
ಬೆಂಗಳೂರು, ಜನವರಿ 10: ನಗರದ ಕೇಂದ್ರ ಭಾಗದಲ್ಲಿ ರಸ್ತೆಬದಿ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪೇ-ಅಂಡ್-ಪಾರ್ಕ್ ಯೋಜನೆಯನ್ನು ನಗರದಾದ್ಯಂತ ವಿಸ್ತರಿಸಲು ಮುಂದಾಗಿದೆ. ಈಗಾಗಲೇ ಸಿಬಿಡಿ ವ್ಯಾಪ್ತಿಯ 23 ರಸ್ತೆಗಳನ್ನು ಈ ಯೋಜನೆಯಡಿ ತಂದಿರುವ ಬೆಂಗಳೂರು ಕೇಂದ್ರ ನಗರ ನಿಗಮವು, ಈ ರಸ್ತೆಗಳಲ್ಲಿ ಮುಂದಿನ ಮೂರು ವರ್ಷಗಳ ಕಾಲ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಖಾಸಗಿ ನಿರ್ವಾಹಕರನ್ನು ನೇಮಿಸುವ ಸಲುವಾಗಿ ಟೆಂಡರ್ ಆಹ್ವಾನಿಸಿದೆ.
ಪೇ-ಅಂಡ್-ಪಾರ್ಕ್ ಯೋಜನೆಗೆ ಆಯ್ಕೆಗೊಂಡಿರುವ ರಸ್ತೆಗಳಲ್ಲಿ ಕಮರ್ಷಿಯಲ್ ಸ್ಟ್ರೀಟ್, ಕೇಂಬ್ರಿಡ್ಜ್ ರಸ್ತೆ, ವುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ಮಗ್ರತ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ಕ್ರೆಸೆಂಟ್ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಸಂಪಿಗೆ ರಸ್ತೆ ಸೇರಿದಂತೆ ಒಟ್ಟು 23 ರಸ್ತೆಗಳು ಸೇರಿವೆ.
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು, ಕೇಂದ್ರ ನಗರ ನಿಗಮ ಆರಂಭಿಸಿರುವ ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಇತರ ನಿಗಮಗಳೂ ಅನುಸರಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಕೇಂದ್ರ ನಗರ ನಿಗಮ ಆಹ್ವಾನಿಸಿದ ಟೆಂಡರ್‌ಗಳ ಬಿಡ್‌ಗಳು ಶೀಘ್ರದಲ್ಲೇ ತೆರೆಯಲಿದ್ದು, ಪ್ರತಿಕ್ರಿಯೆಯ ಆಧಾರದಲ್ಲಿ ಇತರ ನಿಗಮಗಳಲ್ಲೂ ಇದೇ ಮಾದರಿಯ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದರು.
ಈ ಯೋಜನೆಯಿಂದ ರಸ್ತೆಬದಿ ಪಾರ್ಕಿಂಗ್ ಅಸ್ತವ್ಯಸ್ತತೆ ಕಡಿಮೆಯಾಗುವ ಜೊತೆಗೆ ನಗರ ನಿಗಮಗಳಿಗೆ ಹೆಚ್ಚುವರಿ ಆದಾಯವೂ ಲಭ್ಯವಾಗಲಿದೆ. ಅಲ್ಲದೆ, ಪಾರ್ಕಿಂಗ್ ಸ್ಥಳಗಳನ್ನು ವರ್ಚುವಲ್ ರೀತಿಯಲ್ಲಿ ಗುರುತಿಸುವ ಯೋಜನೆಯಿದ್ದು, ನಾಗರಿಕರು ವೆಬ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಪಾರ್ಕಿಂಗ್ ಸ್ಲಾಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಜಿಬಿಎ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:05 am, Sat, 10 January 26