತಿ ಮಾಡಿದ್ದರು. ಅದರಂತೆ ಅಲಿ ಅಬ್ಬಾಸ್ ಮೊಬೈಲ್, ಲ್ಯಾಪ್ ಟಾಪ್ ರಿಟ್ರೀವ್ ಮಾಡಲಾಗಿತ್ತು. ಈ ವೇಳೆ ಮಹತ್ವದ ಮಾಹಿತಿ ಕಲೆ ಹಾಕಿದ್ದ ಎನ್​ಐಎ ಅಧಿಕಾರಿಗಳು, ಇಂದು ಮತ್ತೆ ನಗರದ ಹಲವೆಡೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಐಸಿಸ್​​ ಶಂಕಿತ ಉಗ್ರನ ಮನೆ ಮೇಲೆ ಮತ್ತೆ ಎನ್​ಐಎ ದಾಳಿ: ಯಾರು ಈ ಅಬ್ಬಾಸ್ ಅಲಿ?

ಕರ್ನಾಟಕದ ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ 44 ಕಡೆಗಳಲ್ಲಿ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಐಸಿಸ್​ನೊಂದಿಗೆ ಸಂಪರ್ಕದಲ್ಲಿದ್ದ 15 ಶಂಕಿತ ಉಗ್ರರನ್ನು ಬಂಧಿಸಿ, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದ್ದರು. ಅದರಲ್ಲಿ ಐಎಸ್‌ (ಇಸ್ಲಾಮಿಕ್ ಸ್ಟೇಟ್) ಸಂಘಟನೆ ಜೊತೆ ನಂಟು ಹೊಂದಿ ಯುವಕರನ್ನು ಪ್ರಚೋದಿಸುತ್ತಿದ್ದ ಆರೋಪದಡಿ ಮುಂಬೈ ಮೂಲದ ಶಂಕಿತ ಉಗ್ರ ಅಲಿ ಅಬ್ಬಾಸ್ ಮನೆ ಮೇಲೆ ಎನ್‌ಐಎ ದಾಳಿ ನಡೆಸಿ ಬಂಧಿಸಿದ್ದರು.

ಮೂಲತಃ ಮುಂಬೈ ಮೂಲದ ಆಲಿ ಅಬ್ಬಾಸ್ ಪೇಟಿವಾಲ, ಸಾಪ್ಟ್ ವೇರ್ ಉದ್ಯೋಗಿಯಾಗಿದ್ದು‌, ಐಸಿಸ್ ನೊಂದಿಗೆ ಸಂಪರ್ಕ್ ಹೊಂದಿದ್ದ ಎಂದು ತಿಳಿದುಬಂದಿದೆ. ಜೊತೆಗೆ ಈತ ಟ್ಯಾನರಿ ರೋಡ್ ನಲ್ಲಿ ಉರ್ದು ಶಾಲೆ ನಡೆಸ್ತಿದ್ದ. ಈತನ ಪತ್ನಿ ಡಯಾಟಿಕ್ ಹಾಸ್ಪಿಟಲ್ ನಡೆಸುತ್ತಿದ್ದಾಳೆ. ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿ ಶಾಮಾಜ್ ಎಂಬುವರಿಂದ 2018ರಲ್ಲಿ 62 ಲಕ್ಷಕ್ಕೆ ಫ್ಲ್ಯಾಟ್ ಖರೀದಿ ಮಾಡಿದ್ದ ಅಲಿ, ತನ್ನ ಹೆಂಡತಿ ಮಕ್ಕಳು ಹಾಗೂ ತಂದೆ ಜೊತೆ ವಾಸವಿದ್ದನು.

ಬಳ್ಳಾರಿಯಲ್ಲೂ ಎನ್​ಐಎ ದಾಳಿ

ನಿಷೇಧಿತ ಸಂಘಟನೆ ಮತ್ತು ಉಗ್ರರೊಂದಿಗೆ ಗುರುಸಿಕೊಂಡ ಹಿನ್ನೆಲೆ ಬಳ್ಳಾರಿಯಲ್ಲಿ ಎನ್​ಐಎ ತಂಡ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಹಲವರು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಗುಟ್ಟು ಬಿಟ್ಟು ಕೊಡುತ್ತಿಲ್ಲ. ಆದರೆ, ದಾಳಿ ವೇಲೆ ಬಳ್ಳಾರಿ ಪೊಲೀಸರ ಸಹಕಾರ ಮತ್ತು ಭದ್ರತೆ ಪಡೆದು ಎಂಟರಿಂದ ಒಂಬತ್ತು ಕಡೆ ದಾಳಿ ನಡೆಸಲಾಗಿದೆ.

ಕಳೆದ ತಿಂಗಳು ಬಳ್ಳಾರಿಯಲ್ಲಿ ದಾಳಿ ನಡೆಸಿದ್ದ ಎನ್​ಐಎ ಎಂಡ 19 ವರ್ಷದ ಯುವಕನನ್ನ ಬಂಧಿಸಿತ್ತು. ಇದೀಗ ಮತ್ತೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳ ತಂಡ, ಖೋಟಾ ನೋಟಿನ ಲಿಂಕ್, ಮಾದಕ ವಸ್ತುಗಳ ಕಳ್ಳಸಾಗಣೆ, ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವವರ ಮೇಲೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 am, Mon, 18 December 23