ಅಕ್ರಮ ಬಾಂಗ್ಲಾ ವಲಸಿಗರ ಕುರಿತ ನಿಮ್ಮ ಕಾಳಜಿ ಕಾಸರಗೋಡಿನ ಕನ್ನಡಿಗರ ಬಗ್ಗೆ ಯಾಕಿಲ್ಲ: ಕಾಂಗ್ರೆಸ್ ಹೈಕಮಾಂಡ್ಗೆ ಅಶೋಕ್ ಪ್ರಶ್ನೆ
ಕೋಗಿಲು ಲೇಔಟ್‌ನಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ತೆರವು ಮಾಡಿದಾಗ ಮಿಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೃದಯ ಈಗ ಮಲಯಾಳ ಭಾಷೆ ಮಸೂದೆ ವಿಚಾರದಲ್ಲಿ ಕಾಸರಗೋಡಿನ ಕನ್ನಡಿಗರಿಗಾಗಿ ಏಕೆ ಮಿಡಿಯುತ್ತಿಲ್ಲ? ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವಾಗ ಇದ್ದ ಕಾಳಜಿ ಕನ್ನಡಿಗರ ಬಗ್ಗೆ ಏಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರು, ಜನವರಿ 10: ಕೇರಳದ ‘ಮಲಯಾಳ ಭಾಷಾ ಮಸೂದೆ 2025’ ಇದರಿಂದ ಕರ್ನಾಟಕದ (Karnataka) ಗಡಿ ಪ್ರದೇಶಗಳ, ವಿಶೇಷವಾಗಿ ಕಾಸರಗೋಡು ಮತ್ತು ಮಂಜೇಶ್ವರದ ಕನ್ನಡ ಮಾಧ್ಯಮ ಶಾಲೆ ಮಕ್ಕಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಗ್ಗೆ ಇರುವ ಕಾಳಜಿ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಕಾಸರಗೋಡು ಕನ್ನಡಿಗರ ಬಗ್ಗೆ ಯಾಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಪ್ರಶ್ನೆ ಮಾಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಅವರು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಪ್ರಿಯಾಂಕ ಗಾಂಧಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸತ್ತರೂ, ವಯನಾಡಿನಲ್ಲಿ ಪ್ರಕೃತಿ ವಿಕೋಪ ಉಂಟಾದರೂ, ಕೇರಳಿಗರ ಪರವಾಗಿ ಕರ್ನಾಟಕ ಸರ್ಕಾರದ ಮೇಲೆ ಸವಾರಿ ಮಾಡುವ ಸಂಸದೆ ಪ್ರಿಯಾಂಕಾ ಗಾಂಧಿ ಅವರು, ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಲಯಾಳಂ ಭಾಷಾ ಮಸೂದೆ -2025ರ ವಿರುದ್ಧ ಧ್ವನಿ ಎತ್ತುವ ಮೂಲಕ ಈಗ ಕನ್ನಡಿಗರ ಪರ ನಿಲ್ಲುತ್ತಾರಾ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ವಿಷಯದಲ್ಲಿ ಕೇರಳದ ಪರ ತೋರಿದ ಕಾಳಜಿಯನ್ನು ಕರ್ನಾಟಕ ಕಾಂಗ್ರೆಸ್ ನಾಯಕರು ಈಗ ಕನ್ನಡಿಗರ ಪರವಾಗಿ ತೋರುತ್ತಾರಾ ಎಂದು ಅವರು ಪ್ರಶ್ನಿಸಿದ್ದಾರೆ.
ಅಶೋಕ್ ಎಕ್ಸ್ ಸಂದೇಶ
ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸತ್ತರೂ, ವಯನಾಡಿನಲ್ಲಿ ಪ್ರಕೃತಿ ವಿಕೋಪ ಉಂಟಾದರೂ, ಕೇರಳಿಗರ ಪರವಾಗಿ ಕರ್ನಾಟಕ ಸರ್ಕಾರದ ಮೇಲೆ ಸವಾರಿ ಮಾಡುವ ಸಂಸದೆ @priyankagandhi ಅವರು, ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಲಯಾಳಂ ಭಾಷಾ ಮಸೂದೆ… pic.twitter.com/saItkUOXPj
— R. Ashoka (@RAshokaBJP) January 10, 2026
ಅಕ್ರಮ ವಲಸಿಗರು ಕರ್ನಾಟಕದ ಭೂಮಿಯನ್ನು ಒತ್ತುವರಿ ಮಾಡಿಕೊಂಡರೂ, ‘ಮಾನವೀಯತೆ’ ದೃಷ್ಟಿಯಿಂದ ಮನೆ ಕೊಡಬೇಕು ಎಂದು ರೋಹಿಂಗ್ಯಗಳು, ಬಾಂಗ್ಲಾದೇಶಿಗಳ ಪರವಾಗಿ ಮಿಡಿಯುವ ಕೆಸಿ ವೇಣುಗೋಪಾಲ್ ಅವರ ಹೃದಯ ಈಗ, ಕಾಸರಗೋಡಿನ ಕನ್ನಡಿಗರ ಪರವಾಗಿ ಮಿಡಿಯುದಿಲ್ಲವೇ? ಕರ್ನಾಟಕದ ಸ್ವಾಭಿಮಾನ, ಆತ್ಮಗೌರವಕ್ಕೆ ಪದೇ ಪದೇ ಧಕ್ಕೆ ತರುತ್ತಿರುವ ಕಾಂಗ್ರೆಸ್ ಪಕ್ಷದ ಕೇರಳ ಪಟಾಲಂ, ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜಕೀಯ ಲಾಭಕ್ಕಾಗಿ, ಯಾರದ್ದೋ ಸ್ವಾರ್ಥಕ್ಕಾಗಿ ಕರ್ನಾಟಕದ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಪದೇ ಪದೇ ಬಲಿ ಕೊಡುತ್ತಿರುವ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವ ದಿನ ಬಹಳ ದೂರವಿಲ್ಲ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೇರಳದ ಮಲಯಾಳ ಭಾಷಾ ಮಸೂದೆಯಲ್ಲೇನಿದೆ? ಕನ್ನಡಿಗರಿಗೆ, ಕನ್ನಡ ಶಾಲೆಗಳಿಗೇಕೆ ಆತಂಕ?
ಕೇರಳದಾದ್ಯಂತ ಮಲಯಾಳವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ‘ಮಲಯಾಳ ಭಾಷಾ ಮಸೂದೆ 2025’ ಇದರಿಂದ ಕಾಸರಗೋಡು ಹಾಗೂ ಮಂಜೇಶ್ವರದ ಕನ್ನಡ ಮಾಧ್ಯಮ ಮಕ್ಕಳ ಮೇಲೆ ಮಲಯಾಳ ಹೇರಿಕೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಆಕ್ಷೇಪಿಸಿದ್ದಾರೆ. ಮಸೂದೆ ಹಿಂಪಡೆಯುವಂತೆ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
