ಪಿಂಕ್ ಲೈನ್ ಮೆಟ್ರೋದಿಂದ ಇತರ ಲೈನ್​ಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಬನ್ನೇರುಘಟ್ಟ ರಸ್ತೆಯಲ್ಲಿ ಟ್ರಾಫಿಕ್ ಇಳಿಕೆ

ನಮ್ಮ ಮೆಟ್ರೋ ಪಿಂಕ್ ಲೈನ್ ಆರಂಭವಾದ ಬಳಿಕ ಮೊದಲ ಸೋಮವಾರವೇ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬನ್ನೇರುಘಟ್ಟ ರಸ್ತೆ ಭಾಗದ ಜನರು ಸ್ವಂತ ವಾಹನಗಳನ್ನು ಬಿಟ್ಟು ಮೆಟ್ರೋ ಏರಿದ್ದು, ಜಯದೇವ ಮತ್ತು ಆರ್.ವಿ. ರಸ್ತೆ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಇದರಿಂದ ಬನ್ನೇರುಘಟ್ಟ ರಸ್ತೆಯ ಟ್ರಾಫಿಕ್ ತುಸು ಕಡಿಮೆಯಾಗಿದೆ.

ಪಿಂಕ್ ಲೈನ್ ಮೆಟ್ರೋದಿಂದ ಇತರ ಲೈನ್​ಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಬನ್ನೇರುಘಟ್ಟ ರಸ್ತೆಯಲ್ಲಿ ಟ್ರಾಫಿಕ್ ಇಳಿಕೆ
ನಮ್ಮ ಮೆಟ್ರೋ ಪಿಂಕ್ ಲೈನ್
Edited By:

Updated on: Nov 17, 2026 | 10:16 AM

ಮುಖ್ಯಾಂಶಗಳು

  • ಪಿಂಕ್ ಲೈನ್‌ಗೆ ಮೊದಲ ಸೋಮವಾರವೇ ಉತ್ತಮ ಸ್ಪಂದನೆ
  • ಜಯದೇವ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳ
  • ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ದಟ್ಟಣೆ ತುಸು ಇಳಿಕೆ

ಬೆಂಗಳೂರು, ನವೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಶುಕ್ರವಾರ ಲೋಕಾರ್ಪಣೆ ಮಾಡಿದ್ದ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಮೊದಲ ಸೋಮವಾರವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರದ ಮೊದಲ ಕೆಲಸದ ದಿನ ಬನ್ನೇರುಘಟ್ಟ ರಸ್ತೆ ಭಾಗದ ಹಲವು ಪ್ರಯಾಣಿಕರು ಸ್ವಂತ ವಾಹನಗಳನ್ನು ಬಿಟ್ಟು ಮೆಟ್ರೋ ಪ್ರಯಾಣಕ್ಕೆ ಮುಂದಾಗಿದ್ದಾರೆ. ಇದರಿಂದ ಪಿಂಕ್ ಲೈನ್ ಮಾತ್ರವಲ್ಲದೆ, ಸಂಪರ್ಕ ಹೊಂದಿರುವ ಯೆಲ್ಲೋ, ಗ್ರೀನ್ ಮತ್ತು ಪರ್ಪಲ್ ಲೈನ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದೆಡೆ, ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ದಟ್ಟಣೆ ತುಸು ಕಡಿಮೆಯಾಗಿದೆ.

ಜಯದೇವ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆ

ಪಿಂಕ್ ಲೈನ್‌ನಿಂದ ಯೆಲ್ಲೋ ಲೈನ್‌ಗೆ ಸಂಪರ್ಕ ಕಲ್ಪಿಸುವ ಜಯದೇವ ಮೆಟ್ರೋ ನಿಲ್ದಾಣ ಹಾಗೂ ಯೆಲ್ಲೋ ಲೈನ್‌ನಿಂದ ಗ್ರೀನ್ ಲೈನ್‌ಗೆ ಇಂಟರ್‌ಚೇಂಜ್ ಆಗುವ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸಿದ್ದಾರೆ. ಪಿಂಕ್ ಲೈನ್ ಆರಂಭವಾಗಿರುವುದರಿಂದ ಸ್ವಂತ ವಾಹನ ಬಳಸುವುದನ್ನು ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದಾಗಿ ಕೆಲ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Loading...

ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ಪ್ರಯಾಣ ಆರಂಭಿಸುವವರು ಜಯದೇವ ನಿಲ್ದಾಣದಲ್ಲಿ ಯೆಲ್ಲೋ ಲೈನ್‌ಗೆ ಬದಲಾಗಿ, ಅಲ್ಲಿಂದ ಆರ್.ವಿ. ರಸ್ತೆ ನಿಲ್ದಾಣದಲ್ಲಿ ಗ್ರೀನ್ ಲೈನ್‌ಗೆ ಸಂಪರ್ಕ ಪಡೆಯಬಹುದು. ಬಳಿಕ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಪರ್ಪಲ್ ಲೈನ್‌ಗೆ ಬದಲಾಗಿ ವೈಟ್‌ಫೀಲ್ಡ್, ಚಲ್ಲಘಟ್ಟ ಸೇರಿದಂತೆ ವಿವಿಧ ಮಾರ್ಗಗಳ ಕೊನೆಯ ನಿಲ್ದಾಣಗಳವರೆಗೂ ಪ್ರಯಾಣಿಸಲು ಸಾಧ್ಯವಾಗಿದೆ. ಮಾದಾವರ, ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಬೊಮ್ಮಸಂದ್ರ ಮಾರ್ಗಗಳಿಗೂ ಮೆಟ್ರೋ ಸಂಪರ್ಕ ಪಡೆಯಬಹುದು.

ಶನಿವಾರ ಒಂದೇ ದಿನ ಪಿಂಕ್ ಲೈನ್‌ನಲ್ಲಿ 33 ಸಾವಿರ ಮಂದಿ ಪ್ರಯಾಣ

ಶನಿವಾರ ಒಂದೇ ದಿನ ಪಿಂಕ್ ಲೈನ್‌ನಲ್ಲಿ 33 ಸಾವಿರ ಪ್ರಯಾಣಿಕರು ಸಂಚರಿಸಿದ್ದಾರೆ. ಈ ಪೈಕಿ ಹೆಚ್ಚಿನ ಪ್ರಯಾಣಿಕರು ಜಯದೇವ ಮೆಟ್ರೋ ನಿಲ್ದಾಣದ ಮೂಲಕ ಯೆಲ್ಲೋ ಲೈನ್‌ಗೆ ಇಂಟರ್‌ಚೇಂಜ್ ಆಗಿದ್ದಾರೆ. ಇನ್ನು ವಾರದ ಮೊದಲ ದಿನವಾದ ಇಂದು ಪಿಂಕ್ ಲೈನ್‌ನಲ್ಲಿ ಒಂದು ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಪೀಕ್ ಅವರ್‌ನಲ್ಲಿ 8 ನಿಮಿಷಕ್ಕೊಮ್ಮೆ ಹಾಗೂ ನಾನ್‌ಪೀಕ್ ಅವರ್‌ನಲ್ಲಿ 10 ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಸಂಚರಿಸಿವೆ.

ಇದನ್ನೂ ಓದಿ: ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ: 33,409 ಜನರಿಂದ ಸಂಚಾರ

ಒಟ್ಟಿನಲ್ಲಿ ಪಿಂಕ್ ಲೈನ್ ಆರಂಭದಿಂದ ಬನ್ನೇರುಘಟ್ಟ ರಸ್ತೆ ಭಾಗದ ಜನರಿಗೆ ಮೆಟ್ರೋ ಪ್ರಯಾಣದ ಹೊಸ ಆಯ್ಕೆ ಸಿಕ್ಕಿದ್ದು, ಮೊದಲ ಸೋಮವಾರವೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us