ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಕಿಂಗ್ ಈ ಡಿಟೆಕ್ಟಿವ್ ಡಾಗ್ ಜಿನ್ನಿ! ಬೆಂಗಳೂರು ಪೊಲೀಸರ ಹೆಮ್ಮೆಯ ಶ್ವಾನವಿದು
ಬೆಂಗಳೂರು ಪೊಲೀಸರ ಪತ್ತೆದಾರಿ ಶ್ವಾನವೊಂದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕಿಂಗ್ ಆಗಿರುವ ಈ ‘ಜಿನ್ನಿ’, ಕಳೆದ ತಿಂಗಳಷ್ಟೇ ಮಗು ನಾಪತ್ತೆ ಪ್ರಕರಣ ಒಂದನ್ನು ಸುಲಭವಾಗಿ ಭೇದಿಸಲು ಪೊಲೀಸರಿಗೆ ನೆರವಾಗಿ ಗಮನ ಸೆಳೆದಿತ್ತು. ಬೆಂಗಳೂರು ಪೊಲೀಸರ ಅಚ್ಚುಮೆಚ್ಚಿನ ಶ್ವಾನ ಜಿನ್ನಿ ಕುರಿತು ಇಲ್ಲಿದೆ ಮಾಹಿತಿ.

ಬೆಂಗಳೂರು, ಜನವರಿ 10: ಬೆಂಗಳೂರು (Bangalore) ಪೊಲೀಸ್ ವಿಭಾಗದ ಡಿಟೆಕ್ಟಿವ್ ಡಾಗ್ ‘ಜಿನ್ನಿ’ ಇದೀಗ ತನ್ನ ಅಸಾಧಾರಣ ಪತ್ತೇದಾರಿ ಸಾಮರ್ಥ್ಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬರೋಬ್ಬರಿ 15ಕ್ಕೂ ಹೆಚ್ಚು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿರುವ ಜಿನ್ನಿ, ವಿಶೇಷವಾಗಿ ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆಯ ‘ಕಿಂಗ್’ ಆಗಿ ಗುರುತಿಸಿಕೊಂಡಿದೆ. ಕಳೆದ ಐದು ವರ್ಷಗಳಿಂದ ಬೆಂಗಳೂರು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿನ್ನಿ, ಕಳೆದ ಸುಮಾರು ಒಂದು ವರ್ಷದಿಂದ ಪತ್ತೇದಾರಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಸಂಕೀರ್ಣ ಪ್ರಕರಣಗಳನ್ನೂ ಸುಲಭವಾಗಿ ಬಗೆಹರಿಸುವ ಜಿನ್ನಿಯ ಚುರುಕು ಕಾರ್ಯಕ್ಷಮತೆ ಪೊಲೀಸ್ ಅಧಿಕಾರಿಗಳನ್ನೂ ಅಚ್ಚರಿಗೊಳಿಸಿದೆ.
ಪೊಲೀಸರನ್ನು ನೇರವಾಗಿ ಕೊಲೆ ಆರೋಪಿ ಬಳಿ ಕರೆದೊಯ್ದಿದ್ದ ಜಿನ್ನಿ!
ಇತ್ತೀಚೆಗೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜಿನ್ನಿಯ ಪಾತ್ರ ನಿರ್ಣಾಯಕವಾಗಿತ್ತು. ಕನಕಪುರ ರಸ್ತೆಯ ಮೆಟ್ರೋ ಪಿಲ್ಲರ್ ಸಂಖ್ಯೆ 113ರ ಪಕ್ಕದಲ್ಲಿ ಸುಮಾರು 50 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಯಾರೋ ಕಲ್ಲಿನಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಿದ್ದರಿಂದ, ಆರೋಪಿಯನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.
ಈ ವೇಳೆ ಪತ್ತೇದಾರಿ ಕಾರ್ಯಕ್ಕೆ ಇಳಿದ ಜಿನ್ನಿ, ನೇರವಾಗಿ ಆರೋಪಿಯು ಮಲಗಿದ್ದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿತ್ತು. ಜಿನ್ನಿಯ ಸುಳಿವುಗಳ ಆಧಾರದಲ್ಲಿ ಕೊನೆಗೆ ಆರೋಪಿಯನ್ನು ಬಂಧಿಸಲು ಪೊಲೀಸರು ಯಶಸ್ವಿಯಾದರು. ಈ ಸಾಧನೆಗೆ ಬೆಂಗಳೂರು ಪೊಲೀಸ್ ಆಯುಕ್ತರು ಜಿನ್ನಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
ಮಗು ಕಳ್ಳತನ ಪ್ರಕರಣ ಬಯಲಿಗೆಳೆದಿದ್ದ ಜಿನ್ನಿ
ಇದಲ್ಲದೆ, ಕೆಲ ತಿಂಗಳ ಹಿಂದೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಮಗು ಪ್ರಕರಣದಲ್ಲಿಯೂ ಜಿನ್ನಿ ಮಹತ್ವದ ಪಾತ್ರ ವಹಿಸಿತ್ತು. ಪತ್ತೇದಾರಿ ಶ್ವಾನ ಜಿನ್ನಿಯ ನೆರವಿನಿಂದ ಮಗು ಸುರಕ್ಷಿತವಾಗಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು.
ಇದನ್ನೂ ಓದಿ: ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಮಗು ಮಾಡಿ, 36 ಲಕ್ಷ ರೂ. ತೆಗೆದುಕೊಂಡು ವ್ಯಕ್ತಿ ಪರಾರಿ!
ಸತತ ಯಶಸ್ಸುಗಳಿಂದ ಬೆಂಗಳೂರು ಪೊಲೀಸರಿಂದ ಜಿನ್ನಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಪತ್ತೇದಾರಿ ಶ್ವಾನಗಳು ಅಪರಾಧ ತನಿಖೆಯಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಕ್ಕೆ ಜಿನ್ನಿಯೇ ಜೀವಂತ ಉದಾಹರಣೆ ಆಗಿದೆ.