ನೈಸ್ ರಸ್ತೆಯಲ್ಲಿ ದೀಪಾಂಜಲಿ ನಗರ ವರೆಗೆ ಪ್ರಾಯೋಗಿಕ ಸಂಚಾರ ಶುರು! ಕೆಂಗೇರಿ ವರೆಗೆ ಟ್ರಾಫಿಕ್‌ಗೆ ಬೀಳಲಿದೆ ಕಡಿವಾಣ
ಬೆಂಗಳೂರಿನ ನೈಸ್ ರಸ್ತೆ ಸಂಪರ್ಕಿಸುವ ದೀಪಾಂಜಲಿ ನಗರ ವರೆಗಿನ 1.5 ಕಿ.ಮೀ. ಹೊಸ ಲಿಂಕ್ ರಸ್ತೆ ಪ್ರಾಯೋಗಿಕ ಸಂಚಾರಕ್ಕೆ ಮುಕ್ತವಾಗಿದೆ. ಇದು ಮೈಸೂರು ರಸ್ತೆ ಹಾಗೂ ಕೆಂಗೇರಿ ಟ್ರಾಫಿಕ್ ಕಡಿಮೆ ಮಾಡಿ, 15-20 ನಿಮಿಷಗಳ ಪ್ರಯಾಣ ಸಮಯ ಉಳಿತಾಯ ಮಾಡಲಿದೆ. ಬನಶಂಕರಿ, ಕನಕಪುರ ರಸ್ತೆಗೆ ಸಂಪರ್ಕ ಸುಧಾರಿಸಿ, ನಗರದ ಪಶ್ಚಿಮ ಭಾಗದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ.

ಬೆಂಗಳೂರು, ಮಾರ್ಚ್ 24: ಬೆಂಗಳೂರಿನ (Bangalore) ಮೈಸೂರು ರಸ್ತೆ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ನೈಸ್ ರಸ್ತೆಯ (NICE Road) ಸಂಪರ್ಕವನ್ನು ಸುಧಾರಿಸುವ, ದೀಪಾಂಜಲಿ ನಗರ ವರೆಗಿನ ಹೊಸ ಲಿಂಕ್ ರಸ್ತೆ ಪ್ರಾಯೋಗಿಕ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹೊಸವಾಗಿ ನಿರ್ಮಿಸಿರುವ ಸುಮಾರು 1.5 ಕಿಮೀ ಉದ್ದದ ಈ ನಾಲ್ಕು ಪಥದ ರಸ್ತೆ ದೀಪಾಂಜಲಿ ನಗರದಿಂದ ಹೊಸಕೆರೆಹಳ್ಳಿ ಭಾಗದವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವು ಬನಶಂಕರಿ 6ನೇ ಹಂತ, ಕನಕಪುರ ರಸ್ತೆ ಹಾಗೂ ಚಲ್ಲಘಟ್ಟ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿಗೆ ಸುಲಭ ಸಂಪರ್ಕ ಒದಗಿಸುತ್ತದೆ.
ಪ್ರಯಾಣ ಸಮಯದಲ್ಲಿ ಭಾರಿ ಉಳಿತಾಯ!
ಈ ಹೊಸ ಲಿಂಕ್ ರಸ್ತೆಯಿಂದ ವಾಹನ ಸವಾರರಿಗೆ ದೊಡ್ಡ ಮಟ್ಟದ ಸಮಯ ಉಳಿತಾಯವಾಗಲಿದೆ. ವಿಶೇಷವಾಗಿ ಮೈಸೂರು ರಸ್ತೆಯತ್ತ ಸಂಚರಿಸುವವರಿಗೆ ಸುಮಾರು 15ರಿಂದ 20 ನಿಮಿಷಗಳವರೆಗೆ ಸಮಯ ಉಳಿಯಲಿದೆ ಎಂದು ಅಂದಾಜಿಸಲಾಗಿದೆ.
ಮೈಸೂರು ರಸ್ತೆ, ಕೆಂಗೇರಿ ಟ್ರಾಫಿಕ್‌ಗೆ ಪರಿಹಾರ
ಇದಕ್ಕೂ ಮೊದಲು ಮೈಸೂರು ರಸ್ತೆ ಮತ್ತು ಕೆಂಗೇರಿ ಭಾಗದಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ವಾಹನ ಸವಾರರಿಗೆ ಈ ಲಿಂಕ್ ರಸ್ತೆ ದೊಡ್ಡ ಮಟ್ಟದ ಪರಿಹಾರ ನೀಡಲಿದೆ. ನೇರ ಹಾಗೂ ಸಿಗ್ನಲ್-ರಹಿತ ಸಂಚಾರಕ್ಕೆ ಅವಕಾಶ ಸಿಗುವುದರಿಂದ ಸಂಚಾರ ಸುಗಮವಾಗಲಿದೆ.
ದೀಪಾಂಕಲಿ ನಗರ ನೈಸ್ ರಸ್ತೆಯ ಪ್ರಮುಖ ಸಂಪರ್ಕ ಮಾರ್ಗಗಳು
- ದೀಪಾಂಜಲಿ ನಗರ
- ಹೊಸಕೆರೆಹಳ್ಳಿ
- ಬನಶಂಕರಿ 6ನೇ ಹಂತ
- ಕನಕಪುರ ರಸ್ತೆ
- ಚಲ್ಲಘಟ್ಟ
ದೀಪಾಂಜಲಿ ನಗರ ನೈಸ್ ರಸ್ತೆಯಿಂದ ಈ ಪ್ರದೇಶಗಳಿಗೆ ಸಂಪರ್ಕ ಸುಲಭವಾಗಲಿದೆ. ಅಷ್ಟೇ ಅಲ್ಲದೆ, ಹೊಸೂರು, ಎಲೆಕ್ಟ್ರಾನಿಕ್ ಸಿಟಿ ಹಾಗೂ ತುಮಕೂರು ರಸ್ತೆಯಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕೂಡ ಮತ್ತಷ್ಟು ಸುಲಭವಾಗಲಿದೆ.
ಶಿಘ್ರದಲ್ಲೇ ಲೋಕಾರ್ಪಣೆ
ಪ್ರಸ್ತುತ ಪ್ರಾಯೋಗಿಕ ಸಂಚಾರಕ್ಕೆ ಮಾತ್ರ ತೆರೆಯಲಾಗಿರುವ ಈ ರಸ್ತೆ, ಶೀಘ್ರದಲ್ಲೇ ಸಂಪೂರ್ಣವಾಗಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಹೊಸ ರಸ್ತೆ ಅಭಿವೃದ್ಧಿಯಿಂದ ನಗರದ ಪಶ್ಚಿಮ ಭಾಗದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್ ನ್ಯೂಸ್: ದ್ವಿಚಕ್ರ ವಾಹನಗಳಿಗೆ ನೈಸ್ ರಸ್ತೆ ಶೀಘ್ರ ಟೋಲ್ ಮುಕ್ತ?
ಒಟ್ಟಿನಲ್ಲಿ, ನೈಸ್ ರಸ್ತೆಯ ಈ ವಿಸ್ತರಣೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಪ್ರಮುಖ ಹೆಜ್ಜೆಯಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 am, Tue, 24 March 26
